ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ: ನೆಲಕಚ್ಚಿದ ಭತ್ತ, ತೊಗರಿ

ಲಿಂಗಸುಗೂರು: ಸಹಾಯಕ್ಕೆ ಬಾರದ ಆಡಳಿತ, ರೈತರ ಅಳಲು
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಹಿಂಗಾರು ಮಳೆಯ ಅರ್ಭಟಕ್ಕೆ ಸಾಮಾನ್ಯ ರೈತರು ಸಂಕಷ್ಟ ಎದುರಿಸುವಂತಾಗಿದೆ. ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆ, ಗಾಳಿಗೆ ನೀರಾವರಿ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಆರ್‌ಎನ್‌ಆರ್‌ ತಳಿ ಭತ್ತ ನೆಲಕ್ಕೆ ಉರುಳಿದ್ದು ಅಪಾರ ನಷ್ಟ ಸಂಭವಿಸಿದೆ.

ಸತತ ಬರಗಾಲದಿಂದ ಕಂಗೆಟ್ಟಿದ್ದ ತಾಲ್ಲೂಕಿನ ರೈತರು ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿದೆ ಎಂದು ಹರ್ಷಗೊಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬೀಳುತ್ತಿರುವುದರಿಂದ ಅತಿವೃಷ್ಟಿಯ ಶಾಪಕ್ಕೆ ಒಳಗಾಗಿದ್ದಾರೆ. ಜಮೀನುಗಳಲ್ಲಿ ಬೆಳೆದು ನಿಂತ ಬಹುತೇಕ ಬೆಳೆ ನಷ್ಟಕ್ಕೊಳಗಾಗಿ ಭಾರಿ ಪ್ರಮಾಣದ ಸಂಕಷ್ಟ ಎದುರಿಸುವಂತಾಗಿದೆ.

ಒಣಬೇಸಾಯ, ನೀರಾವರಿ, ತೋಟಪಟ್ಟಿಗಳಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದಿದ್ದರು. ಅತಿವೃಷ್ಟಿಯಿಂದ ರಾಶಿ ಹಂತದಲ್ಲಿದ್ದ ಸಜ್ಜೆ ಕೈ ಸೇರದಂತಾಗಿದೆ. ಉಳ್ಳಾಗಡ್ಡಿ ಅತಿಯಾದ ಮಳೆಗೆ ಕೊಳೆತು ಹಾಳಾಗಿದೆ. ಗುಣಮಟ್ಟದಲ್ಲಿ ಬೆಳೆದು ನಿಂತಿದ್ದ ತೊಗರಿ ಕಾಪು ಕಟ್ಟೊ ಹಂತದಲ್ಲಿ ಅತಿಯಾದ ತಂಪಿಗೆ ಸಿಡಿಹಾಯ್ದು ರೈತರ ಕಣ್ಣಲ್ಲಿ ನೀರು ಬರಿಸುವಂತೆ ಮಾಡಿದೆ.

ರಾಂಪೂರ ಏತ ನೀರಾವರಿ ಮತ್ತು ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯ ಬಹುತೇಕ ರೈತರು ಕಡಿಮೆ ಖರ್ಚು, ಹೆಚ್ಚಿನ ಇಳುವರಿ ಆಸೆಯಿಂದ ಸೋನಾ ಮಸೂರಿಯನ್ನು ಮೀರಿಸುವಂತ ಆರ್‌ಎನ್‌ಆರ್‌ ತಳಿ ಭತ್ತ ನಾಟಿ ಮಾಡಿಕೊಂಡಿದ್ದಾರೆ. 3.5 ರಿಂದ 4ಅಡಿ ಎತ್ತರ ಬೆಳೆದಿರುವ ಭತ್ತದ ತೆನೆ 6–7ಇಂಚು ಇದೆ. ಹದಿನೈದು ದಿನದಲ್ಲಿ ರಾಶಿ ಮಾಡಬಹುದಾಗಿದ್ದ ಬೆಳೆ ಗಾಳಿ, ಮಳೆಗೆ ನೆಲಸಮಗೊಂಡಿದ್ದು ಕಾಣಸಿಗುತ್ತದೆ.

ಸೋನಾಮಸೂರಿ ತಳಿಗೆ ಎಕರೆಗೆ ₹ 35 ರಿಂದ ₹ 40 ಸಾವಿರ ಖರ್ಚು ಬರುತ್ತದೆ. ಆರ್‌ಎನ್‌ಆರ್‌ ತಳಿ ಎಕರೆಗೆ ₹ 25 ರಿಂದ ₹ 30 ಸಾವಿರ ಖರ್ಚು ಬರುತ್ತದೆ. ಸೋನಾಮಸೂರಿ ಎಕರೆಗೆ 30 ರಿಂದ 35 ತೂಕ ಬಂದರೆ, ಆರ್‌ಎನ್‌ಆರ್‌ 40 ರಿಂದ 45 ತೂಕ ಇಳುವರಿ ಬರುತ್ತದೆ. ಸೋನಾ ಮಸೂರಿಗಿಂತ ಹೆಚ್ಚು ಬೆಲೆ ಸಿಗುವ ಆಸೆ ಹೊಂದಿ ನಾಟಿ ಮಾಡಿಕೊಂಡಿದ್ದೇವೆ ಎಂದು ಹನುಮಂತ ಬಂಡೊಳ್ಳಿ, ಮೈತಾಕ್‌ಖಾನ್‌ ಅಳಲು ತೋಡಿಕೊಂಡರು.

ತಾಲ್ಲೂಕಿನ ಸುಣಕಲ್ಲ, ಉಪ್ಪೇರಿ, ಯರಗುಂಟಿ, ಕಾಳಾಪುರ, ಗೋನವಾಟ್ಲ, ಗೋಮವಾಟ್ಲತಾಂಡಾ, ಗುಂತಗೋಳ, ಐದಭಾವಿ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಹೆಕ್ಟೇರ್‌ ಜಮೀನಿನಲ್ಲಿ ಭತ್ತ ನೆಲಕ್ಕೆ ಉರುಳಿ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಒಂದು ವಾರ ಕಳೆದು ಯಾವೊಬ್ಬ ಅಧಿಕಾರಿಗಳು ಪರಿಶೀಲನೆಗೆ ಬಂದಿಲ್ಲ. ನಾವು ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಹನುಮೇಶ ಮಡಿವಾಳ, ನಾಗರಾಜ ಸಜ್ಜನ ತಿಳಿಸಿದರು.

‘ತೊಗರಿ ಬೆಳೆ ತಂಪಿನಿಂದ ಸಿಡಿ ಹಾಯ್ದ ಬಗ್ಗೆ ಮಾಹಿತಿ ಇದೆ. ಆದರೆ, ಗಾಳಿ, ಮಳೆಗೆ ಭತ್ತ ನೆಲಕ್ಕೆ ಉರುಳಿದ ಕುರಿತು ರೈತರು ಅಧಿಕೃತ ಮಾಹಿತಿ ನೀಡಿಲ್ಲ. ಈ ಕುರಿತು ವಾಸ್ತವ ವರದಿ ತರೆಯಿಸಿಕೊಂಡು ರೈತರಿಗೆ ನ್ಯಾಯ ನೀಡಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT