ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ.ಗಳಿಂದ ದಾಖಲೆ ಕರ ಸಂಗ್ರಹ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಿಇಒ ಲಕ್ಷ್ಮೀಕಾಂತರೆಡ್ಡಿ ಮಾಹಿತಿ
Last Updated 23 ಡಿಸೆಂಬರ್ 2019, 13:11 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಗ್ರಾಮ ಪಂಚಾಯಿತಿಗಳೆಲ್ಲ ಈ ವರ್ಷ ಒಟ್ಟು ₹7.5 ಕೋಟಿಯಷ್ಟು ದಾಖಲೆ ಪ್ರಮಾಣದಲ್ಲಿ ಕರ ಸಂಗ್ರಹ ಮಾಡಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಗೆ ಮಾಹಿತಿ ನೀಡಿದರು.

2018–19ನೇ ಹಣಕಾಸು ವರ್ಷ ₹2.44 ಕೋಟಿ ಕರ ಸಂಗ್ರಹ ಆಗಿತ್ತು. ಈ ವರ್ಷ ಸುಮಾರು ₹8 ಕೋಟಿವರೆಗೂ ತೆರಿಗೆ ಸಂಗ್ರಹಿಸಿರುವುದು ದಾಖಲಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ಎರಡೇ ತಿಂಗಳಲ್ಲಿ ₹5.5 ಕೋಟಿ ಕರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಕರ ಸಂಗ್ರಹಿಸುವ ಪ್ರತಿಶತ ಪ್ರಮಾಣದಲ್ಲಿ ರಾಜ್ಯದಲ್ಲೇ ರಾಯಚೂರು ಪ್ರಥಮ ಸ್ಥಾನಕ್ಕೆ ಹೋಗಿರುವುದು ಗಮನಾರ್ಹ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಹಾಯಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 114 ಹುದ್ದೆಗಳ ಭರ್ತಿ ಪೂರ್ಣವಾಗಿದ್ದು, 45 ಹುದ್ದೆಗಳ ಭರ್ತಿಗೆ ಅಧಿಸೂಚನೆ ನೀಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಕಳೆದ ಎರಡು ತಿಂಗಳಲ್ಲಿ 100 ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ 254 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ಕೊಡಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ 750 ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. 342 ಶಾಲೆಗಳಿಗೆ ಆವರಣ ಗೋಡೆಗಳನ್ನು ಮರು ನಿರ್ಮಾಣ ಮಾಡಲಾಗುವುದು. ಕೆಲವು ಕಡೆಗಳಲ್ಲಿ ಗೋಡೆಗಳು ಶಿಥಿಲವಾಗಿದ್ದು, ಅಂಥ ಕಡೆಗಳಲ್ಲಿ ಈ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಿಲ್ಲೆಯಲ್ಲಿ ಒಟ್ಟು 58 ಸಾವಿರ ವಸತಿ ರಹಿತರು, ನಿವೇಶನ ರಹಿತರಿಂದ ಅರ್ಜಿಗಳು ಬಂದಿವೆ. ರಾಜ್ಯದಲ್ಲೇ ಅತಿಹೆಚ್ಚು ಅರ್ಜಿಗಳು ರಾಯಚೂರಿನಲ್ಲಿ ಸ್ವೀಕೃತಿಯಾಗಿವೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 22 ಸಾವಿರ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಉದ್ಯೋಗ ಖಾತರಿಯಲ್ಲಿ ಶೇ 40 ರಷ್ಟು ಮಾತ್ರ ಪರಿಕರಗಳ ವೆಚ್ಚಕ್ಕೆ ಅವಕಾಶವಿದೆ. ಕೆಲವು ಪಂಚಾಯಿತಿಗಳಲ್ಲಿ ಮಾನವ ದಿನಗಳ ಉದ್ಯೋಗ ಸೃಜಿಸಿದ ಮೊತ್ತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪರಿಕರ ಯೋಜನೆ ಕಳುಹಿಸುತ್ತಿದ್ದಾರೆ. ಪ್ರಮಾಣ ಮೀರಿದ ಕೆಲವು ಪ್ರಸ್ತಾವನೆಗಳನ್ನು ಕೈಬಿಡುವುದು ಅನಿವಾರ್ಯವಾಗಿದೆ. ಮಾಡಲೇ ಬೇಕಾದ ಕಾಮಗಾರಿಗಳಿದ್ದರೆ ಜಿಲ್ಲಾ ಪಂಚಯಿತಿ ಸದಸ್ಯರು ಗಮನಕ್ಕೆ ತರಬೇಕು ಎಂದು ಹೇಳಿದರು.

ಕಂಪ್ಯೂಟರ್ ಆಪರೇಟರ್ ಪ್ರಭಾವಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಹೇಳಿದರೂ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಆಗುತ್ತಿಲ್ಲ. ರೈತರ ಜಮೀನು ಮಾರ್ಗದ ರಸ್ತೆಗಳು ಹಾಳಾಗಿದ್ದು, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಕೈಗೊಳ್ಳಬೇಕು. ಚೆಕ್ ಡ್ಯಾಂ ಗಿಂತಲೂ ಹೆಚ್ಚು ಬೇಡಿಕೆ ರಸ್ತೆಗಳಿಗೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರು ವ್ಯಕ್ತಪಡಿಸುವ ಸಮಸ್ಯೆಗಳಿಗೆ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ವಿದ್ಯುತ್‌ ಪರಿವರ್ತಕಗಳ ಸ್ಥಳಾಂತರ ಕಾರ್ಯ ಬೇಗನೆ ಮುಗಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಕೆ.ವಜ್ಜಲ್‌, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT