ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕೋಟಿ ಅನುದಾನ ಬಂದರೂ ಶುದ್ಧ ನೀರಿಲ್ಲ!

ರಾಯಚೂರು ನಗರಸಭೆ ಕಾರ್ಯವೈಖರಿಗೆ ಬೇಸತ್ತ ಜನರು
Last Updated 1 ಜೂನ್ 2022, 22:15 IST
ಅಕ್ಷರ ಗಾತ್ರ

ರಾಯಚೂರು: ನಿರಂತರ ನೀರು ಒದಗಿಸುವುದಕ್ಕೆ, ನೀರು ಶುದ್ಧೀಕರಣ ಮಾಡುವುದಕ್ಕೆ ಹಾಗೂ ಮೇಲ್ತೊಟ್ಟಿ ನಿರ್ಮಾಣ ಮಾಡುವುದಕ್ಕೆ ರಾಯಚೂರು ನಗರಕ್ಕೆ ಶತಕೋಟಿಗೂ ಅಧಿಕ ಅನುದಾನ ಹರಿದು ಬಂದಿದೆ. ಆದರೆ ಇದುವರೆಗೂ ಸಮರ್ಪಕವಾಗಿ ಶುದ್ಧ ನೀರು ಸರಬರಾಜು ಸಾಧ್ಯವಾಗಿಲ್ಲ!

ಕಲುಷಿತ ನೀರು ಪೂರೈಕೆ ಆಗುತ್ತಿರುವುದು ಹೊಸದಲ್ಲ. ಆದರೆ ಒಂದೇ ದಿನ 50 ಕ್ಕೂ ಹೆಚ್ಚು ಜನರು ವಾಂತಿಭೇದಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಒಬ್ಬರು ಮಹಿಳೆ ಮೃತಪಟ್ಟಿರುವುದು ಗಂಭೀರ ವಿಷಯ. ಉಳ್ಳವರು ಶುದ್ಧ ನೀರನ್ನು ಖರೀದಿಸುತ್ತಿದ್ದಾರೆ ಅಥವಾ ಮನೆಯಲ್ಲಿ ಶುದ್ಧ ನೀರಿನ ಯಂತ್ರ ಹಾಕಿಕೊಂಡಿದ್ದಾರೆ. ವಿವಿಧ ಬಡಾವಣೆಗಳಲ್ಲಿ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳಿಂದಲೂ ಜನರು ಅಗ್ಗವಾಗಿ ನೀರನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಈ ಎಲ್ಲ ವ್ಯವಸ್ಥೆಯಿಂದ ದೂರ ಉಳಿದು ಬದುಕುತ್ತಿರುವ ಜನರಿಗೆ ನಗರಸಭೆಯಿಂದ ಪೂರೈಸುವ ನೀರಿನ ಅವಲಂಬನೆ ಅನಿವಾರ್ಯ.

ನಗರದ ಮಧ್ಯಭಾಗ ಗುಡ್ಡದಲ್ಲಿ ಹರಡಿಕೊಂಡಿರುವ ಇಂದಿರಾನಗರ, ರಾಮನಗರ, ಗಂಗಾನಿವಾಸ ಭಾಗಗಳಲ್ಲಿರುವ ಕಡುಬಡವರು ಅಶುದ್ಧ ನೀರನ್ನೇ ಸೇವಿಸುತ್ತಾ ಬಂದಿದ್ದಾರೆ. ನೀರಿನಲ್ಲಿ ಮಣ್ಣಿನ ಕಣಗಳು, ಕಾಗದ ಚುರುಗಳು ಹರಿದು ಬರುವುದು ತೀರಾ ಸಾಮಾನ್ಯ ನೋಟ. ಬಟ್ಟೆಯಲ್ಲಿ ನೀರನ್ನು ಶೋಧಿಸಿಕೊಂಡು ಜನರು ಸೇವಿಸುತ್ತಾರೆ. ಇದೀಗ ನೀರಿನಲ್ಲಿ ಕಲ್ಮಶ ಮಿಶ್ರಣವಾಗಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದ್ದು, ಈಗಾಗಲಾದರೂ ನಗರಸಭೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮನೆಗಳಿಗೆ ಸರಬರಾಜಾಗುವ ನೀರನ್ನು ಶುದ್ಧೀಕರಣ ಮಾಡುವುದಕ್ಕೆ ಕ್ರಮ ವಹಿಸಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯ.

ರಾಯಚೂರು ನಗರದ ಶೇ 30 ರಷ್ಟು ಭಾಗಕ್ಕೆ ತುಂಗಭದ್ರಾ ನದಿ ನೀರು ಹಾಗೂ ಶೇ 70 ರಷ್ಟು ಭಾಗಕ್ಕೆ ಕೃಷ್ಣಾನದಿ ನೀರನ್ನು ಪೂರೈಸಲಾಗುತ್ತಿದೆ. ತುಂಗಭದ್ರಾ ನದಿ ನೀರನ್ನು ಕಾಲುವೆಗಳ ಮೂಲಕ ರಾಂಪುರ ಕೆರೆಯಲ್ಲಿ ಭರ್ತಿ ಮಾಡಿ, ಅಲ್ಲಿಂದ ಅದನ್ನು ದುರಸ್ತಿಯಲ್ಲಿರುವ ಶುದ್ಧೀಕರಣ ಘಟಕದ ಮೂಲಕ ವಿವಿಧ ಬಡಾವಣೆಗಳಿಗೆ ಹರಿಬಿಡಲಾಗುತ್ತದೆ. ಕೃಷ್ಣಾನದಿ ನೀರನ್ನು ಚಿಕ್ಕಸುಗೂರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಎರಡೂ ಕಡೆಗಳಲ್ಲಿ ನಿಯಮಿತವಾಗಿ ಮತ್ತು ವೈಜ್ಞಾನಿಕ ವಿಧಾನದಲ್ಲಿ ಶುದ್ಧೀಕರಣ ಕಾರ್ಯ ಮಾಡುತ್ತಿಲ್ಲ. ಕಣ್ಣಳತೆ ಅಂದಾಜಿನಲ್ಲೇ ಸಿಬ್ಬಂದಿ ಬ್ಲಿಚಿಂಗ್‌ ಪೌಡರ್‌ ಮಿಶ್ರಣ ಮಾಡುವುದನ್ನು ಮುಂದುವರಿಸಿದ್ದಾರೆ.

ಬೇಸಿಗೆ ಕಾಲ, ಮಳೆಗಾಲದಲ್ಲಿ ನೀರಿನ ಬಣ್ಣ, ವಾಸನೆ ಎಲ್ಲವೂ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ನೀರು ಒದಗಿಸುವ ಕೆಲಸ ಆಗುತ್ತಿಲ್ಲ. ಶುದ್ಧೀಕರಣ ಘಟಕದಲ್ಲಿ ಶುದ್ಧವಾಗಿ ಕಾಣುವ ನೀರು, ಕೆಲವು ಬಡಾವಣೆ ಮನೆಗಳಿಗೆ ತಲುಪುವ ಹೊತ್ತಿಗೆ ಅಶುದ್ಧ, ಕೆಟ್ಟವಾಸನೆಯಿಂದ ಕೂಡಿರುತ್ತದೆ. ಪೈಪ್‌ಲೈನ್‌ ಒಡೆದು ಅದರಲ್ಲಿ ಚರಂಡಿ ಕಲ್ಮಶ ಮಿಶ್ರಣವಾಗುತ್ತಿದೆ ಎನ್ನುವುದು ಜನರ ಆರೋಪ. ಈ ಬಗ್ಗೆ ವಿವಿಧ ಸಂಘ–ಸಂಸ್ಥೆಗಳು ನಗರಸಭೆ ಅಧಿಕಾರಿಗಳ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದುವರೆಗೂ ಪೈಪ್‌ಲೈನ್‌ ಸರಿಪಡಿಸಿ, ಶುದ್ಧ ನೀರು ಒದಗಿಸುತ್ತಿಲ್ಲ.

ರಾಯಚೂರು ನಗರಕ್ಕೆ ನಿರಂತರ ನೀರು ಪೂರೈಸುವ ಯೋಜನೆ ಜಾರಿಗಾಗಿ 2015 ರಲ್ಲಿಯೇ ₹96 ಕೋಟಿ ಅನುದಾನ ಒದಗಿಸಲಾಗಿದೆ. ಇದುವರೆಗೂ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಮೇಲ್ತೊಟ್ಟಿಗಳನ್ನು ನಿರ್ಮಿಸುವುದಕ್ಕಾಗಿ ಅಮೃತ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಒದಗಿಸಲಾಗಿದೆ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ನೀರು ಶುದ್ಧೀಕರಣ ಮಾಡುವುದಕ್ಕಾಗಿ ರಾಂಪೂರ ಕೆರೆ ಪಕ್ಕದಲ್ಲಿ ₹5.3 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇದುವರೆಗೂ ಕಾರ್ಯಾರಂಭ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT