ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಟನ್ ಚಿನ್ನ ಉತ್ಪಾದನೆಗೆ ಸಜ್ಜು; ಕಾರ್ಯಕ್ಷಮತೆ ಹೆಚ್ಚಿಸಿಕೊಂಡ ಹಟ್ಟಿ ಗಣಿ ಕಂಪನಿ

Published 12 ಜನವರಿ 2024, 5:25 IST
Last Updated 12 ಜನವರಿ 2024, 5:25 IST
ಅಕ್ಷರ ಗಾತ್ರ

ರಾಯಚೂರು: ಪ್ರಸ್ತುತ ಲಾಭದಲ್ಲಿ ಮುಂದುವರಿದಿರುವ ಹಟ್ಟಿ ಚಿನ್ನದ ಗಣಿ ಕಂಪನಿಯು, ತನ್ನ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಮುಂದಾಗಿದೆ.

ಕಂಪನಿಯು ವಾರ್ಷಿಕ 2 ಸಾವಿರ ಕೆ.ಜಿ ಚಿನ್ನ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈಗ ಹೆಚ್ಚುವರಿಯಾಗಿ 2 ಸಾವಿರ ಕೆ.ಜಿ ಚಿನ್ನ ಉತ್ಪಾದಿಸುವ ದಿಸೆಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡಿದೆ.

ಕಂಪನಿಯ ಆವರಣದಲ್ಲಿಯೇ ₹59 ಕೋಟಿ ವೆಚ್ಚದಲ್ಲಿ ಇನ್ನೊಂದು ಹೊಸ ಬಾಲ್‌ ಮಿಲ್ ನಿರ್ಮಿಸಲಾಗಿದೆ. ಹೊಸ ಪ್ಲಾಂಟ್‌ನಲ್ಲಿ ಮೊದಲ ಹಂತವಾಗಿ 500 ಕೆ.ಜಿ ಉತ್ಪಾದನಾ ಕಾರ್ಯ ಆರಂಭವಾಗಿದ್ದು, ಏಜೆನ್ಸಿ ಮೂಲಕ ಅದರ ನಿರ್ವಹಣೆ ಮಾಡಲಿದೆ.

ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡ ಬಳಿಕ ಕಂಪನಿಯೇ ನೇರವಾಗಿ ಹೊಸ ಪ್ಲಾಂಟ್‌ನಲ್ಲಿ ಉತ್ಪಾದನೆ ಶುರು ಮಾಡಲಿದೆ. ಎಲ್ಲ ಕಾರ್ಯವೂ ಸುಗಮವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದೆ. ಇದರಿಂದ ಉತ್ಪಾದನೆಯ ಪ್ರತಿಯೊಂದು ಹಂತದ ಮೇಲೂ ನಿಗಾ ಇಡಲು ಸಾಧ್ಯವಾಗಿದೆ. 

ಕಂಪನಿಯು 528 ಹೆಕ್ಟೇರ್‌ ಪ್ರದೇಶವನ್ನು ಹೊಂದಿದೆ. ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಕೋಲಾರದಲ್ಲಿ ಚಿನ್ನದ ನಿಕ್ಷೇಪ ಇದೆ. ಆದರೆ, ಉತ್ಪಾದನಾ ವೆಚ್ಚವೇ ಅಧಿಕವಾಗುತ್ತಿರುವ ಕಾರಣ ಹಟ್ಟಿಯಲ್ಲಿ ಮಾತ್ರ ಉತ್ಪಾದನೆ ಮುಂದುವರಿದಿದೆ. 

ಹಟ್ಟಿಯಲ್ಲಿ 2,800 ಮೀಟರ್‌ ಆಳದಲ್ಲಿ ಚಿನ್ನದ ಅದಿರು ತೆಗೆಯಲಾಗುತ್ತಿದೆ. ಪ್ರತಿ ಟನ್‌ ಅದಿರಿನಲ್ಲಿ ಸರಾಸರಿ 19 ಗ್ರಾಂ ಚಿನ್ನ ಉತ್ದಾದನೆಯಾಗುತ್ತಿದೆ. 1984ರ ವರೆಗೆ ಪ್ರತಿ ಟನ್‌ ಅದಿರಲ್ಲಿ ಕೇವಲ 7 ಗ್ರಾಂ ಚಿನ್ನ ಲಭಿಸುತ್ತಿತ್ತು. ತಂತ್ರಜ್ಞಾನ ಮೇಲ್ದರ್ಜೆಗೇರಿಸಿದ ನಂತರ 2011ರ ವೇಳೆಯಲ್ಲಿ ಹೆಚ್ಚಿನ ಚಿನ್ನ ದೊರೆತಿದೆ. ಈವರೆಗೆ ಇಲ್ಲಿ 85 ಟನ್ ಚಿನ್ನ ಉತ್ಪಾದಿಸಲಾಗಿದೆ.

₹268 ಕೋಟಿ ಲಾಭ

ಕಂಪನಿಯು 2021–2022ರಲ್ಲಿ 1,238 ಕೆ.ಜಿ ಚಿನ್ನ ಉತ್ಪಾದಿಸಿ ₹626 ಕೋಟಿ ಲಾಭ ಗಳಿಸಿತ್ತು. ರಾಜ್ಯ ಸರ್ಕಾರಕ್ಕೆ ₹30.8 ಕೋಟಿ ತೆರಿಗೆ ಪಾವತಿಸಿತ್ತು. 2022–2023ರಲ್ಲಿ 1,411 ಚಿನ್ನ ಉತ್ಪಾದಿಸಿ, ₹828 ಕೋಟಿ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಜೊತೆಗೆ ₹39.1 ಕೋಟಿ ರಾಜಸ್ವವನ್ನೂ ಪಾವತಿ ಮಾಡಿತ್ತು.

‘2023ರ ಏಪ್ರಿಲ್‌ನಿಂದ ಕಂಪನಿಯು ₹268 ಕೋಟಿ ಲಾಭ ಗಳಿಸಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಸಂಜಯ ಶೆಟ್ಟೆಣ್ಣನವರ್ ಹೇಳಿದರು. ‘ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ, ಸಿರವಾರ ತಾಲ್ಲೂಕಿನ ಹಿರಾಬುದ್ದಿನ್ನಿ ಹಾಗೂ ದೇವದುರ್ಗ ತಾಲ್ಲೂಕಿನ ಊಟಿ ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಇದೆ. ಹೊಸದಾಗಿ 14 ಬ್ಲಾಕ್‌ಗಳಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ’ ಎನ್ನುತ್ತಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT