ಭಾನುವಾರ, ಮಾರ್ಚ್ 7, 2021
31 °C
2009ರಲ್ಲಿ ಗರಿಷ್ಠ 5.5 ಲಕ್ಷ ಕ್ಯುಸೆಕ್‌, 2019 ರಲ್ಲಿ 6.5 ಲಕ್ಷ ಕ್ಯುಸೆಕ್‌ ನೀರು

ಕೃಷ್ಣಾನದಿಯಲ್ಲಿ ದಾಖಲೆ ಮಟ್ಟದ ಪ್ರವಾಹ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ 2009ರಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳೆರಡು ಪ್ರವಾಹದಿಂದ ಉಕ್ಕಿಹರಿದು ಸಂಕಷ್ಟ ನಿರ್ಮಿಸಿದ್ದವು. ಅಂದು ನಾರಾಯಣಪುರ ಜಲಾಶಯದಿಂದ ಗರಿಷ್ಠ 5.5 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗಿತ್ತು. ಆದರೆ ಈ ವರ್ಷ ಹಿಂಭಾಗದ ಜಿಲ್ಲೆಗಳಲ್ಲಿ ಮಳೆಯು ಅಪಾಯದ ಮಟ್ಟದಲ್ಲಿ ಸುರಿಯುತ್ತಿರುವುದರಿಂದ ಜಲಾಶಯದಿಂದ ಶನಿವಾರ ಗರಿಷ್ಠ 6.5 ಲಕ್ಷ ಕ್ಯುಸೆಕ್‌ವರೆಗೂ ದಾಖಲೆ ಪ್ರಮಾಣದಲ್ಲಿ ನೀರು ಹೊರಬಿಡಲಾಗಿದೆ.

ಇದರಿಂದಾಗಿ ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಜಲದುರ್ಗ ಗ್ರಾಮದ ಬಳಿ 50 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆಯು ಇದೇ ಮೊದಲ ಬಾರಿ ಮುಳುಗಡೆಯಾಗಿದೆ. 2009ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಒಂದೂವರೆ ತಾಸು ಸೇತುವೆ ಮೇಲೆ ನೀರು ಹರಿದಿತ್ತು. ಆದರೆ, ಸಂಪರ್ಕ ಕಡಿತವಾಗಿರಲಿಲ್ಲ. ಇದೇ ಮೊದಲ ಬಾರಿ ಸಂಪರ್ಕ ಕಡಿತಗೊಂಡಿದ್ದರಿಂದ ನಡುಗಡ್ಡೆಯಲ್ಲಿರುವ ಜಲದುರ್ಗ, ಯರಗೋಡಿ, ಹಂಚಿನಾಳ ಜನರು ಆತಂಕದಿಂದ ಸೇತುವೆ ಮೇಲಿನ ಪ್ರವಾಹವನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.

ಪ್ರವಾಹ ಇಳಿಮುಖ ಆಗುವುದನ್ನು ನಡುಗಡ್ಡೆ ಗ್ರಾಮಸ್ಥರು ಕಾಯುತ್ತಿದ್ದಾರೆ. ಈ ನಡುಗಡ್ಡೆಗಳ ಜನರಿಗೆ ಮುನ್ನಚ್ಚರಿಕೆ ಕ್ರಮವಾಗಿ ಆಹಾರಧಾನ್ಯ ಪರಿಹಾರ ತಲುಪಿಸುವುದಕ್ಕಾಗಿ ತೆರಳಿದ್ದ ರಕ್ಷಣಾ ತಂಡದವರು ಕೂಡಾ ನಡುಗಡ್ಡೆಯಲ್ಲಿಯೇ ಸಿಲುಕಿದ್ದಾರೆ. ಎನ್‌ಡಿಆರ್‌ಎಫ್‌ ತಂಡ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಯೋಧರು ಈ ತಂಡಗಳಲ್ಲಿದ್ದಾರೆ. ಆಹಾರ ಹಾಗೂ ಉಳಿದುಕೊಳ್ಳುವುದಕ್ಕೆ ಸಮಸ್ಯೆಯಿಲ್ಲ. ಆದರೆ, ನಡುಗಡ್ಡೆಯಿಂದ ಸದ್ಯ ಹೊರಬರುವುದು ದುಸ್ತರವಾಗಿದೆ. ಕೃಷ್ಣಾನದಿಯಿಂದ ಕವಲೊಡೆದು ಹರಿಯುವ ಭಾಗದಲ್ಲಿ ಈ ಸೇತುವೆ ಇರುವುದರಿಂದ ಪ್ರವಾಹವು ಸೇತುವೆ ಮುಳುಗಿಸುವಷ್ಟು ಏರಿಕೆ ಆಗಲಿಕ್ಕಿಲ್ಲ ಎನ್ನುವ ಭಾವನೆ ಎಲ್ಲರಲ್ಲೂ ಮನೆಮಾಡಿತ್ತು. ಆದರೆ ಪರಿಸ್ಥಿತಿ ವ್ಯತಿರೀಕ್ತವಾಗಿದೆ.

ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣವು ಇನ್ನೂ 6 ಲಕ್ಷ ಕ್ಯುಸೆಕ್‌ ಮಟ್ಟದಲ್ಲಿಯೇ ಮುಂದುವರಿದಿದ್ದು, ಪ್ರವಾಹ ಕ್ಷೀಣಿಸುವುದನ್ನು ಖಚಿತವಾಗಿ ಹೇಳುತ್ತಿಲ್ಲ. ಆದರೆ, ನಡುಗಡ್ಡೆಯ ಜನರು 2009ರಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯ ಆತಂಕವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮಳೆಯಿಲ್ಲದೆ ತಲೆಮೇಲೆ ನೀರು ಸುರಿಯುತ್ತಿಲ್ಲ ಎನ್ನುವ ನೆಮ್ಮದಿ ಮಾತ್ರ ಇದೆ. ಆದರೆ, ಸುತ್ತಲೂ ಆವರಿಸಿಕೊಂಡಿರುವ ನೀರಿನಲ್ಲಿ ಹೊರಹೋಗುವುದಕ್ಕೆ ಮಾರ್ಗ ಯಾವಾಗ ತೆರೆದುಕೊಳ್ಳುತ್ತದೆ ಎಂದು ಆತಂಕದಿಂದ ಕಾಯುವಂತಾಗಿದೆ.

ಗ್ರಾಮಗಳಲ್ಲಿ ಆತಂಕ: ಲಿಂಗಸುಗೂರು, ರಾಯಚೂರು ಮತ್ತು ದೇವದುರ್ಗ ತಾಲ್ಲೂಕುಗಳ ನದಿತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಳವಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಈಗಾಗಲೇ ಹಲವು ಗ್ರಾಮಗಳನ್ನು ರಕ್ಷಣಾ ತಂಡದವರು ಸ್ಥಳಾಂತರ ಮಾಡಿಸಿದ್ದಾರೆ. ಕೆಲವು ಗ್ರಾಮಸ್ಥರು ಪ್ರವಾಹ ಪರಿಸ್ಥಿತಿ ಅವಲೋಕಿಸಿ ಸ್ವಇಚ್ಛೆಯಿಂದ ಗ್ರಾಮ ತೊರೆಯುತ್ತಿದ್ದಾರೆ.

ರೈತರು ಕಷ್ಟಪಟ್ಟು ಬೆಳೆದಿದ್ದ ಭತ್ತದ ಗದ್ದೆಗಳಿಗೆ ನದಿನೀರು ತುಂಬಿಕೊಂಡಿದ್ದು, ಬಿತ್ತನೆ ಮತ್ತು ಗೊಬ್ಬರಕ್ಕಾಗಿ ಮಾಡಿದ್ದ ವೆಚ್ಚವೂ ಕೈಗೆ ಬರಲಿಲ್ಲ ಎನ್ನುವ ಸಂಕಷ್ಟ ನದಿತೀರದ ರೈತರದ್ದಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು