ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಏಮ್ಸ್: ಸಚಿವರ ನಡೆಗೆ ಆಕ್ರೋಶ

ಪ್ರಾಣ ಬಿಡುವೆವು, ಏಮ್ಸ್ ಬಿಡುವುದಿಲ್ಲ: ಅಶೋಕಕುಮಾರ್ ಜೈನ್ ಎಚ್ಚರಿಕೆ
Published 9 ಜೂನ್ 2023, 5:56 IST
Last Updated 9 ಜೂನ್ 2023, 5:56 IST
ಅಕ್ಷರ ಗಾತ್ರ

ರಾಯಚೂರು: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಕಲಬುರಗಿ ಜಿಲ್ಲೆಯಲ್ಲಿ ಸ್ಥಾಪನೆ ಕುರಿತು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಹೇಳಿಕೆ ನೀಡಿದ್ದು ಖಂಡನೀಯ. ಏಮ್ಸ್‌ಗಾಗಿ ಅನೇಕ ಹೋರಾಟ ಮಾಡಿದ್ದು ಪ್ರಾಣ ಬಿಡುವೆವು, ಏಮ್ಸ್ ಬಿಡುವುದಿಲ್ಲ ಎಂದು ಏಮ್ಸ್ ಹೋರಾಟ ಸಮಿತಿಯ ಮುಖಂಡ ಅಶೋಕಕುಮಾರ್ ಜೈನ್ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ 392 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದೇವೆ. ವಿವಿಧ ಹಂತಗಳ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಸ್ಪಂದಿಸಿ ಗೃಹ ಸಚಿವ ಜಿ.ಪರಮೇಶ್ವರ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದ್ದರು ಎಂದರು.

ಆದರೆ, ಈಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಕಲಬುರಗಿಗೆ ಏಮ್ಸ್ ಮಾದರಿ ಆಸ್ಪತ್ರೆ ಬೇಕು ಎಂದಿರುವುದು ಖಂಡನೀಯ. ಕಲ್ಯಾಣ ಕರ್ನಾಟಕ ಎಂದರೆ ಕೇವಲ ಕಲಬುರಗಿ ಮಾತ್ರವಲ್ಲ. ಹಿಂದುಳಿದ ರಾಯಚೂರನ್ನು ಪರಿಗಣಿಸಬೇಕು. ಐಐಟಿಯನ್ನು ಧಾರವಾಡಕ್ಕೆ ಕೊಂಡ್ಯೊಯ್ಯಲಾಯಿತು. ಈಗ ಏಮ್ಸ್ ಕಲಬುರಗಿಗೆ ಮಂಜೂರು ಮಾಡಿಲು ಹುನ್ನಾರ ನಡೆಸಿದ್ದು ಸರಿಯಲ್ಲ ಎಂದು ದೂರಿದರು.

ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು. ಇದಕ್ಕೆ ಜಿಲ್ಲೆಗೆ ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕರಾಗಿ ಧ್ವನಿ ಎತ್ತಬೇಕು ಹಾಗೂ ಜಿಲ್ಲೆಯ ಸಚಿವ ಎನ್‌. ಎಸ್. ಬೋಸರಾಜು ಅವರು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿ ಜಿಲ್ಲೆಯ ಏಕೈಕ ಹೆಸರು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಅಡ್ಡಗಾಲು ಹಾಕುತ್ತಿರುವ ಸಚಿವ ಶರಣಪ್ರಕಾಶ ಪಾಟೀಲ ಜಿಲ್ಲೆಗೆ ಆಗಮಿಸಿದರೆ ಗೋಬ್ಯಾಕ್ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರ ಎಂ.ಆರ್.ಭೇರಿ ಮಾತನಾಡಿ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ವಿರುದ್ಧವೇ ಸಚಿವ ಶರಣ ಪ್ರಕಾಶ್ ಪಾಟೀಲ್ ಮಾತನಾಡಿದ್ದು, ಇದು ಪಕ್ಷ ವಿರೋಧಿ ಧೋರಣೆಯಾಗಿದೆ. ಕೂಡಲೆ ಹೈಕಮಾಂಡ್ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಲಿ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏಮ್ಸ್ ಬಗ್ಗೆ ನೀಡಿರುವ ಭರವಸೆ ಈಡೇರಿಸಬೇಕು ಇಲ್ಲದಿದ್ದರೆ ಜನರು ಬಿಜೆಪಿಗೆ ಕಲಿಸಿದ ಪಾಠ ಮುಂದಿನ ಚುನಾವಣೆಯಲ್ಲಿ ನಿಮಗೂ ಕಲಿಸುತ್ತಾರೆ ಎಂದು ಎಚ್ಚರಿಸಿದರು. ಮುಖಂಡರಾದ ಜಾನ್ ವೆಸ್ಲಿ, ಶರಣಪ್ಪ ಬಾಡಿಯಾಳ, ಕಾಮರಾಜ ಪಾಟೀಲ, ಬಸವರಾಜ ಮಿಮಿಕ್ರಿ, ನರಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT