ಶನಿವಾರ, ಜೂನ್ 25, 2022
26 °C
ವೈದ್ಯರ ಲಭ್ಯತೆ ಸಮರ್ಪಕ ಹಾಗೂ ನಿರ್ಮಲ ಪರಿಸರ ನಿರ್ಮಾಣ

ರಾಯಚೂರು: ಓಪೆಕ್ ಆಸ್ಪತ್ರೆಯಲ್ಲಿ ಬದಲಾವಣೆಯ ಗಾಳಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ನಿಯಂತ್ರಿಸುವುದಕ್ಕೆ ಜಿಲ್ಲಾಡಳಿತವು ಈಗಲೇ ತಯಾರಿ ಮಾಡುತ್ತಿದ್ದು, ಅವ್ಯಸ್ಥೆಯ ಆಗರವಾಗಿದ್ದ ಓಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಧಾರಣೆಯ ಗಾಳಿ ಬೀಸುತ್ತಿದೆ.

ಗಂಟಲು ದ್ರವ ಸಂಗ್ರಹ ಹಾಗೂ ಕೋವಿಡ್ ರೋಗಿಗಳಿಗೆ ವಿವಿಧ ಸ್ತರದಲ್ಲಿ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ಓಪೆಕ್ ಆಸ್ಪತ್ರೆಗೆ ದಾಖಲಾಗುವುದಕ್ಕೆ ರೋಗಿಗಳು ಭಯಪಡುತ್ತಿದ್ದವರು. ಈಗ ಪರಿಸ್ಥಿತಿ ಬದಲಾಗಿದ್ದು, ಸಕಾಲಕ್ಕೆ ವೈದ್ಯರು ಹಾಗೂ ದಾದಿಯರು ಎಲ್ಲ ರೋಗಿಗಳ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ. ಗಬ್ಬೇದ್ದು ಹೋಗಿದ್ದ ವಾರ್ಡ್ ಗಳಲ್ಲಿ ನಿರ್ಮಲತೆ ಎದ್ದು ಕಾಣುತ್ತಿದೆ. ರೋಗಿಗಳ‌ ಮುಖದಲ್ಲಿ ಮಂದಹಾಸ ಮೂಡಿಸಲು ಬೇಕಾಗಿರುವ ವಾತಾವರಣ ಈಗ ಸೃಷ್ಟಿಯಾಗಿದೆ.

ರಿಮ್ಸ್ ಮತ್ತು ಓಪೆಕ್ ಕೋವಿಡ್ ಆಸ್ಪತ್ರೆಗಳ ಸುಧಾರಣೆಗಾಗಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರನ್ನು ಸಮನ್ವಯಾಧಿಕಾರಿ ಜಿಲ್ಲಾಡಳಿತದಿಂದ ನೇಮಕ ಮಾಡಲಾಗಿತ್ತು. ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ಡಾ.ರಮೇಶ ಬಿ.ಎಚ್.‌ ಅವರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ಹಾಗೂ ಇನ್ನೂ ಕೆಲವು ವೈದ್ಯರನ್ನು ಜವಾಬ್ದಾರಿ ವಹಿಸಿ ನೇಮಕ ಮಾಡಲಾಗಿತ್ತು. ಎಲ್ಲರ ವಿಶೇಷ ಮುತೂವರ್ಜಿಯ ಫಲದಿಂದ 15 ದಿನಗಳಲ್ಲಿ ಓಪೆಕ್ ನಲ್ಲಿ ಪರಿಸ್ಥಿತಿ ಸುಧಾರಿಸಿದೆ.

ಆಸ್ಪತ್ರೆಯಲ್ಲಿ 24/7 ನರ್ಸಿಂಗ್ ಸಿಬ್ಬಂದಿ ಲಭ್ಯತೆಗಾಗಿ ಕ್ರಮ ವಹಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಜಿಲ್ಲಾಡಳಿತದಿಂದ ನೇರವಾಗಿ ಮಾನಿಟರಿಂಗ್ ಮಾಡಲಾಗುತ್ತಿದೆ. ಅರೆವೈದ್ಯಕೀಯ ಮತ್ತು ಸ್ವಚ್ಛತಾ ಸಿಬ್ಬಂದಿಯ ಹಾಜರಾತಿ ಗಮನಿಸಲು ಮತ್ತಷ್ಟು ಸಿಬ್ಬಂದಿ ನೇಮಕ ಮಾಡಲಾಗಿದೆ. ಓಪೆಕ್ ಆಸ್ಪತ್ರೆ ಮತ್ತು ಕ್ವಾರ್ಟರ್ ಸುತ್ತಮುತ್ತಲೂ ಬೀದಿದೀಪಗಳ ವ್ಯವಸ್ಥೆ ಮಾಡಲಾಗಿದೆ.

ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ತಪ್ಪಿಸಲು 100 ಜಂಬೋ ಸಿಲಿಂಡರ್‌ ದಾಸ್ತಾನು. ‌ಆಸ್ಪತ್ರೆಗಳಲ್ಲಿ 40 ಫ್ಯಾನ್ ಗಳನ್ನು ದುರಸ್ತಿಗೊಳಿಸಲಾಗಿದೆ. ರೋಗಿಗಳಿಗೆ ಶುದ್ಧನೀರು ಒದಗಿಸುವುದಕ್ಕಾಗಿ ಸಾವಿರ ಲೀಟರ್ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿದೆ. ಹೆಚ್ಚುವರಿ ಶೌಚಾಲಯಗಳ ನಿರ್ಮಾಣ ಹಾಗೂ ಮೂರು ಶಿಫ್ಟ್ ಗಳಲ್ಲಿ ಸ್ವಚ್ಛತೆಗೆ ಕ್ರಮ ವಹಿಸಲಾಗಿದೆ.ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಯಲ್ಲಿ ಧ್ವನಿವರ್ಧಕ ಮೂಲಕ ಸೂಚನೆ ‌ನೀಡುವ ವ್ಯವಸ್ಥೆ ಮಾಡಲಾಗಿದೆ.

ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಿಯಾಗುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಾಸಿಗೆಗಳ ಲಭ್ಯತೆ ವಿವರವು ಆನ್ ಲೈನ್ ಡಿಸ್ ಪ್ಲೆ ಮಾಡಿರುವುದು. ರೋಗಿಗಳ ದಾಖಲು ಮತ್ತು ಬಿಡುಗಡೆ ಆಗುವುದು ಕೂಡಾ ಆನ್ ಲೈನ್ ಮೂಲಕ ಮಾಹಿತಿ ದೊರೆಯುತ್ತದೆ.ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡ ಇಲಾಖೆಗಳಿಂದ ಕೆಲವು ಗ್ರೂಪ್ 'ಡಿ' ಸಿಬ್ಬಂದಿಯನ್ನು ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು