ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಓದಲು ಸ್ಫೂರ್ತಿ ತುಂಬಿದ ‘ಸ್ಪರ್ಧಾ ಮಾರ್ಗದರ್ಶಿ’

‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ನಿಂದ ಚಾಣಕ್ಯ ಕರಿಯರ್‌ ಅಕಾಡೆಮಿ ಸಹಯೋಗದಲ್ಲಿ ಉಚಿತ ಮಾರ್ಗದರ್ಶನ
Last Updated 6 ಜನವರಿ 2020, 13:31 IST
ಅಕ್ಷರ ಗಾತ್ರ

ರಾಯಚೂರು: ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ನಿಂದ ವಿಜಯಪುರದ ‘ಚಾಣಕ್ಯ ಕರಿಯರ್‌ ಅಕಾಡೆಮಿ’ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಸ್ಪರ್ಧಾ ಮಾರ್ಗದರ್ಶಿ’ ಉಚಿತ ಒಂದು ದಿನದ ಮಾರ್ಗದರ್ಶನ ಕಾರ್ಯಾಗಾರಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.

ಅಧಿಕಾರಿಗಳಾಗಲು ಅಧ್ಯಯನವೇ ಬೂನಾದಿ ಎಂಬುದನ್ನು ಚಾಣಕ್ಯ ಕರಿಯರ್‌ ಅಕಾಡೆಮಿಯ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮತ್ತು ಉಪವಿಭಾಗಾಧಿಕಾರಿ ಸಂತೋಷಕುಮಾರ್‌ ಎಸ್‌.ಕೆ. ಅವರು ಮನನ ಮಾಡಿಸಿದರು. ಕಾರ್ಯಾಗಾರದಲ್ಲಿ ತಾತ್ವಿಕ ಉಪನ್ಯಾಸಕ್ಕಿಂತಲೂ ಸ್ವಂತ ಅನುಭವ ಹಂಚಿಕೊಂಡಿದ್ದು, ಹೆಚ್ಚುಹೆಚ್ಚು ಓದುವುದಕ್ಕೆ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಯಿತು.

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾರ್ಗದರ್ಶನ ಮಾಡಿದರು. 10ನೇ ತರಗತಿವರೆಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೇಗೆ ಸೆಳೆತ ಹೆಚ್ಚಾಯಿತು ಎಂಬುದರ ಬಗ್ಗೆ ಅವರ ಅನುಭವ ರೋಮಾಂಚನಕಾರಿಯಾಗಿತ್ತು. ಬಡತನ ಹಿನ್ನೆಲೆಯಲ್ಲಿ ಬೆಳೆದಿರುವ ವೇದಮೂರ್ತಿ ಅವರು, ನೌಕರಿ ಸಿಗುವುದು ಖಚಿತ ಎಂಬುದನ್ನು ಅರಿತು ಪಶುವೈದ್ಯಕೀಯದಲ್ಲಿ ಪದವಿ ಓದಿದರು. ಆನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗೆ ಆಯ್ಕೆಯಾದರು.

‘ಅಧ್ಯಯನ ಮಾಡುವ ವಿಷಯದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳಿಗಿರುವ ಗಂಭೀರತೆಗೆ ಹೋಲಿಕೆ ಮಾಡಿದರೆ, ಕರ್ನಾಟಕದ ವಿದ್ಯಾರ್ಥಿಗಳು ಸಲೀಸಾಗಿರುತ್ತಾರೆ. ಜೊತೆಯಲ್ಲಿದ್ದವರು ಉನ್ನತ ಹುದ್ದೆಗೆ ಆಯ್ಕೆಯಾದಾಗಲೆ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚು ಒಲವು ಮೂಡುತ್ತದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ರಾಯಚೂರು ಉಪವಿಭಾಗಾಧಿಕಾರಿ ಸಂತೋಷಕುಮಾರ್‌ ಎಸ್‌.ಕೆ. ಅವರು ಒಂದೂವರೆ ತಾಸು ನಡೆಸಿದ ಸಂವಾದಸಹಿತ ಮಾರ್ಗದರ್ಶನವು ವಿಶೇಷವಾಗಿತ್ತು. ಎಲ್ಲರ ಮನಸ್ಸನ್ನು ಕೇಂದ್ರಿಕೃತಗೊಳಿಸಿದ್ದ ಸಂತೋಷ ಅವರು ವರ್ಗದ ಕೋಣೆಗಳಲ್ಲಿ ಪ್ರಾಧ್ಯಾಪಕರು ಹೇಳುವ ರೀತಿಯಲ್ಲಿಯೇ ಪಾಠ ಮಾಡಿದಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳ ದಾರಿ ಹೇಗಿದೆ ಎಂಬುದರ ನಿಚ್ಚಳ ಮಾರ್ಗ ತೋರಿಸಿದರು.

‘ನಾಲ್ಕನೇ ಇಯತೇ ಓದಿದ್ದ ತಾಯಿಯ ಮಾರ್ಗದರ್ಶನವು ಈ ಹುದ್ದೆಗೆ ಬರಲು ಪ್ರೇರಣೆಯಾಯಿತು. ಬೆಳಗಾವಿ ಜಿಲ್ಲೆಯ ಬೆಲ್ಲದಬಾಗೇವಾಡಿಯಲ್ಲಿ ಒಂದು ಎಕರೆ ಸ್ವಂತ ಜಮೀನು ಮಾತ್ರ ಇದೆ. ಕೃಷಿಯಲ್ಲಿ ಪ್ರತಿಯೊಂದು ಕೆಲಸ ಮಾಡಿಕೊಂಡು, ಅದರಲ್ಲೇ ಬಿಡುವು ಮಾಡಿಕೊಂಡು ಓದಿದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಂಚೆ ಕಚೇರಿಯಲ್ಲಿ ಸಣ್ಣದೊಂದು ಹುದ್ದೆಗೆ ಆಯ್ಕೆಯಾದೆ. ನೌಕರಿ ಸಿಕ್ಕಿತು ಎಂದು ಮೈಮರೆತು ಕುಳಿತುಕೊಳ್ಳಲಿಲ್ಲ. ಮತ್ತೆ ಓದಿದ್ದರಿಂದ ಉನ್ನತ ಹುದ್ದೆಗೆ ಬರಲು ಸಾಧ್ಯವಾಯಿತು’ ಎಂದು ವೈಯಕ್ತಿಕ ಅನುಭವ ತೆರೆದಿಟ್ಟರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳುವವರಿಗೆಲ್ಲ ಚಾಣಕ್ಯ ಕರಿಯರ್‌ ಅಕಾಡೆಮಿಯಿಂದ ಐಎಎಸ್‌, ಕೆಎಎಸ್‌’ ಮಾರ್ಗದರ್ಶನವಾಗುವ ಉಚಿತ ಕೈಪಿಡಿಯೊಂದನ್ನು ವಿತರಿಸಲಾಯಿತು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪೂರಕವಾಗುವ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಾರ್ಯಾಗಾರದಲ್ಲಿ ಟಿಪಿಎಂಎಲ್‌ ಹುಬ್ಬಳ್ಳಿ ವಲಯದ ಪ್ರಸರಣ ವಿಭಾಗದ ಎಜಿಎಂ ಶಿವರಾಜ ನರೋಣಾ, ಕಲಬುರ್ಗಿ ಬ್ಯುರೋ ಪ್ರಸರಣ ವಿಭಾಗದ ಸಿನಿಯರ್‌ ಮ್ಯಾನೇಜರ್‌ ಅಶೋಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT