ಬುಧವಾರ, ಅಕ್ಟೋಬರ್ 21, 2020
23 °C
ಎಐಡಿಎಸ್‍ಒ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ಪ್ರತಿಭಟನೆ

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶದಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈತ- ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ ಆರ್ಗನೈಸೇಶನ್ (ಎಐಡಿಎಸ್‍ಒ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆ, ಅಗತ್ಯವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ, ಭೂಸುಧಾರಣೆ ಕಾಯ್ದೆಗಳನ್ನು ತಿದ್ದುಪಡಿ ತಂದಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಕಾಯ್ದೆಗಳು ರೈತ-ಕಾರ್ಮಿಕ ವಿರೋಧಿಗಳಾಗಿದ್ದು ಸರ್ಕಾರ ಕೂಡಲೇ ಎಲ್ಲಾ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕು. ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿದ್ದು ಇದರ ವಿರುದ್ದ ಕಠಿಣ ಕಾನೂನು ಜಾರಿಗೊಳಿಸಿ ನಿಯಂತ್ರಿಸಬೇಕು ಎಂದರು.

ಜಿಲ್ಲಾಡಳಿತ ಕಚೇರಿಯ ಅಧಿಕಾರಿಯ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹೇಶ್ ಚೀಕಲಪರ್ವಿ, ಪದಾಧಿಕಾರಿಗಳಾದ ಅಪೂರ್ವ, ಪೀರ್ ಸಾಬ್, ಕಾರ್ತಿಕ, ಅಮೋಘ, ಬಸವರಾಜ, ಹೇಮಂತ ಇದ್ದರು.

ಮಹಿಳೆಯರಿಂದ ಖಂಡನೆ: ಉತ್ತರ ಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣವನ್ನು ಖಂಡಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ನ್ಯಾಷನಲ್ ವುಮೆನ್ಸ್ ಫ್ರಂಟ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಹಿಳೆಯರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಮಂಗಳವಾರ  ಧರಣಿ ನಡೆಸಿದರು.

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಅತ್ಯಾಚಾರ, ಪತ್ರಕರ್ತರ, ಪರಿಶಿಷ್ಟರ ಮೇಲೆ ದೌರ್ಜನ್ಯ , ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರಜಾತಾಂತ್ರಿಕ ವ್ಯವಸ್ಥೆಯ ನಿಯಮ ಗಾಳಿಗೆ ತೂರಲಾಗಿದೆ. ಪ್ರಕರಣ ಮುಚ್ಚಿಹಾಕುವ ಪೊಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ‍ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜನಾಂದೋಲನ ಮಹಾಮೈತ್ರಿಯ ಖಾಜಾ ಸ್ಲಂ, ಜಾನ್ ವೆಸ್ಲಿ, ವಿವಿಧ ಸಂಘದ ಮುಖಂಡರಾದ ಮಾರಪ್ಪ ಹರವಿ, ಆಂಜಿನಯ್ಯ ಕುರುಬದೊಡ್ಡಿ, ನರಸಿಂಹಲು, ಸಬಿಹಾ, ನಸ್ರೀನ್, ಯಾಸ್ಮೀನ್, ಮಾಹೀನ್ ಬೇಗಂ ಇದ್ದರು.

ದಲಿತ ಸಂಘರ್ಷ ಸಮಿತಿ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತ್ಯೇಕವಾಗಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಉತ್ತರ ಪ್ರದೇಶ ಆಡಳಿತವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಸಂಚಾಲಕ ಎಚ್.ರಂಗಪ್ಪ ಹೆಗಡೆ, ಎಂ.ಬಿ.ಮಾರೆಪ್ಪ, ಮಂಜುನಾಥ, ರಂಗನಾಥ, ಶರಣಪ್ಪ, ಶಿವಣ್ಣ ಮ್ಯಾಗೇರಿ  ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು