ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಗಿನ ಜಾವ ಸಾಧಾರಣದಿಂದ ಭಾರಿ ಮಳೆಯಾಗಿದೆ.
ರಾಯಚೂರು ತಾಲ್ಲೂಕಿನ ಗಧಾರ ಗ್ರಾಮದಲ್ಲಿ ಮಳೆಗೆ ಹಳ್ಳ ಉಕ್ಕಿ ಹರಿದು ಸೇತುವೆ ಮೇಲೆ ನೀರು ಬಂದಿದೆ. ಗಧಾರ ಗ್ರಾಮದಿಂದ ಯರಗೇರ ಕಡೆಗೆ ಹೋಗುವ ದಾರಿ ಬಂದ್ ಆಗಿದೆ. ಇಡುಪನೂರು ಗ್ರಾಮದ ಬಳಿ ಹಳ್ಳಕ್ಕೆ ಪ್ರವಾಹ ಬಂದು ಸೇತುವೆ ಮುಳುಗಿದೆ. ಇಡುಪನೂರು–ಮಿರ್ಜಾಪುರ ನಡುವಿನ ಸಂಪರ್ಕ ಕಡಿತಗೊಂಡಿದೆ. ಹೊಲಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಗುಂಜಳ್ಳಿ ಗ್ರಾಮದಲ್ಲಿ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಬೆಳೆ ಹಾನಿಯಾಗಿದೆ.
ಹಟ್ಟಿ ಚಿನ್ನದ ಗಣಿ, ದೇವದುರ್ಗ, ಸಿರವಾರ, ಸಿಂಧನೂರು, ತುರ್ವಿಹಾಳ, ಜಾಲಹಳ್ಳಿ ಹಾಗೂ ಶಕ್ತಿನಗರದಲ್ಲಿ ಸಾಧಾರಣ ಮಳೆಯಾಗಿದೆ.
ಮಾನ್ವಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಜಿಟಿಜಿಟಿ ಮಳೆ ಸುರಿದಿದೆ. 50.5 ಮಿಮೀ ಮಳೆಯಾಗಿದೆ. ತಾಲ್ಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೇಲ್ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಿಂದಾಗಿ ಮಸ್ಕಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಹಳ್ಳಕ್ಕೆ ಬಿಟ್ಟಿರುವ ಕಾರಣ ಪೋತ್ನಾಳ ಗ್ರಾಮದ ಹಳ್ಳಕ್ಕೆ ಹೆಚ್ಚು ನೀರು ಹರಿದು ಬರುತ್ತಿದೆ. ಅಮರಾವತಿ, ನಸಲಾಪುರ, ನಂದಿಹಾಳ ಗ್ರಾಮಗಳ ಹಳ್ಳಗಳು ತುಂಬಿ ಹರಿಯುತ್ತಿವೆ.
ದೇವದುರ್ಗ 11.8 ಮಿ.ಮೀ, ಲಿಂಗಸುಗೂರು 10.3 ಮಿ.ಮೀ, ಮಾನ್ವಿ 58.7 ಮಿ.ಮೀ, ರಾಯಚೂರು 52.8 ಮಿ.ಮೀ, ಸಿಂಧನೂರು 40.6 ಮಿ.ಮೀ, ಮಸ್ಕಿ 25.6 ಮಿ.ಮೀ, ಸಿರವಾರ 36.5 ಮಿ.ಮೀ, ಮುದಗಲ್‌ನಲ್ಲಿ 14 ಮಿ.ಮೀ ಹಟ್ಟಿಯಲ್ಲಿ 9 ಮಿ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 31.8 ಮಿ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.