ಶುಕ್ರವಾರ, ಜನವರಿ 24, 2020
16 °C
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ

’ರಾಜಕೀಯ ಜ್ಞಾನ ಪಡೆಯುವುದು ಅವಶ್ಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ರಾಜಕೀಯ ಜ್ಞಾನ ಪಡೆದುಕೊಳ್ಳುವುದು ಅವಶ್ಯಕ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಂಸದೀಯ ವ್ಯವಹಾರ ಹಾಗೂ ಶಾಸನಗಳ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2019–20ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ’ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ’ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಂಸತ್ತು, ವಿಧಾನಸಭೆ, ವಿಧಾನಪರಿಷತ್ತು, ಸಭಾಪತಿ, ಮಂತ್ರಿಮಂಡಲ ಮುಖ್ಯಮಂತ್ರಿ ಸೇರಿದಂತೆ ಇತರೆ ಮಂತ್ರಿಗಳ ಜವಾಬ್ದಾರಿ ಮತ್ತು ಕಾರ್ಯಗಳ ಬಗ್ಗೆ ತಿಳಿದಿರಬೇಕು ಎಂದರು.

ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಚರ್ಚೆಗಳು ಅಭಿವೃದ್ಧಿಗೆ ಸಕಾರಾತ್ಮಕವಾಗಿರಬೇಕು. ಆರೋಗ್ಯಕರವಾಗಿರಬೇಕು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರ ಪಡೆಯುವುದು ಹೇಗೆ, ರಾಜಕೀಯ ವ್ಯವಸ್ಥೆ ಹೇಗಿದೆ, ಸಭೆ ನಡೆಸಲು ಕೋರಂ ಸಂಖ್ಯೆ ಎಷ್ಟಿರಬೇಕು ಎನ್ನುವುದರ ಬಗ್ಗೆ ಮಕ್ಕಳು ಅರಿತುಕೊಳ್ಳಬೇಕು ಎಂದು ಹೇಳಿದರು.

ನೈಜ ಸಂಸತ್ತಿನಲ್ಲಿ ಸಭಾಪತಿ ಎದುರೆ ಗದ್ದಲ ವಾಗ್ವಾದ ನಡೆಯುತ್ತವೆ. ಇಂದಿನ ರಾಜಕಾರಣಿಗಳು ದೇಶದ ಅಭಿವೃದ್ಧಿ ಬಗ್ಗೆ ಚಿಂತೆ ಮಾಡುವುದಿಲ್ಲ. ಪರಸ್ಪರ ವೈಯಕ್ತಿಕ ಚಾರಿತ್ರ್ಯವಧೆ, ಒಬ್ಬರನ್ನೊಬ್ಬರು ದೂರುವುದು ಇವೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವ ಸಮಾಜ ಒಪ್ಪುವ ರಾಜಕಾರಣಿಗಳು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನ್ಹಾಳ, ಶಿಕ್ಷಣಾಧಿಕಾರಿ ಆರ್.ಇಂದಿರಾ ಮಾತನಾಡಿದರು.

ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಸಂಸತ್ತಿನಲ್ಲಿ ದೇವದುರ್ಗದ ಮುಷ್ಟೂರು ಸರ್ಕಾರಿ ಶಾಲೆಯ ದಂಡಮ್ಮ ಸಭಾಧ್ಯಕ್ಷೆಯಾಗಿ, ಮಾನ್ವಿ ಮದ್ಲಾಪುರ ಶಾಲೆಯ ಈರಮ್ಮ ಮುಖ್ಯಮಂತ್ರಿಯಾಗಿ, ಸಿಂಧನೂರಿನ ಗೋರೆಬಾಳ ಶಾಲೆಯ ಉಷಾ ಅವರು ವಿರೋಧ ಪಕ್ಷದ ಸ್ಥಾನವನ್ನು ವಹಿಸಿದ್ದರು.

ರಸ್ತೆ ನಿರ್ಮಾಣ, ನೆರೆ ಪರಿಹಾರ ವಿಳಂಬ, ನಿರುದ್ಯೋಗ, ಮಹಾನಗರಗಳಿಗೆ ಗೂಳೆ ಹೋಗುವುದು, ತಂಬಾಕು ನಿಷೇಧ, ಕನ್ನಡ ಭಾಷೆ ಬಳಕೆ, ಮಹಿಳೆಯರ ಮೇಲಿನ ಅತ್ಯಾಚಾರಗಳು, ನೀರಾವರಿ ಸಮಸ್ಯೆ, ರೈತರಿಗೆ ಬೆಳೆ ಪರಿಹಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಚರ್ಚೆಗಳು ನಡೆದವು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ರಾಮಚಂದ್ರ, ಬಸವರಾಜ, ಸಮಾಜವಿಜ್ಞಾನ ಶಿಕ್ಷಕರು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು