ಶನಿವಾರ, ಸೆಪ್ಟೆಂಬರ್ 21, 2019
21 °C

‘ಅಣ್ಣಾ ಕ್ಯಾಂಟಿನ್‌’ನಲ್ಲಿ ಯೋಧರು, ಹಿರಿಯರಿಗೆ ಉಚಿತ ಉಪಹಾರ, ಊಟ

Published:
Updated:
Prajavani

ಹಟ್ಟಿ ಚಿನ್ನದ ಗಣಿ: ಜಯ ಕರ್ನಾಟಕ ಸಂಘಟನೆಯ ಪಟ್ಟಣ ಘಟಕದ ಮುತ್ತಪ್ಪ ರೈ ಅವರ ಅಭಿಮಾನಿಗಳು ಹಟ್ಟಿ ಕ್ಯಾಂಪ್‌ ಬಸ್‌ ನಿಲ್ದಾಣ ಪಕ್ಕದಲ್ಲಿ ‘ಅಣ್ಣಾ ಕ್ಯಾಂಟಿನ್‌’ ಆರಂಭಿಸಿದ್ದು, ಯೋಧರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಊಟ, ಉಪಹಾರ ವಿತರಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೂ ₹10 ರಿಯಾಯ್ತಿ ದರದಲ್ಲಿ ಉಪಹಾರ ವಿತರಿಸತ್ತಿರುವುದು ಜನಪ್ರಿಯವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಡಿಮೆ ದರದಲ್ಲಿ ಇಡ್ಲಿ, ಚಿತ್ರಾನ್ನ, ವಗ್ಗರಣೆ, ಉಪ್ಪಿಟ್ಟು, ಮೈಸೂರು ಬೊಂಡಾ, ಪೂರಿ ಮಸಲಾದೋಸೆ, ಪಲಾವ್‌, ಪಡ್ಡು, ಸಿರಾ ಸವಿಯಲು ಪ್ರತಿನಿತ್ಯ ಅಣ್ಣಾ ಕ್ಯಾಂಟಿನ್‌ಗೆ ಮುಗಿ ಬೀಳುತ್ತಿದ್ದಾರೆ.

ಪಟ್ಟಣದ ಯಾವುದೇ ಖಾನಾವಳಿಯಲ್ಲಿ ರೊಟ್ಟಿ ಅಥವಾ ಚಪಾತಿ ಊಟ ಮಾಡುವುದಕ್ಕೆ ಪ್ಲೇಟ್‌ಗೆ ₹60 ರಿಂದ ₹70 ಕೊಡಬೇಕಿದೆ. ಆದರೆ, ಅಣ್ಣಾ ಕ್ಯಾಂಟಿನ್‌ನಲ್ಲಿ ಮಧ್ಯಾಹ್ನ ₹40 ಪಾವತಿಸಿ ಊಟ ಮಾಡಬಹುದು. ಎರಡು ರೊಟ್ಟಿ ಅಥವಾ ಚಪಾತಿ ಜೊತೆಗೆ ಎರಡು ನಮೂನೆಯ ಪಲ್ಲೆ, ಅನ್ನ–ಸಾರು. ಕ್ಯಾಂಟಿನ್‌ ಬರುವ ಗ್ರಾಹಕರಿಗೆಲ್ಲ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ.

ಹಟ್ಟಿ ಪಟ್ಟಣ ಹಾಗೂ ತಪ್ಪಲದೊಡ್ಡಿಯ ಮುತ್ತಪ್ಪ ರೈ ಅಭಿಮಾನಿ ಗೆಳೆಯರೆಲ್ಲ ಒಟ್ಟಾಗಿ ಅಣ್ಣಾ ಕ್ಯಾಂಟಿನ್ ಆರಂಭಿಸಿದ್ದಾರೆ. 

‘ನಮಗೆ ಹೊಟೇಲ್‌ ಉದ್ಯಮದಲ್ಲಿ ಅತಿಹೆಚ್ಚು ಲಾಭ ಗಳಿಸುವ ಆಸಕ್ತಿ ಇಲ್ಲ. ಸಂಸ್ಕೃತಿ ಭಾಷೆ ವಿಷಯದಲ್ಲಿ ಕರ್ನಾಟಕ ರಕ್ಷಣೆಗೆ ಸದಾ ಸಿದ್ಧರಿದ್ದೇವೆ. ನಾಡ ಪ್ರೇಮ ಇರುವ ಅಣ್ಣನಾದ ಮುತ್ತಪ್ಪ ರೈ ಅಭಿಮಾನಿಯಾಗಿ ಅವರ ಹೆಸರಿನಲ್ಲಿ ಈ ಕ್ಯಾಂಟಿನ್ ತೆರೆದಿದ್ದೇವೆ. ಕಡಿಮೆ ದರದಲ್ಲಿ ಸಾಮಾನ್ಯ ಜನರಿಗೆ ಊಟ, ಉಪಹಾರ ನೀಡುವ ಅಭಿಲಾಷೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ಕ್ಯಾಂಟಿನ್ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿರುವ ಮೌನೇಶ ತಪ್ಪಲದೊಡ್ಡಿ ಅವರು.

ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ವಿವಿಧ ಬಗೆಯ ಉಪಹಾರ, ಮಧ್ನಾಹ್ನ 12 ರಿಂದ ಸಂಜೆ 4 ರವರೆಗೆ ಊಟ ಅಣ್ಣಾ ಕ್ಯಾಂಟಿನ್‌ನಲ್ಲಿ ಸಿಗುತ್ತದೆ.

Post Comments (+)