ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ನಗರದ ಕಚ್ಚಾರಸ್ತೆಗಳಲ್ಲಿ ಮತ್ತೆ ಕೆಸರಿನಾಟ

ನನೆಗುದಿಗೆ ಬಿದ್ದ ಆಶಾಪೂರ ಮಾರ್ಗದ ರಸ್ತೆ ನಿರ್ಮಾಣ
Last Updated 14 ಜುಲೈ 2021, 19:30 IST
ಅಕ್ಷರ ಗಾತ್ರ

ರಾಯಚೂರು: ನಗರದಾದ್ಯಂತ ಒಳಚರಂಡಿ ನಿರ್ಮಿಸುವುದಕ್ಕಾಗಿ ಹಾಗೂ ನೀರಿನ ಪೈಪ್‌ಲೈನ್‌ ಅಳವಡಿಸುವುದಕ್ಕಾಗಿ ರಸ್ತೆಗಳನ್ನು ಅಗೆದುಹಾಕಿದ್ದ ಕಡೆಗಳಲ್ಲಿ ಮತ್ತೆ ಸಂಕಷ್ಟ ಶುರುವಾಗಿದೆ.

ಪಕ್ಕಾರಸ್ತೆಗಳನ್ನು ಅಗೆದು ಕಚ್ಚಾರಸ್ತೆ ಮಾಡಲಾಗಿದೆ. ಇದರಿಂದ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಮಣ್ಣುಕೊಚ್ಚಿ ಹೋಗುತ್ತಲೇ ಇದೆ. ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿ ಪಕ್ಕಾ ರಸ್ತೆಗಳನ್ನು ಮಾಡುತ್ತಿಲ್ಲ; ತೇಪೆ ಹಾಕಿದ್ದು ಉಳಿಯುತ್ತಿಲ್ಲ. ನಗರದ ಕೆಲವು ಕಡೆ ರಸ್ತೆಗಳು ಭತ್ತದ ಗದ್ದೆಗಳಂತೆ ಕಾಣುತ್ತಿವೆ.

ಆಶಾಪೂರ ಮಾರ್ಗದಲ್ಲಿ ಎಫ್‌ಸಿಐ ಗೋದಾಮಿನಿಂದ ನಗರವ್ಯಾಪ್ತಿ ಮುಗಿಯುವವರೆಗೆ ರಸ್ತೆ ನಿರ್ಮಿಸುವುದಕ್ಕೆ ಯೋಜನೆ ಮಾಡಲಾಗಿದೆ ಎಂದು ಜನಪ್ರತಿನಿಧಿಗಳು ಭರವಸೆ ನೀಡುತ್ತಲೇ ಬರುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಮುರಮ್‌ ಹಾಕಿದರೂ ಸಂಚಾರ ಸಂಕಷ್ಟ ಅನುಭವಿಸುವುದು ಕೊನೆಯಾಗುತ್ತಿಲ್ಲ. ಈ ರಸ್ತೆಯಲ್ಲಿ ವಾಹನ ಸವಾರರು ವರ್ಷದುದ್ದಕ್ಕೂ ಪರದಾಡುತ್ತಿದ್ದಾರೆ.

ಪಶ್ಚಿಮಠಾಣೆಯಿಂದ ಮಾವಿನಕೆರೆ ಮಾರ್ಗದ ರಸ್ತೆಯನ್ನು ಅಲ್ಲಲ್ಲಿ ಅಗೆಯಲಾಗಿತ್ತು. ಪುನಃ ಉತ್ತಮ ರಸ್ತೆ ಮಾಡದೆ ಇರುವುದರಿಂದ ಬಿಟಿ ಇದ್ದ ರಸ್ತೆಯು ಈಗ ಕಚ್ಚಾರಸ್ತೆಯಾಗಿ ಮಾರ್ಪಟ್ಟಿದೆ. ಸಾಧಾರಣ ಮಳೆಗೆ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಿರುಸಾಗಿ ಸುರಿದರೆ ರಸ್ತೆ ಕೊಚ್ಚಿಹೋಗುತ್ತದೆ.

ಆರ್‌ಟಿಓ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಪೂರ್ಣವಾಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮಳೆನೀರಿನಿಂದ ಮುರಮ್‌ ಕೊಚ್ಚಿಹೋಗಿದ್ದು ಗುಂಡಿಗಳು ನಿರ್ಮಾಣವಾಗಿವೆ. ಇದೇ ವೃತ್ತದಲ್ಲಿ ಮೂರು ರಸ್ತೆಗಳು ಸಂದಿಸುತ್ತದೆ. ಕಚ್ಚಾರಸ್ತೆ ಇರುವುದರಿಂದ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದೆ ದಟ್ಟಣೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಆರ್‌ಟಿಓ ಕಚೇರಿಗೆ ಬರುವ ಜನರು ಹಾಗೂ ವಾಹನಗಳು ನೆರೆದಿರುತ್ತವೆ. ಪಕ್ಕದಲ್ಲೇ ಸರ್ಕಾರಿ ಬಸ್‌ ಡಿಪೋ ಇದ್ದು, ಮೇಲಿಂದ ಮೇಲೆ ಬಸ್‌ಗಳು ಬರುತ್ತವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಲಾರಿಗಳು ಸಂಚರಿಸುತ್ತವೆ. ಸಾಕಷ್ಟು ಸಂಚಾರ ಒತ್ತಡ ನಿರ್ಮಾಣವಾಗುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ.

ನಗರದೊಳಗೆ ಮಹಾವೀರ ವೃತ್ತದಿಂದ ಭಂಗಿಕುಂಟಾ ಮಾರ್ಗ, ತೋಟದ ಬಾವಿಯಿಂದ ವಾಸವಿನಗರ ಮಾರ್ಗ, ಸಿಯಾತಾಲಾಬ್‌ ರಸ್ತೆ, ಐಬಿ ಕಾಲೋನಿ ರಸ್ತೆ ಸೇರಿದಂತೆ ಅನೇಕ ಕಡೆ ಮಳೆಗಾಲ ಮುಗಿಯುವವರೆಗೂ ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT