ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಕೆರೆಗಳ ಜೀರ್ಣೋದ್ಧಾರಕ್ಕೆ ನರೇಗಾ ನೆರವು

ಮಾನ್ವಿ: ‘ಅಮೃತ ಸರೋವರ’ ಯೋಜನೆಯಡಿ 14 ಕೆರೆಗಳ ಅಭಿವೃದ್ಧಿ
Last Updated 9 ಏಪ್ರಿಲ್ 2023, 6:53 IST
ಅಕ್ಷರ ಗಾತ್ರ

ಮಾನ್ವಿ: ಕೇಂದ್ರ ಸರ್ಕಾರದ ‘ಅಮೃತ ಸರೋವರ’ ಯೋಜನೆಯಡಿ ತಾಲ್ಲೂಕಿನ ಗ್ರಾಮೀಣ ಭಾಗದ 14 ಕೆರೆಗಳ ಜೀರ್ಣೋದ್ಧಾರ ಮಾಡಲಾಗಿದೆ. ಈ ಮೂಲಕ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಹಾಗೂ ಕೆರೆಗಳಿಗೆ ಕಾಯಕಲ್ಪ ನೀಡಿದಂತಾಗಿದೆ.

‘ಅಮೃತ ಸರೋವರ’ ಯೋಜನೆಯ ಮೊದಲ ಹಂತದಲ್ಲಿ 2021-22ನೇ ಸಾಲಿನಲ್ಲಿ ₹ 10ಲಕ್ಷ ವೆಚ್ಚದಲ್ಲಿ ಹಿರೇಕೊಟ್ನೆಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮರೇಶ್ವರ ಕ್ಯಾಂಪಿನ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಎರಡನೇ ಹಂತದಲ್ಲಿ 2022-23ನೇ ಸಾಲಿನಲ್ಲಿ 4 ಕೆರೆ, ಮೂರನೇ ಹಂತದಲ್ಲಿ 9 ಕೆರೆಗಳ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ತಾಲ್ಲೂಕಿನ ಆಲ್ದಾಳ ಕ್ಯಾಂಪ್, ಅಮರಾವತಿ, ಹಿರೇಕೊಟ್ನೇಕಲ್ ಸಮೀಪದ ಗೋಪಾಲ ನಗರ ಕ್ಯಾಂಪ್, ಭೋಗಾವತಿ, ಪೋತ್ನಾಳ ಸಮೀಪದ ಜೀನೂರು ಕ್ಯಾಂಪ್, ಸೀಕಲ್, ಕೊರವಿ, ಚೀಕಲಪರ್ವಿ, ಕುರ್ಡಿ, ಕಂಬಳತ್ತಿ, ನಕ್ಕುಂದಿ ಹಾಗೂ ಬ್ಯಾಗವಾಟ ಗ್ರಾಮಗಳ ಕೆರೆಗಳ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಜೀನೂರು ಕ್ಯಾಂಪಿನ ಕೆರೆ ಅಭಿವೃದ್ಧಿಗೆ ₹ 25ಲಕ್ಷ ವೆಚ್ಚ, ಗೋಪಾಲನಗರ ಕ್ಯಾಂಪ್ ಕೆರೆಗೆ ₹ 20ಲಕ್ಷ ವೆಚ್ಚ ಹಾಗೂ ಕಂಬಳತ್ತಿ ಗ್ರಾಮದ ಕೆರೆಯನ್ನು ₹ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಉಳಿದ ಎಲ್ಲಾ ಕೆರೆಗಳನ್ನು ತಲಾ ₹ 10ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಕಾಮಗಾರಿಗಳ ಅನುಷ್ಠಾನಕ್ಕೆ ಒಟ್ಟು ಅನುದಾನದಲ್ಲಿ ಶೇ 70 ಸಾಮಾಗ್ರಿ ವೆಚ್ಚ ಹಾಗೂ ಶೇ 30ರಷ್ಟು ಕೂಲಿ ವೆಚ್ಚ ಹಂಚಿಕೆ ಮಾಡಲಾಗಿದೆ.

ಪ್ರಸ್ತುತ ಅಮರೇಶ್ವರ ಕ್ಯಾಂಪ್, ಆಲ್ದಾಳ ಕ್ಯಾಂಪ್, ಅಮರಾವತಿ ಹಾಗೂ ಜೀನೂರು ಕ್ಯಾಂಪ್ ಗ್ರಾಮಗಳ ಕೆರೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಸಂಗ್ರಹಕ್ಕೆ ಅನುಕೂಲವಾಗಿದೆ. ಇನ್ನುಳಿದ ಕೆರೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿಯ ನರೇಗಾ ಯೋಜನೆಯ ಅನುಷ್ಠಾನ ವಿಭಾಗದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT