ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಹತ್ತಿ, ತೊಗರಿ ನೆಲದಲ್ಲಿ ಪಪ್ಪಾಯಿ ಕೃಷಿ

Published 17 ಮೇ 2024, 5:10 IST
Last Updated 17 ಮೇ 2024, 5:10 IST
ಅಕ್ಷರ ಗಾತ್ರ

ಮಾನ್ವಿ: ಮಳೆಯಾಶ್ರಿತ ಬೆಳೆಗಳಾದ ತೊಗರಿ, ಹತ್ತಿ ಬೆಳೆಯುತ್ತಿದ್ದ ಜಮೀನಿನಲ್ಲಿ ಪಪ್ಪಾಯಿ ಬೆಳೆ ನಳನಳಿಸುತ್ತಿದೆ. ಜೊತೆಗೆ ಮೀನು ಸಾಕಣೆಯೂ ನಡೆಯುತ್ತಿದೆ.

ಇಂಥ ಪ್ರಯತ್ನಕ್ಕೆ ಕೈ ಹಾಕಿ ಯಶ ಕಂಡಿದ್ದು ತಾಲ್ಲೂಕಿನ ಕುರ್ಡಿ ಗ್ರಾಮದ ಯುವಕ ಸೈಯದ್‌ ಅಕ್ರಮ್. ತಮ್ಮ ಒಟ್ಟು 15 ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ತೋಟಗಾರಿಕೆ ಹಾಗೂ ಮೀನು ಸಾಕಾಣಿಕೆ ಆರಂಭಿಸಿದ್ದಾರೆ.

ಸೈಯದ್ ಅಕ್ರಮ್ ಗೋವಾದಲ್ಲಿ ಒಂಬತ್ತು ವರ್ಷಗಳ ಕಾಲ ಹೋಟೆಲ್ ಮತ್ತು ರೆಸಾರ್ಟ್‌ಗಳ ನಿರ್ವಹಣೆ ಗುತ್ತಿಗೆ ಹಾಗೂ ಪ್ರವಾಸೋದ್ಯಮ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಸ್ವಗ್ರಾಮಕ್ಕೆ ಮರಳಿದ್ದರು. ಬಳಿಕ ಅವರು ಕೃಷಿಯಲ್ಲಿ ತೊಡಗಿದರು.

ಕಳೆದ ವರ್ಷ ಎರಡು ಎಕರೆಯಲ್ಲಿ ನರೇಗಾ ಯೋಜನೆಯಡಿ ಸಾಮಗ್ರಿ ಹಾಗೂ ಕೂಲಿ ವೆಚ್ಚ ಪಡೆದು 1,200 ಪಪ್ಪಾಯಿ ಸಸಿ ನೆಡುವ ಮೂಲಕ ತೋಟಗಾರಿಕೆ ಬೇಸಾಯ ಆರಂಭಿಸಿದ್ದರು. ತೋಟಗಾರಿಕೆ ಇಲಾಖೆಯ ನೆರವಿನಿಂದ ಹನಿ‌ ನೀರಾವರಿ ಸೌಲಭ್ಯ ಮತ್ತು ಸ್ವಂತ ಕೊಳವೆ ಬಾವಿ ನೀರು ಪಡೆದು ಪಪ್ಪಾಯಿ ತೋಟ ನಳನಳಿಸುವಂತೆ ಮಾಡಿದ್ದಾರೆ.

‘ಈ ವರ್ಷ ಬೇಸಿಗೆಯ ಅತಿಯಾದ ತಾಪಮಾನ, ಈಚೆಗೆ ಸುರಿದ ಮಳೆ–ಗಾಳಿಯಿಂದಾಗಿ ಪಪ್ಪಾಯಿ ಹಣ್ಣು ಮತ್ತು ಗಿಡಗಳಿಗೆ ಹಾನಿಯಾಗಿದೆ. ಅದಾಗ್ಯೂ, ಸುಮಾರು 10-15 ಟನ್ ಫಸಲು ಬರುವ ನಿರೀಕ್ಷೆಯಿದೆ’ ಎಂದು ಸೈಯದ್ ಅಕ್ರಮ್ ಹೇಳುತ್ತಾರೆ.

ಜೊತೆಗೆ ಮತ್ಸ್ಯ ಕೃಷಿಯನ್ನೂ ಆರಂಭಿಸಿರುವ ಅಕ್ರಮ್, ಒಂದು ಸಾವಿರ ಚದರ ಅಡಿ ಕೆರೆ‌ ನಿರ್ಮಿಸಿ ಅದರಲ್ಲಿ  ರೂಪಚಂದ್ ತಳಿಯ ಮೀನುಗಳನ್ನು ಸಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT