ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಕೃಷಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ

Published : 23 ಸೆಪ್ಟೆಂಬರ್ 2024, 14:34 IST
Last Updated : 23 ಸೆಪ್ಟೆಂಬರ್ 2024, 14:34 IST
ಫಾಲೋ ಮಾಡಿ
Comments

ರಾಯಚೂರು: ಭೂ ರಹಿತರಿಗೆ ಭೂಮಿ, ನಿವೇಶನ ರಹಿತರಿಗೆ ವಸತಿ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಹಲವೆಡೆ ಸಣ್ಣಪುಟ್ಟ ರೈತರು ಅನೇಕ ವರ್ಷಗಳಿಂದ ಅರಣ್ಯ ಇಲಾಖೆಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು ಭೂಕಬಳಿಕೆಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿ ಒತ್ತುವರಿ ಮಾಡುತ್ತಿರುವವರನ್ನು ಕಡೆಗಣಿಸಿ ರೈತರನ್ನು ಮಾತ್ರ ಗುರಿಯಾಗಿಸಿ ಕಾನೂನುಗಳನ್ನು ಪ್ರಯೋಗಿಸಲಾಗುತ್ತಿದೆ ಎಂದು ದೂರಿದರು.

ರೈತರು ತಮ್ಮ ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಮೂರು ಎಕರೆ ವರೆಗಿನ ಒತ್ತುವರಿ ತೆರವುಗೊಳಿಸಬಾರದು ಎಂದು ರಾಜ್ಯ ಸರ್ಕಾರ 2015ರಲ್ಲಿಯೇ ನಿರ್ಧಾರ ಕೈಗೊಂಡಿತ್ತು. ಅಂತಹ ರೈತರ ವಿರುದ್ಧ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ತಡೆಯುವ ಅವಕಾಶವಿದ್ದರೂ ರೈತರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಾವಿರಾರು ಎಕರೆ ಭೂ ಮಾಲೀಕರು ಅನಧಿಕೃತವಾಗಿ ಭುಮಿ ಒತ್ತುವರಿ ಮಾಡಿಕೊಂಡಿದ್ದು ಒಂದೆಡೆಯಾದರೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 7 ದಶಕಗಳಾದರೂ ಅಸಂಖ್ಯಾತ ಜನರಿಗೆ ಕನಿಷ್ಠ ವಾಸಮಾಡಲು ನಿವೇಶನ ವಸತಿ ಸೌಕರ್ಯವಿಲ್ಲ. ಸಾವಿರಾರು ಜನ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದರೂ ಅಕ್ರಮ ಸಕ್ರಮ ಯೋಜನೆಯಡಿ ಪಟ್ಟಾ ನೀಡದೇ ಕಚೇರಿಗಳಿಗೆ ಅಲೆದಾಡಬೇಕಿದೆ ಎಂದು ದೂರಿದರು.

ಅರಣ್ಯ ಹಾಗೂ ಎಲ್ಲ ಬಗೆಯ ಸರ್ಕಾರಿ ಭುಮಿಯಲ್ಲಿ ಸಾಗುವಳಿ ಮಾಡುತ್ತಿರುವ ಹಾಗೂ ಅರಣ್ಯ ಹಕ್ಕುಗಳಿಗೆ ಅರ್ಜಿ ಹಾಕಿದ ಎಲ್ಲ ರೈತರಿಗೆ ಭೂ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು. ಪ್ರತಿ ಗ್ರಾಮದಲ್ಲಿ ಸರ್ವೆ ನಡೆಸಿ ಮನೆ, ನಿವೇಶನ ಇಲ್ಲದವರಿಗೆ ಭೂಮಿ ಹಂಚಬೇಕು ಎಂದು ಮನವಿ ಮಾಡಿದರು.

ಫಾರಂ ನಂಬರ್ 57 ರ ಅಡಿಯಲ್ಲಿ ಅರ್ಜಿ ಹಾಕಲು ಅವಕಾಶ ನೀಡಬೇಕು. ನರೇಗಾ ಯೋಜನೆಯಡಿ ₹600 ಕೂಲಿ ಹಣ ಹೆಚ್ಚಿಸಿ, ಉದ್ಯೋಗ ಇಲ್ಲದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಅಂಗವಿಕಲರಿಗೆ ₹3 ಸಾವಿರ, ವಿಧವೆಯರ ಹಾಗೂ ವೃದ್ಧರ ಮಾಸಾಶನವನ್ನು ತಲಾ ₹2000 ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ನಾಗರಾಜ ಪೂಜಾರ, ಜಿಲ್ಲಾ ನಾಗರಾಜ ಪೂಜಾರ್, ಸಿಪಿಐಎಂಎಲ್ ಲಿಬರೇಶನ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಪಿ.ಪಿ. ಅಪ್ಪಣ್ಣ, ಆರ್ ಎಚ್ ಕಲ್ಮಂಗಿ, ಬಸವರಾಜ ಬೇಳಗುರ್ಕಿ, ರಂಗಪ್ಪ, ಬಸವರಾಜ ರಾಮಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT