ರಾಯಚೂರು: ‘ರಾಜಶೇಖರ ನೀರಮಾನ್ವಿ ಸಾಹಿತ್ಯ ಲೋಕದ ಶ್ರೇಷ್ಠ ಕಥೆಗಾರ’ ಎಂದು ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಬಣ್ಣಿಸಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವತಿಯಿಂದ ಆಯೋಜಿಸಿದ್ದ ಕಥೆಗಾರ ರಾಜಶೇಖರ ನೀರಮಾನ್ವಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರಳ ಸಜ್ಜನಿಕೆಯ ಮತ್ತು ಮಿತ ಭಾಷೆಯ ವ್ಯಕ್ತಿತ್ವದ ಹಿರಿಯ ಜೀವ ಕಣ್ಮರೆಯಾಗಿದೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ’ ಎಂದು ಹೇಳಿದರು.
‘ಕನ್ನಡ ನಾಡಿಗೆ ಶ್ರೇಷ್ಠ ಕಥೆಗಳನ್ನು ಕೊಟ್ಟು ರಾಯಚೂರು ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟ ರಾಜಶೇಖರ ನೀರಮಾನ್ವಿ ಅವರು, ಕಡಿಮೆ ಕೃತಿಗಳನ್ನು ಬರೆದರೂ ಮೌಲಿಕ ಸಾಹಿತ್ಯವನ್ನು ನೀಡಿದವರು. ಅವರ ಕಥಾ ಸಂಕಲನಗಳು ಪ್ರಧಾನವಾಗಿ ಆಧುನಿಕ ಬದುಕಿನ ತಲ್ಲಣ ಸಾಮಾಜಿಕ ಸ್ಥಿತಿ ಮನುಷ್ಯ ಸಂಬಂಧಗಳು ಹುಡುಕಾಟ ತಣ್ಣನೆಯ ಪ್ರತಿರೋಧಗಳು ಅವರ ಕಥೆಗಳಲ್ಲಿ ಇದ್ದವು. ಅವರ ಶ್ರೇಷ್ಠ ಕಥೆಗಳು ಭಾರತದ ಇತರ ಭಾಷೆಗಳಿಗೆ ಅನುವಾದಗೊಂಡಿವೆ ಎಂದು ಹೇಳಲು ಹರ್ಷವೆನಿಸುತ್ತದೆ’ ಎಂದು ತಿಳಿಸಿದರು.
ಹಿರಿಯ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ‘ಶಾಂತರಸ, ಜಂಬಣ್ಣ ಅಮರಚಿಂತಾ ಅವರ ಸಮಕಾಲಿನರಾದ ಇವರು ಉತ್ತಮ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಅಗಲಿಕೆ ನಮ್ಮೆಲ್ಲರಿಗೆ ನೋವು ತಂದಿದೆ’ ಎಂದರು.