ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಶಿಕ್ಷಣದಿಂದ ಭವಿಷ್ಯ ಉಜ್ವಲ

ಎಸ್ಸೆಸ್ಸೆಲ್ಸಿ ನಂತರ ಮೂರು ವರ್ಷಗಳ ಡಿಪ್ಲೋಮಾ ಕೋರ್ಸು
Last Updated 2 ಮೇ 2019, 19:30 IST
ಅಕ್ಷರ ಗಾತ್ರ

ರಾಯಚೂರು: ಎಸ್ಸೆಸ್ಸೆಲ್ಸಿ ನಂತರ ಮೂರೇ ವರ್ಷಗಳ ತಾಂತ್ರಿಕ ಶಿಕ್ಷಣದ ಡಿಪ್ಲೋಮಾ ಕೋರ್ಸ್‌ಗಳ ಅಧ್ಯಯನ ಮಾಡಿದರೆ ಸಾಕು ಉಜ್ವಲ ಭವಿಷ್ಯ ಕಂಡುಕೊಳ್ಳಬಹುದು. ಡಿಪ್ಲೋಮಾ ಕೋರ್ಸಿನ ನಂತರ ಒಳ್ಳೆಯ ಅವಕಾಶಗಳು ತೆರೆದುಕೊಳ್ಳಲಿವೆ.

ಎಸ್ಸೆಸ್ಸೆಲ್ಸಿ ಮುಗಿಯಿತು ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪರಿಹಾರ ನೀಡಲಿದೆ. ಏಕೆಂದರೆ ತಾಂತ್ರಿಕ ಶಿಕ್ಷಣ ಪಡೆದವರಲ್ಲಿ ಬಹಳಷ್ಟು ಜನರು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ. ಒಳ್ಳೆಯ ಉದ್ಯೋಗ ಹಾಗೂ ಉತ್ತಮ ವೇತನ ಪಡೆದು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಡಿಪ್ಲೋಮಾ ಮುಗಿಸಿದವರನ್ನು ಉದ್ಯೋಗಗಳು ಕೈಬೀಸಿ ಕರೆಯುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ತಾಂತ್ರಿಕ ಶಿಕ್ಷಣ ಪಡೆದವರಿಗೆ ಸಮಾಜದಲ್ಲಿ ಬೇಡಿಕೆಯಿದ್ದು, ಅಧ್ಯಯನ ಮುಗಿಸಿದ ನಂತರ ತ್ವರಿತವಾಗಿ ಕೆಲಸಗಳು ದೊರೆಯಲಿವೆ. ಒಳ್ಳೆಯ ವೇತನವೂ ಇರಲಿದೆ. ಜಿಲ್ಲೆಯಲ್ಲಿ ಡಿಪ್ಲೋಮಾ ಶಿಕ್ಷಣ ನೀಡಲು ಜಿಲ್ಲೆಯಲ್ಲಿ ಒಟ್ಟು ಏಳು ಕಾಲೇಜುಗಳು ಸಜ್ಜಾಗಿವೆ.

ರಾಯಚೂರು, ದೇವದುರ್ಗ ಮತ್ತು ಲಿಂಗಸೂಗೂರಿನಲ್ಲಿ ತಲಾ ಒಂದರಂತೆ ಒಟ್ಟು ಮೂರು ಸರ್ಕಾರಿ ಡಿಪ್ಲೋಮಾ ಕಾಲೇಜುಗಳಿವೆ. ಅನುದಾನಿತ ಕಾಲೇಜು ಜಿಲ್ಲೆಯಲ್ಲಿ ಒಂದೂ ಇಲ್ಲವಾಗಿದ್ದು, ಏಳು ಖಾಸಗಿ ಕಾಲೇಜುಗಳಿವೆ. ರಾಯಚೂರಿನಲ್ಲಿ ಎರಡು, ಲಿಂಗಸುಗೂರು ಹಾಗೂ ಸಿಂಧನೂರಿನಲ್ಲಿ ತಲಾ ಒಂದು ಶಿಕ್ಷಣ ಸಂಸ್ಥೆಯಿದೆ.

ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸಿವಿಲ್‌, ಮೆಕಾನಿಕಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗಳ ಶಿಕ್ಷಣ ನೀಡಲಾಗುತ್ತದೆ. ಲಿಂಗಸುಗೂರು ಮತ್ತು ದೇವದುರ್ಗದಲ್ಲಿ ಎಲೆಕ್ಟ್ರಿಕಲ್‌ ಕೋರ್ಸ್‌ನ ಶಿಕ್ಷಣ ಸೌಲಭ್ಯವಿಲ್ಲ. ಉಳಿದ ನಾಲ್ಕು ಕೋರ್ಸ್‌ಗಳ ಶಿಕ್ಷಣ ನೀಡಲಾಗುತ್ತದೆ.

ಡಿಪ್ಲೋಮಾ ಕೋರ್ಸಿಗೆ 6 ಸೆಮಿಸ್ಟರ್‌ಗಳಿವೆ. ಎಲೆಕ್ಟ್ರಿಕಲ್‌ನಲ್ಲಿ 6 ಸೆಮಿಸ್ಟರ್‌ಗಳಿಗೂ 7 ವಿಷಯಗಳಿರುತ್ತವೆ. ಮೆಕಾನಿಕಲ್‌ ಮತ್ತು ಸಿವಿಲ್‌ನಲ್ಲಿ ಮೊದಲೆರಡು ಸೆಮಿಸ್ಟರ್‌ಗೆ 6 ವಿಷಯಗಳಿದ್ದರೆ ಮೂರು–ನಾಲ್ಕನೇ ಸೆಮಿಸ್ಟರ್‌ಗೆ 7, ಐದನೇ ಸೆಮಿಸ್ಟರ್‌ಗೆ 8 ಮತ್ತು ಆರನೇ ಸೆಮಿಸ್ಟರ್‌ಗೆ 7 ವಿಷಯಗಳಿವೆ.

ಎಲೆಕ್ಟ್ರಾನಿಕ್ಸ್‌ನಲ್ಲಿ ನಾಲ್ಕು ಸೆಮಿಸ್ಟರ್‌ಗೆ 7 ವಿಷಯಗಳಿವೆ. ಐದನೇ ಸೆಮಿಸ್ಟರ್‌ಗೆ 8 ಮತ್ತು ಆರನೇ ಸೆಮಿಸ್ಟರ್‌ಗೆ 6 ವಿಷಯಗಳಿವೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಐದನೇ ಸೆಮಿಸ್ಟರ್‌ವರೆಗೆ 7 ವಿಷಯಗಳಿವೆ. ಆರನೇ ಸೆಮಿಸ್ಟರ್‌ಗೆ 6 ವಿಷಯಗಳಿವೆ.

ಪ್ರತಿಯೊಂದು ಕಾಲೇಜಿನಲ್ಲಿ ಒಂದೊಂದು ಕೋರ್ಸಿಗೆ 60 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಸರ್ಕಾರಿ ಕಾಲೇಜಿಲ್ಲಿ ವಾರ್ಷಿಕ ₨ 4500 ಶುಲ್ಕವಿದೆ. ಖಾಸಗಿ ಕಾಲೇಜಿನಲ್ಲಿ ಅಂದಾಜು ₹ 10 ಸಾವಿರ ವಾರ್ಷಿಕ ಶುಲ್ಕವಿದೆ. ಇದೇ ಶುಲ್ಕ ನಿಖರವಲ್ಲ.

ರಾಯಚೂರಿನಲ್ಲಿ ಎಚ್‌ಕೆಇಎಸ್‌, ಟ್ಯಾಗೋರ್‌ ಸ್ಮಾರಕ ಶಿಕ್ಷಣ ಸಂಸ್ಥೆ ಹಾಗೂ ಲಿಂಗಸುಗೂರಿನಲ್ಲಿ ಸಂಜೀವ್‌ ಮಹಾವಿದ್ಯಾಲಯ ಖಾಸಗಿ ಶಿಕ್ಷಣ ಸಂಸ್ಥೆಗಳಾಗಿವೆ. ಸಂಜೀವ್ ಕಾಲೇಜಿನಲ್ಲಿ ಮೈನಿಂಗ್‌ ಕೋರ್ಸ್‌ನ ಶಿಕ್ಷಣವೂ ನೀಡಲಾಗುತ್ತದೆ. ಕಳೆದ ವರ್ಷದಿಂದ ಮಾನ್ವಿಯ ಪೋತ್ನಾಳ ಹಾಗೂ ಲಿಂಗಸುಗೂರಿನ ಮೇಟಿ ಕಾಲೇಜಿಗೆ ಅನುಮತಿ ತಡೆಯಲಾಗಿದೆ.

ಆನ್‌ಲೈನ್‌ನಲ್ಲಿ ಪ್ರವೇಶ
ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದ್ದು, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 18 ಕಡೆಯ ದಿನ ಆಗಿದೆ.

**
ಎಸ್ಸೆಸ್ಸೆಲ್ಸಿ ತೇರ್ಗೆಡೆಯಾದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಕೋರ್ಸ್‌ ಸೆಮಿ ಸ್ಕಿಲ್ಡ್‌ ಕೋರ್ಸಾಗಿದ್ದು, ಮುಂದೆ ಉತ್ತಮ ಅವಕಾಶಗಳಿವೆ.
– ವೈ.ಚನ್ನಬಸಪ್ಪ, ಪ್ರಾಚಾರ್ಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT