ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ಅಕ್ರಮ: ನ್ಯಾಯಾಂಗ ತನಿಖೆ ನಡೆಸಲು ಒತ್ತಾಯ

Last Updated 10 ಮೇ 2022, 13:31 IST
ಅಕ್ಷರ ಗಾತ್ರ

ರಾಯಚೂರು: ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ 545 ಪಿಎಸ್‍ಐ ನೇಮಕಾತಿಗಾಗಿ ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯು ಅಕ್ರಮಗಳ ಕೂಪವಾಗಿದೆ. ಅಕ್ರಮದಲ್ಲಿರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಹೆಸರುಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಹೆಸರುಗಳು ಬಯಲಿಗೆ ಬಿದ್ದಿವೆ. ಏತನ್ಮಧ್ಯೆ ಸರ್ಕಾರ ಇನ್ನೂ ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗಲೇ ನಡೆದಿರುವ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಪ್ರಕಟಿಸಿದೆ. ತನಿಖೆ ಪೂರ್ಣಗೊಳ್ಳದೇ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡುತ್ತಿದೆ ಎಂದು ದೂರಿದರು.

ಪಿಎಸ್ಐ ಹಗರಣದ ಬಳಿಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಹಗರಣ ಹೊರಬಿದ್ದಿದೆ. ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳಿಗಾಗಿ ಕಾಲೇಜು ಶಿಕ್ಷಣ ಇಲಾಖೆ 1,242 ಹುದ್ದೆಗಳ ಭರ್ತಿಗಾಗಿ ಕಳೆದ ಅಕ್ಟೋಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಮಾರ್ಚ್ 14ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ಮುನ್ನವೇ ಭೂಗೋಳಶಾಸ್ತ್ರದ 18 ಪ್ರಶ್ನೆಗಳ ಫೋಟೋ ವ್ಯಾಟ್ಸಾಪ್‍ಗಳಲ್ಲಿ ಹರಿದಾಡಿದ್ದವು.

ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದ ಆರೋಪದಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಎಚ್.ನಾಗರಾಜ ಹಾಗೂ ಅವರ ಪಿಎಚ್‍ಡಿ ವಿದ್ಯಾರ್ಥಿನಿ ಆರ್.ಸೌಮ್ಯ ಅವರನ್ನು ಬಂಧಿಸಲಾಗಿದೆ.

ಅರ್ಜಿ ಹಾಕಿ ಹಗಲು-ರಾತ್ರಿ ಅಭ್ಯಾಸ ನಡೆಸಿ ನೇಮಕಾತಿಗೆ ಪ್ರಯತ್ನ ಮಾಡುವುದು ಒಂದೆಡೆಯಾದರೆ ಭ್ರಷ್ಟಾಚಾರ, ಅಕ್ರಮದ ದಾರಿ ಹಿಡಿದಿದ್ದರಿಂದ ಅರ್ಹ, ಪ್ರತಿಭಾವಂತ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುವಂತಾಗಿದ್ದು ದುಡ್ಡಿದ್ದರೆ ಹುದ್ದೆ ಎನ್ನುವಂತಾಗಿದೆ.

ಕೂಡಲೇ ಪ್ರಕರಣವನ್ನು ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಕ್ಷೆ ವಿಧಿಸಬೇಕು ಮತ್ತು ರಾಜ್ಯದ ಯುಜನತೆಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ, ನಿರುದ್ಯೋಗಿ ಯುವಜನ ಹೋರಾಟ ಸಮಿತಿಯ ಮುಖಂಡ ಡಾ.ಹನುಮಂತ ಕುರ್ಡಿ, ರಾಮಚಂದ್ರಪ್ಪ, ಮೌನೇಶ, ಜಾಫರ, ಪ್ರವೀಣ್, ಖಾಜಿ, ಆಕಾಶ, ರಿಯಾಜ, ಸುರೇಶ, ಬಾಬು, ಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT