ರಾಯಚೂರು: ನಗರದ ಎಂ.ಈರಣ್ಣ ವೃತ್ತದಲ್ಲಿ ಅನಧಿಕೃತ ತರಕಾರಿ ಮಾರಾಟವನ್ನು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ಅವರು ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಸ್ಥಳಾಂತರ ಮಾಡಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್. ಮಹಾವೀರ ಹೇಳಿದರು.
ಕೋವಿಡ್ ಲಾಖ್ ಡೌನ್ ವೇಳೆ ಎಂ.ಈರಣ್ಣ ವೃತ್ತದ ಬಳಿ ತರಕಾರಿ ಮಾರಾಟಕ್ಕೆ ಅನುಕೂಲ ನೀಡಲಾಗಿದ್ದನ್ನು ಮುಂದುವರೆಸಿ 2022 ರ ಅಕ್ಟೋಬರ್ 15ರಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಂ.ಈರಣ್ಣ ವೃತ್ತದಲ್ಲಿ ಕಾನೂನು ಬಾಹಿರ ತರಕಾರಿ ಮಾರುಕಟ್ಟೆಗೆ ಹಿಂದಿನ ನಗರಸಭೆ ಆಡಳಿತ ಮಂಡಳಿ ಅನುಮತಿ ನೀಡಿದ್ದು ತಪ್ಪು. ಅದನ್ನು ಈಗ ಜಿಲ್ಲಾಧಿಕಾರಿ ನಿರ್ಬಂಧ ಮಾಡಿರುವುದು ಸರಿಯಾಗಿದೆ ಎಂದರು.
ಎಂ.ಈರಣ್ಣ ವೃತ್ತದಲ್ಲಿ ಆಗುತ್ತಿರುವ ತೊಂದರೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕೆಲವೊಂದು ಇಲಾಖೆಗಳ ವರದಿಯನ್ನು ತರಿಸಿಕೊಂಡು ತರಕಾರಿ ಮಾರಾಟ ಮಾಡುವ ಹಾಗೂ ರೈತರನ್ನು ಮನ ಒಲಿಸಿ ರೈತ ಮಾರುಕಟ್ಟೆಗೆ ಸ್ಥಳಾಂತರಿಸಿರುವುದು ಶ್ಲಾಘನೀಯ
ಜಿಲ್ಲಾಧಿಕಾರಿ ಅವರ ಆದೇಶ ಸಹಿಸದ ಬಿಜೆಪಿ ಮುಖಂಡ ರವೀಂದ್ರ ಜಲ್ದಾರ ಮಾನಸಿಕವಾಗಿ ಕುಗ್ಗಿದ್ದಾರೆ. ಮಾರಾಟಗಾರರನ್ನು ದಿಕ್ಕು ತಪ್ಪಿಸಿ ಪ್ರೇರೇಪಿಸುತ್ತಿದ್ದಾರೆ.ಅವರ ವಿರುದ್ಧ ಐ.ಪಿ.ಸಿ ಸೆಕ್ಷನ್ 504, 506 ಹಾಗೂ 599ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹಾಗೂ ಕೊಲೆ ಮಾಡಲು ಪ್ರೇರಣೆ, ಕೋಮು ಗಲಭೆ ಸೃಷ್ಟಿ, ವಿರೋಧಿಗಳಿಗೆ ಭಯದ ವಾತಾವರಣ ಸೃಷ್ಟಿಸುವುದು, ಜಗಳಕ್ಕೆ ಪ್ರೇರಣೆ ಮತ್ತು ಕಾನೂನು ಬಾಹಿರ ಕೆಲಸಗಳಿಗೆ ಒತ್ತು ನೀಡುವುದು ಸೇರಿದಂತೆ ಇನ್ನಿತರೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದರು.
ಆದಾಯಕ್ಕೂ ಮೀರಿ ಹಣ ಗಳಿಕೆ ಮಾಡಿರುವ ರವೀಂದ್ರ ಜಲ್ದಾರ ವಿರುದ್ಧ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸುವುದಾಗಿ ಆದಾಯ ತೆರಿಗೆ ಇಲಾಖೆಯಿಂದ ಪತ್ರ ಬಂದಿದೆ. ಶೀಘ್ರವೇ ತನಿಖೆ ನಡೆಸುವ ದಿನಾಂಕವನ್ನು ತಿಳಿಸುತ್ತೇನೆ ಎಂದು ಹೇಳಿದರು.
ಸಂಘದ ಮುಖಂಡ ಪ್ರಭು ನಾಯಕ, ಬಸವರಾಜ, ರಿಜ್ವಾನ್ , ಉದಯಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.