ಗುರುವಾರ , ಮೇ 19, 2022
22 °C

ಅಗ್ನಿ ಅನಾಹುತಗಳಿಗೆ ನಿರ್ಲಕ್ಷ್ಯವೇ ಕಾರಣ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಅಗ್ನಿ ಅವಘಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಹಲವು ಕಾರಣಗಳಿವೆ.

ಅಗ್ನಿ ಅನಾಹುತಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸುವುದಿಲ್ಲ. ಮುಖ್ಯವಾಗಿ ವಿದ್ಯುತ್ ತಂತಿಗಳನ್ನು ನಿರ್ಲಕ್ಷಿಸಿ ಬಣಿವೆ ಹಾಕುವುದು, ಟ್ರ್ಯಾಕ್ಟರ್‌ಗಳಲ್ಲಿ ಅತಿ ಎತ್ತರ ಮೇವು ತುಂಬಿಸುವುದು, ಧೂಮಪಾನ ಮಾಡಿದವರು ಸರಿಯಾಗಿ ನಂದಿಸದೆ ಎಸೆಯುವುದು, ಎಲ್‌ಪಿಜಿ ಸಿಲಿಂಡರ್ ಬಳಕೆ ಬಗ್ಗೆ ಸರಿಯಾದ ಮಾಹಿತಿ ಕೊರತೆ... ಹೀಗೆ ಅನೇಕ ಕಾರಣಗಳಿಂದ ಬೆಂಕಿ ಅವಘಡಗಳು ಹೆಚ್ಚಳವಾಗಿವೆ.

ಜಿಲ್ಲೆಯಲ್ಲಿ 2021ರಲ್ಲಿ 774 ಬೆಂಕಿ ಅವಘಡಗಳು ಸಂಭವಿಸಿವೆ. 2022ನೇ ಸಾಲಿನಲ್ಲಿ ಜನವರಿಯಿಂದ ಮೇ 5ರವರೆಗೂ 404 ಅಗ್ನಿ ಅವಘಢಗಳು ಸಂಭವಿಸಿವೆ. ವರ್ಷಾಂತ್ಯದೊಳಗೆ ಈ ಅಂಕಿಗಳು ಏರಿಕೆಯಾಗಲಿವೆ. ಗ್ರಾಮೀಣ ಭಾಗಗಳಲ್ಲಿ ತಿಪ್ಪೆ, ಬಣಿವೆ ಹಾಗೂ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸುವ ಘಟನೆಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.

ನಗರ ಹಾಗೂ ಪಟ್ಟಣಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗುವುದು, ಬೀಡಿ, ಸಿಗರೇಟ್ ಸೇದಿ ಬಿಸಾಕಿದ ಜಾಗಗಳಲ್ಲಿ ಹಾಗೂ ಅಡುಗೆ ಅನಿಲನು ಸಮರ್ಪಕವಾಗಿ ಬಳಸದಿರುವುದು ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ. ಬಹುತೇಕ ಘಟನೆಗಳಿಗೆ ನಿರ್ಲಕ್ಷ್ಯವೇ ಕಾರಣವಾಗಿದೆ.

ಅಗ್ನಿ ಅವಘಡ ಮಾಹಿತಿ ಲಭ್ಯವಾದ ಕೂಡಲೇ ಅಗ್ನಿಶಾಮಕ ದಳದವರು ಧಾವಿಸಿ ಹೆಚ್ಚು ಹಾನಿಯಾಗುವುದನ್ನು ತಪ್ಪಿಸಲು ಕಾರ್ಯಾಚರಣೆಗೆ ಇಳಿಯುತ್ತಾರೆ. ಹೊಸ ತಾಲ್ಲೂಕುಗಳನ್ನು ಹೊರತುಪಡಿಸಿ ಇನ್ನುಳಿದ ಐದು ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರ ಅರಕೇರಾದಲ್ಲಿ ಸೇರಿ ಒಟ್ಟು ಆರು ಕಡೆ ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಮಂಜೂರಾದ  182 ಪೈಕಿ 152 ಹುದ್ದೆಗಳು ಭರ್ತಿಯಾಗಿವೆ.

ನೀರಿನ ಅವಘಡಗಳು: ಜಿಲ್ಲೆಯಲ್ಲಿ ಪ್ರತಿವರ್ಷವೂ ಕೃಷ್ಣಾನದಿ ಪ್ರವಾಹ ವಿಪತ್ತು ನಿರ್ವಹಣೆಯಲ್ಲಿ ಅಗ್ನಿಶಾಮಕ ತಂಡ ಮುಂಚೂಣಿಯಲ್ಲಿದ್ದು ರಕ್ಷಣಾ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಲಿಂಗಸುಗೂರು, ದೇವದುರ್ಗ ತಾಲ್ಲೂಕು ಗಳಲ್ಲಿ ಏಕಾಏಕಿ ಪ್ರವಾಹ ಬಂದಿದ್ದರಿಂದ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಳು ಮತ್ತು ಜನರನ್ನು ಸುರಕ್ಷಿತ ತಾಣಕ್ಕೆ ತಲುಪಿಸಿದ್ದರು. ಎನ್‌ಡಿಆರ್‌ಎಫ್ ತಂಡ ಬರುವ ಮುಂಚೆಯೇ ಅಗ್ನಿಶಾಮಕ ತಂಡವು ಪ್ರವಾಹ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುತ್ತದೆ.

ಕಾಲುವೆಗಳಲ್ಲಿ, ಹಳ್ಳ ಹಾಗೂ ಕೆರೆಗಳಲ್ಲಿ ಜೀವಹಾನಿಯಾದಾಗ ಸ್ಥಳಕ್ಕೆ ಅಗ್ನಿಶಾಮಕ ತಂಡ ಧಾವಿಸಿ ನೆರವಾ ಗುತ್ತದೆ. ಕಂಬ ಏರಿ ಕುಳಿತುಕೊಳ್ಳುವ ಭೂಪರನ್ನು ಕೆಳಗೆ ತರುವ ಕಾರ್ಯವನ್ನೂ ಈ ತಂಡ ಮಾಡುತ್ತದೆ.

ಬಣವೆಗಳೇ ಹೆಚ್ಚು ಆಹುತಿ

ಸಿಂಧನೂರು: ಕಳೆದ ಒಂದೂವರೆ ವರ್ಷದಲ್ಲಿ ನಡೆದಿರುವ ಅನೇಕ ಅಗ್ನಿ ಅವಘಡಗಳಲ್ಲಿ ರೈತರು ಸಂಗ್ರಹಿಸಿದ ಬಣವೆಗಳೇ ಹೆಚ್ಚು ಪ್ರಮಾಣದಲ್ಲಿ ಆಹುತಿಯಾಗಿರುವುದು ಅಗ್ನಿಶಾಮಕ ದಳದ ಠಾಣೆಯಲ್ಲಿ ವರದಿಯಾಗಿದೆ.
ಸಿಂಧನೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 2021ರಲ್ಲಿ ನಡೆದಿರುವ ಒಟ್ಟು 112 ಅಗ್ನಿ ಅವಘಡಗಳಲ್ಲಿ 87 ಬಣವೆ, 8 ಗುಡಿಸಲು ಮತ್ತು 7 ಸಿಲಿಂಡರ್ ಸ್ಪೋಟ ಪ್ರಕರಣಗಳಾಗಿವೆ. ರಕ್ಷಣಾ ಕರೆಗಳಲ್ಲಿ ಎಲೆಕೂಡ್ಲಿಗಿಯಲ್ಲಿ ಟಾಟಾಏಸ್ ರಸ್ತೆ ಅಪಘಾತ ಸಂಭವಿಸಿದಾಗ 7 ಜನರ ರಕ್ಷಣೆ, ಮಸ್ಕಿ ರಸ್ತೆ ಮಾರ್ಗದಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗುಂಡಿಯಲ್ಲಿ ಬಿದ್ದಿದ್ದ ಆಕಳು ರಕ್ಷಣೆ, ಮಸ್ಕಿ ಮುಖ್ಯ ಕಾಲುವೆಯಲ್ಲಿ ಬಿದಿದ್ದ ವ್ಯಕ್ತಿಯ ಮೃತದೇಹ ಪತ್ತೆ ಮಾಡಲಾಗಿದೆ.
2022ರ ಜನವರಿಯಿಂದ ಮೇ 1ರ ವರೆಗೆ ಒಟ್ಟು 55 ಅಗ್ನಿ ಅವಘಡಗಳಾಗಿದ್ದು, 44 ಬಣವೆಗಳು, 3 ಗುಡಿಸಲು ಹಾಗೂ 8 ಸಿಲಿಂಡರ್ ಸ್ಪೋಟ ಸಂಭವಿಸಿವೆ. ರಕ್ಷಣಾ ಕರೆಯಲ್ಲಿ ಕುನ್ನಟಗಿ ಕ್ಯಾಂಪ್‍ನಲ್ಲಿ ಕೆರೆಯಲ್ಲಿ ಬಿದಿದ್ದ ಯುವಕನ ಮೃತದೇಹ ಪತ್ತೆ ಕಾರ್ಯ ಮಾಡಲಾಗಿದೆ. ಕಳೆದ ವರ್ಷ 18 ಮತ್ತು ಈ ವರ್ಷದ ಐದು ತಿಂಗಳಲ್ಲಿ 13 ಬಾರಿ ಶಾಲಾ-ಕಾಲೇಜು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ರಬ್ಬರ್ ಬೋಟ್‌ಗೆ ಬೇಡಿಕೆ

ರಾಯಚೂರು ತಾಲ್ಲೂಕಿನ ಪ್ರವಾಹ ನಿರ್ವಹಣೆಗಾಗಿ ಒಬಿಎಂ ಜೊತೆಗಿನ ಮೂರು ರಬ್ಬರ್‌ ಬೋಟ್‌ಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಿಗೆ ಒದಗಿಸಿದ್ದು, ಇನ್ನೂ ರಾಯಚೂರಿಗೆ ಕೊಡುವುದು ಬಾಕಿ ಇದೆ.
ಜಿಲ್ಲಾ ಕೇಂದ್ರದ ಅಗ್ನಿಶಾಮಕ ಠಾಣೆಯಲ್ಲಿ ಸದ್ಯ ಐದು ವಾಹನಗಳಿವೆ. ಒಂದು ಅತ್ಯಾಧುನಿಕ ವಿಪತ್ತು ನಿರ್ವಹಣಾ ವಾಹನವಿದೆ. ಮಾನ್ವಿಯಲ್ಲಿ ಮೂರು, ಸಿಂಧನೂರಿನಲ್ಲಿ ಮೂರು, ಲಿಂಗಸುಗೂರು, ದೇವದುರ್ಗ ಎರಡು, ಅರಕೇರಾದಲ್ಲಿ ಒಂದು ನೀರು ಸಿಂಪರಣೆ ವಾಹನಗಳಿವೆ.

ತೆರೆಯದ ಅಗ್ನಿ ಶಾಮಕ ಠಾಣೆ
ಸಿರವಾರ: ತಾಲ್ಲೂಕು ಕೇಂದ್ರವಾಗಿ ಐದು ವರ್ಷ ಕಳೆದರೂ ಅಗ್ನಿ ಶಾಮಕ ದಳದ ಠಾಣೆ ತೆರೆಯದ ಕಾರಣ ತಾಲ್ಲೂಕಿನಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿದರೆ ಸ್ಥಳಕ್ಕೆ ಬೇರೆಡೆಯಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವುದರೊಳಗೆ ಸಂಪೂರ್ಣವಾಗಿ ಭಸ್ಮವಾದ ಘಟನೆಗಳು ಹೆಚ್ಚಾಗಿ ಸಂಭವಿಸಿವೆ.
ತಾಲ್ಲೂಕಿನಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿದರೆ ದೇವದುರ್ಗಾ ತಾಲ್ಲೂಕಿನ ಅರಕೇರಾ ಅಥವಾ ಮಾನ್ವಿಯಿಂದದಿಂದಲೇ ಅಗ್ನಿ ಶಾಮಕ ದಳ ಬರಬೇಕು. ಸಿರವಾರದಿಂದ ಅರಕೇರಾ 14 ಕಿಮಿ ದೂರ, ಮಾನ್ವಿ 26 ಕಿ.ಮೀ ದೂರವಿದೆ.

ಅಗ್ನಿಶಾಮಕ ಠಾಣೆ ವಂಚಿತ ಮಸ್ಕಿ ತಾಲ್ಲೂಕು
ಮಸ್ಕಿ: ಮಸ್ಕಿ ಪಟ್ಟಣದಲ್ಲಿ ಇದುವರೆಗೂ ಸರ್ಕಾರ ಅಗ್ನಿ‌ಶಾಮಕ ಠಾಣೆ ಮಂಜೂರಾಗಿಲ್ಲ. ದಶಕಗಳಿಂದ ಆಗ್ನಿ ಶಾಮಕ ಠಾಣೆ ಮುಂಜೂರು ಮಾಡಬೇಕು ಎಂಬ ತಾಲ್ಲೂಕಿನ ಜನರ ಬೇಡಿಕೆ ಕಾರ್ಯರೂಪಕ್ಕೆ ಬಂದಿಲ್ಲ.
ತಾಲ್ಲೂಕು ಕೇಂದ್ರಕ್ಕೆ 180ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಆಂಧ್ರ ಕ್ಯಾಂಪ್, ತಾಂಡಾಗಳು ಬರುತ್ತಿವೆ. ಆಕಸ್ಮಿಕ ಬೆಂಕಿಗೆ ಅನೇಕ ಗುಡಿಸಲು, ಬಣವೆಗಳು  ಭಸ್ಮವಾಗಿವೆ. ಈ ಭಾಗದಲ್ಲಿ ಆಗ್ನಿ ಅವಘಡ ನಡೆದರೆ ದೂರದ ಸಿಂಧನೂರು ಹಾಗೂ ಲಿಂಗುಸುಗೂರಿನಿಂದ ಆಗ್ನಿಶಾಮಕ ವಾಹನ ಬರುವುದರ ಒಳಗಾಗಿ ಅನೇಕರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 
ಠಾಣೆ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಲಿಂಗಸುಗೂರು ರಸ್ತೆ ಯ ಪಕ್ಕದಲ್ಲಿ ಜಾಗ ಗೊತ್ತುಪಡಿಸಲಾಗಿದೆ.‌ಆದರೆ, ಮುಂದಿನ ಕ್ರಮ ಜರುಗಿಸಲಾಗುತ್ತಿಲ್ಲ.

ಜನಜಾಗೃತಿ
ಪ್ರಾಕೃತಿಕ, ಮಾನವ ನಿರ್ಮಿತ ಅನಾಹುತಗಳು ಮತ್ತು ಅವುಗಳಿಂದ ಜೀವ ಉಳಿಸಿಕೊಳ್ಳುವ ಬಗೆಯ ಕುರಿತು ಅಗ್ನಿಶಾಮಕ ಠಾಣೆ ಅಧಿಕಾರಿಗಳು ಶಾಲಾ ಮಕ್ಕಳಿಗೆ ಮತ್ತು ಜನರಿಗೆ ಮಾಹಿತಿ ನೀಡುವುದರ ಜತೆಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಾರೆ. ಅನಾಹುತ ಆಗದಂತೆ ಜನರು ವಹಿಸಬೇಕಾದ ಮುನ್ನಚ್ಚರಿಕೆ ಕ್ರಮದ ಬಗ್ಗೆಯೂ ತಿಳಿ ಹೇಳುತ್ತಾರೆ.

ವಾಟರ್‌ ಟೆಂಡರ್‌ ಲಾರಿಗೆ ಮುಕ್ತಿ ಸಿಗುವುದೆ?
ಲಿಂಗಸುಗೂರು: 1998ರಲ್ಲಿ ಸ್ಥಳೀಯವಾಗಿ ಆರಂಭಗೊಂಡ ಅಗ್ನಿಶಾಮಕ ಠಾಣೆಗೆ 1991 ಮತ್ತು 1999ರ ಮಾಡಲ್‍ ವಾಟರ್‌ ಟೆಂಡರ್‌ ಹಾಗೂ ವಾಟರ್‌ ಲಾರಿ ನೀಡಿದ್ದು, ಹಳೆಯ ವಾಹನಗಳನ್ನು ವಾಪಸ್ಸು ಪಡೆದು ಹೊಸ ವಾಹನ ಪೂರೈಕೆ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಕನಸು ಸಾಕಾರಗೊಳ್ಳುವುದು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕೃಷ್ಣಾ ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆ ಜನರ ಸಂರಕ್ಷಣೆ, ಕೆರೆ, ಕಾಲುವೆ, ಬಾವಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಅಥವಾ ಮೃತ ದೇಹಗಳ ಪತ್ತೆಗೆ ಸಾಕಷ್ಟು ಪರಿಶ್ರಮ ಪಡುತ್ತಿದೆ. ಅಗ್ನಿ ಅವಘಡಗಳು ಸಂಭವಿಸಿದಾಗ ತಕ್ಷಣವೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಜೊತೆಗೆ ಹೆಚ್ಚಿನ ಅನಾಹುತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಗ್ನಿಶಾಮಕ ಠಾಣೆಗೆ ಬೇಕಾಗುವ ಅವಶ್ಯಕ ಸಲಕರಣೆ ನಿಡಿದ್ದು ಎಂತಹುದೆ ಆಪತ್ತು ನಿರ್ವಹಣೆಗೆ ಸನ್ನದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಹಳೆಯ ವಾನಹಗಳು ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿರುವುದು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದ್ದು ಹಿರಿಯ ಅಧಿಕಾರಿಗಳು ಸ್ಪಂದಿಸುವರೆ ಕಾದುನೋಡಬೇಕಷ್ಟೆ.

2021ರಲ್ಲಿ ಸಣ್ಣ (124), ಮಧ್ಯಮ (20) ಪ್ರಕರಣಗಳು ಜರುಗಿವೆ. 15 ಪ್ರಕರಣಗಳಲ್ಲಿ ಜೀವ ರಕ್ಷಣೆ ಕಾರ್ಯ ನಡೆಸಿದ್ದೇವೆ. 2022ರಲ್ಲಿ ಈ ವರೆಗೆ ಸಣ್ಣ (13), ಮಧ್ಯಮ (50), 9ಪ್ರಕರಣಗಳಲ್ಲಿ ಜೀವ ರಕ್ಷಣೆ ಕಾರ್ಯ ನಡೆಸಿದ್ದೇವೆ. ಅಪಾಯಕಾರಿ ಘಟನೆಗಳು ಅಪರೂಪ. ಅತಿ ಹೆಚ್ಚು ಬಣವಿಗೆ ಬೆಂಕಿ ಅವಘಡಗಳೆ ಜರುಗಿವೆ ಎಂದು ಮೂಲಗಳು ದೃಢಪಡಿಸಿವೆ.

2 ವರ್ಷದಲ್ಲಿ 92 ಪ್ರಕರಣ ದಾಖಲು
ದೇವದುರ್ಗ: ತಾಲ್ಲೂಕು ಅಗ್ನಿಶಾಮಕ ಠಾಣೆಯ ವ್ಯಾಪ್ತಿಯಲ್ಲಿ 2021ರಲ್ಲಿ 50 ಮತ್ತು ಅರಕೇರಾ ಠಾಣೆಯಲ್ಲಿ 49 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ವರ್ಷದಲ್ಲಿ ದೇವದುರ್ಗ ಠಾಣೆಯಲ್ಲಿ 43 ಪ್ರಕರಣಗಳು ಮಾತ್ರ ದಾಖಲಾಗಿದ್ದು ಎರಡು ವರ್ಷದಲ್ಲಿ ಸುಮಾರು 20ಕ್ಕೂ ಹೆಚ್ಚು ರಕ್ಷಣಾ ಕಾರ್ಯಗಳನ್ನು ಮಾಡಲಾಗಿದೆ.
ಕೆರೆ, ಬಾವಿ, ಚರಂಡಿ, ನದಿ, ಬಾವಿ, ಕಲ್ಲಿನ ಕ್ವಾರಿಗಳಂತಹ ಅಪಾಯದಲ್ಲಿ ಸಿಲುಕಿದ ಜನ ಹಾಗೂ ಪ್ರಾಣಿಗಳನ್ನು ರಕ್ಷಿಸಲಾಗಿದೆ. ರೈತರ ಹುಲ್ಲಿನ ಬಣಮೆ ಸರಿದಂತೆ ಕಾರ್ಯಚರಣೆಯಲ್ಲಿ ಹಲವು ಮೃತದೇಹಗಳನ್ನು ತೆಗೆಯಲಾಗಿದೆ.
ಪ್ರತಿವರ್ಷ ಆರು ದಿನಗಳ ಕಾಲ ವಿವಿಧಡೆ ಅಗ್ನಿಶಾಮಕ ಸಪ್ತಾಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಕೆಲ ಅಣುಕು ಪ್ರದರ್ಶನಗಳ ಮೂಲಕ ಧ್ವನಿವರ್ಧಕಗಳಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ ಎಂದು ದೇವದುರ್ಗ ಅಗ್ನಿಶಾಮಕ ಠಾಣಾಧಿಕಾರಿ ಉರುಕುಂದಪ್ಪ, ಅರಕೇರಾ ಅಗ್ನಿಶಾಮಕ ಠಾಣಾಧಿಕಾರಿ ಮಾರ್ಕಂಡಯ್ಯ ತಿಳಿಸಿದರು.

*ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಅಗ್ನಿ ಅವಘಡಗಳು ನಡೆಯುವ ಸಾಧ್ಯತೆಗಳಿದ್ದು, ಬೆಂಕಿ ಕಿಡಿಗಳು ಬಯಲಿನ ತ್ಯಾಜ್ಯ ರಾಶಿಗಳ ಮೇಲೆ ಹಾರದಂತೆ ಎಚ್ಚರಿಕೆ ವಹಿಸಬೇಕು.
-ರವೀಂದ್ರ ಘಾಟಗೆ, ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ

*ಅಗ್ನಿ ಶಾಮಕ ಠಾಣೆಗೆ ಸುಸಜ್ಜಿತ ಕಚೇರಿ, ವಸತಿಗೃಹಗಳು, ಅಗತ್ಯ ಸಲಕರಣೆಗಳನ್ನು ಪೂರೈಸಲಾಗಿದೆ. ಸಿಬ್ಬಂದಿ ದಿನ 24 ಗಂಟೆ ತುರ್ತು ಸೇವೆ ಸನ್ನದ್ಧರಾಗಿರುತ್ತಾರೆ. ಹಳೆ ವಾಹನಗಳ ಬದಲಾವಣೆ ಅಗಬೇಕಿದೆ. ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಅಗ್ನಿಶಾಮಕ ಕಾರ್ಯವೈಖರಿ ಜಾಗೃತಿ ಮೂಡಿಸಲಾಗುತ್ತಿದೆ.
-ಹೊನ್ನಪ್ಪ ದೊಡಮನಿ, ಠಾಣಾಧಿಕಾರಿ, ಅಗ್ನಿಶಾಮಕ ಠಾಣೆ, ಲಿಂಗಸುಗೂರು

*ಅಗ್ನಿ ಅವಗಢ ಸಂದರ್ಭದಲ್ಲಿ ಅಗ್ನಿ ಶಾಮಕ ದಳದಿಂದ ಮಾತ್ರ ಅನಾಹುತ ತಪ್ಪಿಸಲು ಸಾಧ್ಯ. ಆದರೆ ನಮ್ಮ ತಾಲ್ಲೂಕು ಕೇಂದ್ರದಲ್ಲೆ ಕಚೇರಿ ಇಲ್ಲದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ, ಸ್ಥಳದಲ್ಲಿರುವ ಸಾರ್ವಜನಿಕರೇ ಕಷ್ಟಪಟ್ಟು ಅಗ್ನಿ ಶಮನ ಮಾಡಿಕೊಳ್ಳುವ ಪರಿಸ್ಥಿತಿ ಇದೆ
-ಸಂತೋಷ ಹಿರೇಮಠ, ಸಿರವಾರ

*ಅಗ್ನಿ ಅವಘಡಗಳು ಸಂಭವಿಸಿದಾಗ ತುರ್ತು ಸೇವೆಗೆ ತೆರಳುವ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಬೆಂಕಿ ನಂದಿಸುವ ಸಂದರ್ಭದಲ್ಲಿ ಸಿಬ್ಬಂದಿಗೆ ಅನಗತ್ಯ ತೊಂದರೆ ನೀಡಬಾರದು.
-ಹಾಜಿಮಿಯಾ, ಠಾಣಾಧಿಕಾರಿ, ಅಗ್ನಿ ಶಾಮಕ ಠಾಣೆ, ಮಾನ್ವಿ

*ತಾಲ್ಲೂಕು ಕೇಂದ್ರವಾದ ಮಸ್ಕಿ ಪಟ್ಟಣದಲ್ಲಿ ಅನೇಕ ಆಗ್ನಿ ಅವಘಡ ನಡೆಯುತ್ತಿವೆ. ಸರ್ಕಾರ ಕೂಡಲೇ ಪಟ್ಟಣಕ್ಕೆ ಆಗ್ನಿ ಶಾಮಕ ಠಾಣೆ ಮುಂಜೂರು ಮಾಡಲು ಕ್ರಮ ಕೈಗೊಳ್ಳಲಿ
ಸೈಯದ್ ರಸೂಲ್, ಮಸ್ಕಿ

ಪೂರಕ ವರದಿಗಳು: ಬಿ.ಎ ನಂದಿಕೋಲಮಠ, ಡಿ.ಎಚ್‌.ಕಂಬಳಿ, ಬಸವರಾಜ ಭೋಗಾವತಿ, ಪ್ರಕಾಶ್‌ ಮಸ್ಕಿ, ಕೃಷ್ಣ ಪಿ., ಯಮನೇಶ ಗೌಡಗೇರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.