ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ, ಪ್ರವಾಸಿ ತಾಣಗಳತ್ತ ಮತ್ತೆ ಸಂಚಾರ

ಭಕ್ತರ ದರ್ಶನಕ್ಕಾಗಿ ತೆರೆದ ಮಂತ್ರಾಲಯ, ಸೂಗೂರೇಶ್ವರ ಸ್ವಾಮಿ ದೇಗುಲ, ಬಗಳಾಮುಖಿ, ಅಮರೇಶ್ವರ ದೇವಸ್ಥಾನ
Last Updated 12 ಅಕ್ಟೋಬರ್ 2020, 8:11 IST
ಅಕ್ಷರ ಗಾತ್ರ

ರಾಯಚೂರು: ಕೋವಿಡ್‌ ಕಾರಣದಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಜಿಲ್ಲೆಯ ಪ್ರವಾಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳಿಗೆ ಮತ್ತೆ ಜನರು ಭೇಟಿ ನೀಡುತ್ತಿದ್ದಾರೆ.

ಕೋವಿಡ್‌ ಪೂರ್ವ ಫೆಬ್ರುವರಿಯಲ್ಲಿ ಕಾಣುತ್ತಿದ್ದ ಜನಜಂಗುಳಿ ಈಗ ಕಾಣುತ್ತಿಲ್ಲ. ಆದರೆ, ದಿನದಿಂದ ದಿನಕ್ಕೆ ಪ್ರವಾಸಿರ ಆಗಮನವು ಸಹಜ ಸ್ಥಿತಿಗೆ ಮರಳುತ್ತಿದೆ. ಮೊದಲಿನಂತೆ ಜನದಟ್ಟಣೆ ಏರ್ಪಡಲು ಧಾರ್ಮಿಕ ತಾಣ ಹಾಗೂ ಪ್ರವಾಸಿ ತಾಣಗಳಲ್ಲಿ ಅವಕಾಶ ಕೊಡುತ್ತಿಲ್ಲ. ಕೊರೊನಾ ಸೋಂಕು ತಡೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಲು ಪರಸ್ಪರ ಅಂತರ ಕಾಪಾಡುವುದು ಕಡ್ಡಾಯ. ಒಂದೇ ಕುಟುಂಬದಿಂದ ಬರುವ ಸದಸ್ಯರು ಮಾತ್ರ ಗುಂಪುಗಾಗಿ ಸಂಚರಿಸುವುದು, ಕುಳಿತುಕೊಂಡಿರುವುದು ಕಂಡು ಬರುತ್ತಿದೆ.

ದರ್ಶನಕ್ಕಾಗಿ ತೆರೆದ ಮಂತ್ರಾಲಯ: ದೇಶ–ವಿದೇಶಗಳಿಂದ ಜನರು ಭೇಟಿ ನೀಡುವ ರಾಯಚೂರು ಪಕ್ಕದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠವು ದರ್ಶನಕ್ಕಾಗಿ ಮತ್ತೆ ತೆರೆದುಕೊಂಡಿದೆ.

ಕಳೆದ ಮಾರ್ಚ್‌ 21 ರಿಂದ ಭಕ್ತರಿಗೆ ದರ್ಶನಾವಕಾಶ ಸ್ಥಗಿತಗೊಳಿಸಲಾಗಿತ್ತು. 6 ತಿಂಗಳ ಬಳಿಕ ಅ.2 ರಂದು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಠದ ಮಹಾದ್ವಾರ ತೆರೆಯುವ ಮೂಲಕ ದರ್ಶನಾವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಿಯೂ ಜನದಟ್ಟಣೆ ಆಗದಂತೆ ಕ್ರಮ ವಹಿಸಿದ್ದು, ಪರಸ್ಪರ ಅಂತರ ಕಾಯ್ದುಕೊಂಡು ಸರದಿಯಲ್ಲಿ ಬರಬೇಕು. ಸದ್ಯಕ್ಕೆ ಸಾಮಾನ್ಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಠದ ಪ್ರಕಾರದಿಂದ ಮುಖ್ಯರಸ್ತೆಯಲ್ಲಿರುವ ಮಹಾದ್ವಾರ (ಗ್ಯಾಲರಿ)ದವರೆಗೂ ಭಕ್ತರ ಸರದಿ ಕಾಣುತ್ತದೆ.

ಪ್ರತಿ ಗುರುವಾರ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆಯು ಸಾಮಾನ್ಯ ದಿನಗಳಿಗಿಂತಲೂ ದ್ವಿಗುಣವಾಗಿರುತ್ತದೆ. ಮಠದ ಆಡಳಿತ ಕಚೇರಿಯ ಅಧಿಕಾರಿಗಳು ಹೇಳುವ ಪ್ರಕಾರ, ಸದ್ಯ ಪ್ರತಿದಿನ 8 ರಿಂದ 10 ಸಾವಿರ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಕೋವಿಡ್‌ ಮಹಾಮಾರಿ ಆರಂಭವಾಗುವ ಪೂರ್ವ 15 ರಿಂದ 20 ಸಾವಿರ ಭಕ್ತರು ಮಠಕ್ಕೆ ಬರುತ್ತಿದ್ದರು. ಸರ್ಕಾರಿ ಬಸ್‌ಗಳು ಸಿಮೀತ ಸಂಖ್ಯೆಯಲ್ಲಿ ಮಂತ್ರಾಲಯಕ್ಕೆ ಸಂಚರಿಸುತ್ತಿವೆ. ಹೀಗಾಗಿ ಸ್ವಂತ ವಾಹನಗಳಲ್ಲಿ ಬರುವ ಭಕ್ತರ ಸಂಖ್ಯೆಯೇ ಅಧಿಕವಾಗಿದೆ. ಮುಖ್ಯವಾಗಿ ಬೆಂಗಳೂರಿನಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರು ಬಹುತೇಕ ರಾಯಚೂರಿನ ಮೂಲಕವೇ ಸಂಚರಿಸುತ್ತಿದ್ದಾರೆ. ರೈಲು ಸೇವೆ ಇನ್ನೂ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಹೀಗಾಗಿ ರಾಯಚೂರು ನಗರದಲ್ಲಿ ಉಳಿದುಕೊಂಡು ಅಲ್ಲಿಂದ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಕೆಲವರು ನೇರವಾಗಿ ಮಂತ್ರಾಲಯದಲ್ಲಿ ಉಳಿದುಕೊಂಡು ದರ್ಶನ ಪಡೆಯುತ್ತಿದ್ದಾರೆ.

ಮಠದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4ರವರೆಗೂ ಮಾತ್ರ ದರ್ಶನಾವಕಾಶ ಮಾಡಲಾಗಿದೆ. ಮಾಸ್ಕ್‌ ಧರಿಸುವುದು ಕಡ್ಡಾಯ. ಕೋವಿಡ್‌ ಮಹಾಮಾರಿ ನಡುವೆಯೂ ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಲ್ಲಿ ಈಗಷ್ಟೇ ವಹಿವಾಟು‌ ಕೂಡಾ ಚೇತರಿಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT