ಶುಕ್ರವಾರ, ಮೇ 14, 2021
25 °C
ಅಗತ್ಯ ಸರಕು ಹೊರತಾದ ಮಳಿಗೆಗಳನ್ನು ತೆರೆಯುವಂತಿಲ್ಲ

ರಾಯಚೂರಿನಲ್ಲಿ ಭಾಗಶಃ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ಬಿಗಿ ಕ್ರಮ ಕೈಗೊಂಡಿರುವ ಜಿಲ್ಲಾಡಳಿತವು ಗುರುವಾರದಿಂದ ಭಾಗಶಃ ಲಾಕ್‌ಡೌನ್‌ ವಿಧಿಸಿದೆ.

ಜಿಲ್ಲಾಕೇಂದ್ರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2ರವರೆಗೂ ಅಗತ್ಯ ಸರಕು ಮಾರಾಟ ಅಂಗಡಿಗಳು ತೆರೆದುಕೊಂಡಿದ್ದವು. ತಾಲ್ಲೂಕು ಕೇಂದ್ರಗಳಲ್ಲಿ ಎಲ್ಲ ಅಂಗಡಿಗಳು ತೆರೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಮಧ್ಯಾಹ್ನದ ಬಳಿಕ ಜಿಲ್ಲೆಯಾದ್ಯಂತ ಎಲ್ಲ ಅಂಗಡಿಗಳನ್ನು ಬಂದ್‌ ಮಾಡಿಸಲಾಯಿತು. ಔಷಧಿ ಮಳಿಗೆಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಈ ಕುರಿತು ಬುಧವಾರ ಮಾರ್ಗಸೂಚಿ ನೀಡಿದ್ದರು. ಆದರೂ, ಏಕಾಏಕಿ ಮಳಿಗೆಗಳನ್ನು ಬಂದ್‌ ಮಾಡಿಸಿರುವುದನ್ನು ವಿರೋಧಿಸಿ ಕೆಲವು ವ್ಯಾಪಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ, ಕೋವಿಡ್‌ ಮಾರ್ಗಸೂಚಿ ಮನವರಿಕೆ ಮಾಡಿದರು. ಆನಂತರ ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಸಭೆ ನಡೆಸಿ, ವ್ಯಾಪಾರ ಬಂದ್ ಮಾಡಿಕೊಳ್ಳುವಂತೆ ತಿಳಿಸಿದರು.

ಅಂಗಡಿ– ಮುಂಗಟ್ಟು ವ್ಯಾಪಾರ ವಹಿವಾಟು ಬಂದ್ ಮಾಡಿದ್ದರಿಂದ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು
ಬೇಕರಿ, ಕೆಲವು ಹೋಟೆಲ್, ಔಷಧಿ ಅಂಗಡಿ, ಕಿರಾಣಿ ಅಂಗಡಿ ಹಾಗೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದರು.

ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆ, ಬಟ್ಟೆ ಬಜಾರ್ ಹಾಗೂ ಮಿನಾ ಬಜಾರ್ ಸುತ್ತಮುತ್ತಲಿನ ವ್ಯಾಪಾರಸ್ಥರ ಜೊತೆಗೆ ಸದರ್ ಬಜಾರ್ ಸಿಪಿಐ ಅವರ ನೇತೃತ್ವದಲ್ಲಿ ಬುಧವಾರ ಸಭೆ ನಡೆದಾಗ ಕೇವಲ ರಾತ್ರಿ ಕರ್ಫ್ಯೂ ಇರಲಿದ್ದು, ಹಗಲಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್, ವೈಯಕ್ತಿಕ ಅಂತರ ಕಾಪಾಡಿ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಹೇಳಲಾಗಿತ್ತು.

ಗುರುವಾರ ಏಕಾಏಕಿ ಬಜಾರ್ ಹಾಗೂ ಸಾರ್ವಜನಿಕ ಪ್ರದೇಶವೆಲ್ಲ ಬಂದ್ ಮಾಡಿಸಲಾಯಿತು. ‘ರಂಜಾನ್ ಮಾಸ ಇರುವುದರಿಂದ ವಿವಿಧ ವಸ್ತುಗಳ ಖರೀದಿ ಜೊತೆಗೆ ಅವಶ್ಯ ವಸ್ತುಗಳನ್ನು ಜನರು ಖರೀದಿ ಮಾಡುತ್ತಾರೆ. ಈಗ ಜಿಲ್ಲಾಡಳಿತದ ನಿರ್ಧಾರದಿಂದ ತೀವ್ರ ಆರ್ಥಿಕ ಸಮಸ್ಯೆ ಎದುರಾಗಲಿದೆ’ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ನಗರದ ಸ್ಟೇಶನ್ ರಸ್ತೆ, ಕಿರಾಣಿ ಬಜಾರ್, ಗಂಜ್ ರಸ್ತೆ, ಬಸವನಭಾವಿ ವೃತ್ತ, ಚಂದ್ರಮೌಳೇಶ್ವರ ರಸ್ತೆ, ಪಟೇಲ್ ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿತ್ತು. ಕೆಲವರು ಅರ್ಧ ಶೆಟರ್ ತೆರೆದು ವ್ಯಾಪಾರ ಮಾಡುತ್ತಿದ್ದನ್ನು ಕಂಡು ಪೊಲಿಸರು ಗಸ್ತು ತಿರುಗಿ ಅಂಗಡಿಗಳನ್ನು ಬಂದ್ ಮಾಡಿಸಿದ್ದು ಕಂಡು ಬಂತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು