ಭಾನುವಾರ, ಸೆಪ್ಟೆಂಬರ್ 19, 2021
23 °C
ನಾರಾಯಣಪುರ ಜಲಾಶಯದ ಹೊರಹರಿವು ಹೆಚ್ಚಳ

ಕೃಷ್ಣಾ ನದಿತೀರದಲ್ಲಿ ಎನ್‌ಡಿಆರ್‌ಎಫ್‌ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷ್ಣಾನದಿ ಪ್ರವಾಹ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರಿಂದ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತವು ಹಗಲಿರುಳು ಕಟ್ಟೆಚ್ಚರದ ವ್ಯವಸ್ಥೆ ಮಾಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ (ಎನ್‌ಡಿಆರ್‌ಎಫ್‌)ಗಳು ಜಿಲ್ಲೆಗೆ ಬಂದಿದ್ದು, ಲಿಂಗಸುಗೂರು ತಾಲ್ಲೂಕಿನ ಜಲದುರ್ಗ, ರಾಯಚೂರು ತಾಲ್ಲೂಕಿನ ಕುರ್ವಕಲಾ ಹಾಗೂ ದೇವದುರ್ಗ ತಾಲ್ಲೂಕಿನ ನದಿತೀರದಲ್ಲಿ ನಿಗಾ ವಹಿಸಿದ್ದಾರೆ. ಪ್ರವಾಹವು ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಅರಿತು ತಂಡಗಳು ಕಾರ್ಯಪ್ರವೃತ್ತವಾಗಲಿವೆ.

‍ಪ್ರವಾಹಮಟ್ಟವು ಸದ್ಯ 3.7 ಲಕ್ಷ ಕ್ಯುಸೆಕ್‌ ಇದ್ದು, 5 ಲಕ್ಷದವರೆಗೂ ಏರಿಕೆಯಾದರೆ ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಈಗಾಗಲೇ ಜಿಲ್ಲಾಡಳಿತದ ಅಧಿಕಾರಿಗಳು ನಡುಗಡ್ಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲು ಮನವರಿಕೆ ಮಾಡುವ ಕೆಲಸ ಆರಂಭಿಸಿದ್ದಾರೆ. ಅಲ್ಲದೆ, ಅಗತ್ಯ ದಿನಸಿ ವಸ್ತುಗಳನ್ನು ಪೂರೈಸಲು ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆಯು ಶನಿವಾರ ಮುಳುಗಡೆಯಾಗಿದೆ. ಮುನ್ನೆಚ್ಚರಿಕೆಯಿಂದ ಶುಕ್ರವಾರ ಸಂಜೆಯಿಂದಲೇ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕಲಬುರ್ಗಿ- ರಾಯಚೂರು ಮಧ್ಯೆ ಸರ್ಕಾರಿ ಬಸ್‌ಗಳು ಸಂಚರಿಸುವ ಪ್ರಮುಖ ಮಾರ್ಗ ಇದಾಗಿತ್ತು. ಇದೀಗ 40 ಕಿಲೋ ಮೀಟರ್ ಸುತ್ತುವರಿದು ತಿಂಥಣಿ ಬ್ರಿಡ್ಜ್ ಮೂಲಕ ಕಲಬುರ್ಗಿಯಿಂದ ರಾಯಚೂರಿಗೆ ಸಂಚರಿಸಬೇಕಿದೆ.

ಖಾಸಗಿ ವಾಹನಗಳು ಕಲಬುರ್ಗಿಯಿಂದ ಯಾದಗಿರಿ, ಶಕ್ತಿನಗರ ಮೂಲಕ ರಾಯಚೂರು ತಲುಪಲು ಅನುಕೂಲವಿದೆ. ಆದರೆ, ಸರ್ಕಾರಿ ಬಸ್ ಗಳು ಈ ಮಾರ್ಗದಲ್ಲಿ ಹೆಚ್ಚವರಿ ಸಂಚರಿಸಲು ತೆಲಂಗಾಣ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಶಕ್ತಿನಗರ ಪಕ್ಕದ ದೇವುಸುಗೂರು ಸೇತುವೆ ಎರಡು ರಾಜ್ಯಗಳ ಗಡಿಭಾಗದಲ್ಲಿದೆ.

ರಾಯಚೂರು ತಾಲ್ಲೂಕಿನ ಕುರ್ವಕಲಾ, ಕುರವಕುರ್ದಾ ನಡುಗಡ್ಡೆ ಗ್ರಾಮಗಳ ಜನರು ನದಿ ದಾಟುವುದಕ್ಕಾಗಿ ತೆಪ್ಪಗಳನ್ನು ಬಳಕೆ ಮಾಡುತ್ತಿದ್ದರು. ಇದೀಗ ನದಿ ಪ್ರವಾಹವು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತೆಪ್ಪಗಳನ್ನು ಇಳಿಸುವುದಕ್ಕೆ ನಿರ್ಬಂಧಿಸಲಾಗಿದೆ.

ಇದರಿಂದ ನಡುಗಡ್ಡೆ ಜನರ ಸಂಪರ್ಕ ಕಡಿತಗೊಂಡಿದೆ. ಈ ಹಿಂದೆ 2009 ಹಾಗೂ 2019 ರಲ್ಲಿ ಕೃಷ್ಣಾ ಪ್ರವಾಹ ಮಟ್ಟ 9.5 ಲಕ್ಷ ಕ್ಯುಸೆಕ್‌ವರೆಗೂ ಏರಿಕೆ ಆಗಿದ್ದರೂ ಈ ನಡುಗಡ್ಡೆಗಳು ಜನವಸತಿಗಳು ಮುಳುಗಡೆ ಆಗಿರಲಿಲ್ಲ. ಆದರೆ, ಸತತ ಸುರಿಯುತ್ತಿದ್ದ ಮಳೆಯಿಂದಾಗಿ 2009 ರಲ್ಲಿ ನಡುಗಡ್ಡೆ ಜನರು ಸಂಕಷ್ಟ ಅನುಭವಿಸಿದ್ದರು. ದಿಢೀರ್‌ ಯಾರಿಗಾದರೂ ಅನಾರೋಗ್ಯದ ಸಮಸ್ಯೆಯಾದರೆ ಚಿಕಿತ್ಸೆ ಪಡೆಯುವುದಕ್ಕೆ ಅಲ್ಲಿಂದ ಹೊರಬರುವುದಕ್ಕೆ ಆಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು