ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮತ್ತೆ 35 ಜನರಿಗೆ ದೃಢ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 268 ಕ್ಕೆ ಏರಿಕೆ
Last Updated 3 ಜೂನ್ 2020, 17:19 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಆರೋಗ್ಯ ಇಲಾಖೆಯು ಬುಧವಾರ ಸಂಜೆ ಪ್ರಕಟಿಸಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ಮತ್ತೆ 35 ಕೋವಿಡ್‌ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 268 ಕ್ಕೆ ಏರಿಕೆಯಾಗಿದೆ.

35 ಜನರಲ್ಲಿ ಕೋವಿಡ್‌ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದರಿಂದ ದೃಢವಾಗಿರುವ ಐದು ಮಂದಿ ಇದ್ದು, 14 ವರ್ಷ ಬಾಲಕ, ಒಬ್ಬರು 73 ವರ್ಷದ ವೃದ್ಧ, 30 ವರ್ಷ ಮಹಿಳೆ ಇದ್ದಾರೆ. ಇನ್ನುಳಿದ 30 ಜನರು ಮಹಾರಾಷ್ಟ್ರದಿಂದ ಬಂದವರು. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇರುವವರ ಮಾಹಿತಿ ಕಲೆಹಾಕಿ ಕ್ವಾರಂಟೈನ್‌ ಮಾಡುವ ಕೆಲಸ ಮುಂದುವರಿದಿದೆ.

ಹೊಸದಾಗಿ 341 ಸ್ಯಾಂಪಲ್‌ ಸಂಗ್ರಹ: ಜಿಲ್ಲೆಯ ದೇವದುರ್ಗ ತಾಲ್ಲೂಕಿನಿಂದ 176, ಲಿಂಗಸೂಗೂರು ತಾಲ್ಲೂಕಿನಿಂದ 97, ಮಾನ್ವಿ ತಾಲ್ಲೂಕಿನಿಂದ 38 ಮತ್ತು ರಾಯಚೂರು ತಾಲ್ಲೂಕಿನಿಂದ 30 ಸೇರಿದಂತೆ 341 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಿಂದ ಇದೂವರೆಗೆ 16,560 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 15,141 ವರದಿಗಳು ನೆಗೆಟಿವ್ ಆಗಿವೆ. ಉಳಿದ 1,145 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.

ವಲಸೆಗಾರರ ಆಗಮನ: ಮಹಾರಾಷ್ಟ್ರ ರಾಜ್ಯದಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳವಾರ 48, ತಿರುಪತಿ ನಿಜಾಮಬಾದ್ ರೈಲಿನ ಮೂಲಕ 26 ಹಾಗೂ ನಿಜಾಮಬಾದ್ ತಿರುಪತಿ ರೈಲಿನ ಮೂಲಕ 6 ಜನರು ಸೇರಿದಂತೆ ಜಿಲ್ಲೆಗೆ ಒಟ್ಟು 70 ವಲಸೆಗಾರರು ಆಗಮಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ನಿಗದಿತ ಸಾಂಸ್ಥಿಕ ಕ್ವಾರಂಟೈನ್, ಗೃಹ ಕ್ವಾರಂಟೈನ್, ವಸತಿಗೃಹ ದಿಗ್ಭಂದನಕ್ಕೆ ಒಳಪಡಿಸಲಾಗಿದೆ.

ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಮೇಲುಸ್ತುವಾರಿ ಸಮಿತಿ ರಚನೆ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೇರೆ ರಾಜ್ಯಗಳಿಂದ ಮತ್ತು ಬೇರೆ ಜಿಲ್ಲೆಗಳಿಂದ ಬರುವ ವ್ಯಕ್ತಿಗಳಿಗೆ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಿದವರನ್ನು ವೀಕ್ಷಿಸಲು ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ.

ಸಮಿತಿಯು ಹೋಂ ಕ್ವಾರೆಂಟೈನ್ ನಲ್ಲಿರುವವರಲ್ಲಿ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟ ತೊಂದರೆ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದೆ. ಹೋಂ ಕ್ವಾರೆಂಟೈನ್‌ಗೆ ಒಳಪಡಿಸುವ ಮುನ್ನ ಕೈಗೆ ಕಡ್ಡಾಯವಾಗಿ ಮುದ್ರೆ ಹಾಕಬೇಕು, ಹೋಂ ಕ್ವಾರೆಂಟೈನ್ ನಲ್ಲಿರುವವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

ಎಸ್‌ಎಆರ್‌ಐ ಪ್ರಕರಣಗಳನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಬೇಕು ಹಾಗೂ ಐಎಲ್‌ಐ ಸಂಶಯಾಸ್ಪದ ಪ್ರಕರಣಗಳನ್ನು ಪರೀಕ್ಷೆ ಮಾಡಬೇಕು ಹಾಗೂ ರಿಮ್ಸ್ ಆಸ್ಪತ್ರೆಯ ಆರ್‌ಟಿ- ಪಿಸಿಆರ್ ಪ್ರಯೋಗಾಲಯಕ್ಕೆ ಪ್ರತಿ ದಿನ ಮೂರು ಪಾಳೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಮೇಲು ಉಸ್ತುವಾರಿ ಮಾಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT