ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಕ್ಕಾಗಿ ಸಾರ್ವಜನಿಕರ ಕೂಗು

ಕಾದಿಟ್ಟ ಉದ್ಯಾನದ ಜಾಗ ಭೂಗಳ್ಳರ ಪಾಲು
ಶರಣಪ್ಪ ಆನೆಹೊಸೂರು
Published 29 ಡಿಸೆಂಬರ್ 2023, 5:42 IST
Last Updated 29 ಡಿಸೆಂಬರ್ 2023, 5:42 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದಲ್ಲಿ ವಾರ್ಡ್‌ಗೊಂದು ಉದ್ಯಾನ ನಿರ್ಮಿಸಲು ಸಾರ್ವಜನಿಕರಿಂದ ಕೂಗು ಹೆಚ್ಚಿದೆ. ಆದರೆ, ಪುರಸಭೆ ಅಧಿಕಾರಿಗಳು ಉದ್ಯಾನ ನಿರ್ಮಿಸಲು ಚಿತ್ತ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗ್ರಾಮದಿಂದ ಮಹಾನಗರದವರೆಗೂ ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನ ನಿರ್ಮಿಸಿ ಹಸಿರು ಸೃಷ್ಟಿಸಬೇಕು ಎಂಬ ಕಾನೂನು ಇದ್ದರೂ, ಮುದಗಲ್ ಪಟ್ಟಣದಲ್ಲಿ ಈ ಎಲ್ಲವನ್ನು ಗಾಳಿಗೆ ತೂರಿ ‘ಉದ್ಯಾನ’ವನ್ನೇ ಕಾಣದೆ ಭಣಗುಡುವ ಪರಿಸ್ಥಿತಿ ಎದುರಾಗಿದೆ.

ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿ 6 ವರ್ಷಗಳಾಗಿವೆ. ಪಟ್ಟಣದ ಭೂ ಪ್ರದೇಶ ವಿಸ್ತರಿಸಿ ಆಡಳಿತಾತ್ಮಕ ವೆಚ್ಚವನ್ನೂ ಹಿಗ್ಗಿಸಿಕೊಂಡಿದೆ. ಇದರ ಪರಿಣಾಮ ಸಾರ್ವಜನಿಕರಿಗೆ ತೆರಿಗೆ ಹೆಚ್ಚಿಸಿದ್ದನ್ನು ಹೊರತುಪಡಿಸಿ ಬೇರಾವುದೇ ಅನುಕೂಲ ಆಗಿಲ್ಲ.

ಮುದಗಲ್ ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 35 ರಿಂದ 45 ಸಾವಿರ ಜನಸಂಖ್ಯೆ ಇದ್ದು, ಪುರಸಭೆ ತನ್ನ ಆಡಳಿತ ಸುಧಾರಣೆಗೆ 23 ವಾರ್ಡ್ ರೂಪಿಸಿದೆ. ಈ ವಾರ್ಡ್‌ಗಳಿಗೆ ಒಂದೊಂದು ಉದ್ಯಾನ ನಿರ್ಮಿಸಬೇಕು ಎಂಬ ಪರಿಕಲ್ಪನೆ ಇಲ್ಲದಂತಾಗಿದೆ. ಉದ್ಯಾನಕ್ಕೆ ಮೀಸಲಿಟ್ಟ ನಿವೇಶನಗಳು ಭೂಗಳ್ಳರ ಪಾಲಾಗುತ್ತಿವೆ. ಮುದಗಲ್ ಪುರಸಭೆ ಉದ್ಯಾನ ನಿರ್ಮಿಸಲು ಮುಂದಾಗಲಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಉದ್ಯಾನವು ಮಕ್ಕಳ ಹಾಗೂ ವೃದ್ಧರ ಹಕ್ಕು. ಈ ಹಕ್ಕನ್ನು ಪುರಸಭೆ ಕಿತ್ತುಕೊಂಡಿದೆ. ಇದರಿಂದಾಗಿ ಮಕ್ಕಳಿಗೆ ಮಾನಸಿಕ, ದೈಹಿಕ ಚಟುವಟಿಕೆಗೆ ಸ್ಥಳವೇ ಇಲ್ಲದೆ ಪಟ್ಟಣದಲ್ಲಿ ಪ್ರದೇಶ ಹೆಚ್ಚುತ್ತಿರುವುದು ಮಾರಕ. ಪಟ್ಟಣದ ವ್ಯಾಪ್ತಿಯಲ್ಲಿ ಕನಿಷ್ಠ 15 ರಿಂದ 22 ಸಾವಿರ ಮಕ್ಕಳಿದ್ದು, ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನದ ಅವಶ್ಯಕತೆ ಇದ್ದು, ಪುರಸಭೆ ತಾತ್ಸಾರ ತೋರಿಸುತ್ತಿದೆ. ಮಕ್ಕಳಿಗೆ ರಸ್ತೆಯೇ ಆಟದ ಮೈದಾನವಾಗಿದೆ. ಕೆಲ ವಾರ್ಡ್ ಗಳಲ್ಲಿ ಹೊಸ ಲೇಔಟ್‌ನಲ್ಲಿ ಉದ್ಯಾನಕ್ಕೆ ಕಾದಿಟ್ಟ ಜಾಗ ಭೂಗಳ್ಳರ ಪಾಲಾಗುತ್ತಿದೆ.

ಪುರಸಭೆ ಮುಂದೆ ಇದ್ದ ಉದ್ಯಾನವನ್ನು ಹಾಳುಗೆಡವಿ, ಈಗ ಆ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದ್ದಾರೆ. ಮೇಗಳಪೇಟೆಯಲ್ಲಿ ಉದ್ಯಾನಕ್ಕೆ ಎಂದು ಕಾದಿಟ್ಟ ಸ್ಥಳದಲ್ಲಿ ಅಲೆಮಾರಿ ಗ್ರಂಥಾಲಯ ನಿರ್ಮಿಸಿದ್ದಾರೆ. ರಾಮಲಿಂಗೇಶ್ವರ ಕಾಲೊನಿಯಲ್ಲಿ ಉದ್ಯಾನಕ್ಕೆ ಕಾದಿಟ್ಟ ಸ್ಥಳ ಒತ್ತುವರಿಯಾಗಿ. ಪಟ್ಟಣದಲ್ಲಿ ಉದ್ಯಾನ ಇಲ್ಲದೆ ಮಕ್ಕಳು ಪರಿತಪ್ಪಿಸುವಂತಾಗಿದೆ. ಉದ್ಯಾನ ನಿರ್ಮಾಣ ಕಡೆ ಪುರಸಭೆ ಅಧಿಕಾರಿಗಳಾಗಲಿ ಇಲ್ಲವೇ ಜನ ಪ್ರತಿನಿಧಿಗಳಾಗಲಿ ಯಾರು ಗಮನ ಹರಿಸುತ್ತಿಲ್ಲ.

Quote - ಅಧಿಕಾರಿಗಳು ಜನ ಪ್ರತಿನಿಧಿಗಳು ಗಮನ ಹರಿಸಿ ಪ್ರತಿ ವಾರ್ಡ್‌ಗೆ ಒಂದೊಂದು ಉದ್ಯಾನ ನಿರ್ಮಿಸಬೇಕು ಶರಣಪ್ಪ ಕಟ್ಟಿಮನಿ ಡಿಎಸ್‌ಎಸ್‌ ಮುಖಂಡ

Quote - ಉದ್ಯಾನಕ್ಕೆ ಮೀಸಲಿಟ್ಟ ನಿವೇಶನಗಳು ಭೂಗಳ್ಳರ ಪಾಲಾಗುತ್ತಿವೆ ಎಂಬುದು ಗಮನಕ್ಕೆ ಬಂದಿದೆ. ಇದನ್ನು ಪರಿಶೀಲಿಸಿ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳುತ್ತೇನೆ ನಬಿ ಎಂ.ಕಂದಗಲ್ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT