ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವೆಚ್ಚ ತಗ್ಗಿಸುವ ಸಂಶೋಧನೆ ಅಗತ್ಯ: ಡಾ.ಎಸ್‌.ಎನ್‌.ಪುರಿ

’ಕೀಟ ನಾಶಕಗಳ ನಿರ್ವಹಣಾ ಯೋಜನೆ’ ಕುರಿತು ‘17ನೇ ಅಂತರರಾಷ್ಟ್ರೀಯ ಸಮ್ಮೇಳನ’
Last Updated 12 ಫೆಬ್ರುವರಿ 2020, 14:37 IST
ಅಕ್ಷರ ಗಾತ್ರ

ರಾಯಚೂರು: ರೈತರಿಗೆ ನೇರವಾಗಿ ಆದಾಯ ಹೆಚ್ಚಿಸುವ ಕೆಲಸ ಮಾಡದಿದ್ದರೂ, ಕೃಷಿಗಾಗಿ ಮಾಡುವ ವೆಚ್ಚ ತಗ್ಗಿಸಲು ಬೇಕಾಗುವ ಯಾಂತ್ರಿಕತೆ ಹಾಗೂ ಕೀಟಗಳ ನಿರ್ವಹಣೆ ಕುರಿತಾದ ಸಂಶೋಧನೆಯನ್ನು ವಿಜ್ಞಾನಿಗಳು ಮಾಡಬೇಕಿದೆ ಎಂದು ಎಂಟೊಮೊಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಅಧ್ಯಕ್ಷ ಡಾ.ಎಸ್‌.ಎನ್‌.ಪುರಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಅಪ್ಲೈಡ್‌ ಜೂವಾಲಾಜಿಸ್ಟ್‌ ರಿಸರ್ಚ್‌ ಅಸೋಷಿಯೇಶನ್‌ (ಆಜ್ರಾ) ಓಡಿಸ್ಸಾ ಮತ್ತು ಭುವನೇಶ್ವರ ಘಟಕಗಳು ಹಾಗೂ ನವದೆಹಲಿಯ ಎಂಟೊಮೊಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾದಿಂದ ಕೃಷಿ ವಿಶ್ವವಿದ್ಯಾಲಯ ಪ್ರೇಕ್ಷಾಗೃಹದಲ್ಲಿ ಆಯೋಜಿಸಿರುವ ‘ಪ್ರಾಣಿಶಾಸ್ತ್ರದ ಪ್ರಮುಖ ಸಂಶೋಧನೆಗಳು ಹಾಗೂ ಆಹಾರ ಹಾಗೂ ಪೌಷ್ಟಿಕ ಸುರಕ್ಷತೆಗಾಗಿ ಕೀಟ ನಾಶಕಗಳ ನಿರ್ವಹಣಾ ಯೋಜನೆಗಳು’ ವಿಷಯ ಕುರಿತಾದ ಮೂರು ದಿನಗಳ ‘17ನೇ ಅಂತರರಾಷ್ಟ್ರೀಯ ಸಮ್ಮೇಳನ’ವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ರೈತರ ಆದಾಯ ದ್ವಿಗುಣ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೃಷಿ ವಿಜ್ಞಾನಿಗಳು ಈಗ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ರೈತರು ಬಿತ್ತನೆ ಮಾಡಿದ ಹಂತದಿಂದ ಕೊಯ್ಲು ಮಾಡುವ ಹಂತದ ನಡುವೆ ಕೀಟಗಳ ನಿರ್ವಹಣೆ ಮತ್ತು ರಾಸಾಯನಿಕ ಗೊಬ್ಬರಕ್ಕಾಗಿ ಶೇ 30 ರಿಂದ 40 ರಷ್ಟು ವೆಚ್ಚ ಮಾಡುತ್ತಿದ್ದಾರೆ. ಈ ವೆಚ್ಚವನ್ನು ತಗ್ಗಿಸಲು ವಿಜ್ಞಾನಿಗಳು ಸಂಶೋಧನೆ ಕೈಗೊಳ್ಳಬೇಕು. ಕೃಷಿ ಕೈಗೊಳ್ಳುವ ವಿಧಾನ ಹಾಗೂ ಕೀಟಗಳ ನಿರ್ವಹಣೆ ಬಗ್ಗೆ ರೈತರಿಗೆ ನೆರವು ನೀಡಿದರೆ, ಪರೋಕ್ಷವಾಗಿ ರೈತರ ಆದಾಯ ಹೆಚ್ಚಾಗುತ್ತದೆ ಎಂದರು.

ಮುಂಬರುವ ದಿನಗಳಲ್ಲಿ ಆಹಾರ ಉತ್ಪಾದನೆ ಹೆಚ್ಚಳ ಮಾಡುವುದು ನಿಜಕ್ಕೂ ಸವಾಲು. ಕೀಟಗಳ ಹಾವಳಿ ಹಾಗೂ ರೋಗಗಳಿಂದ ಕೃಷಿ ಬೆಳೆಗಳನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ. 2030 ರವರೆಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಕಾರ್ಯ ಮಾಡಬೇಕಿದೆ ಎಂದರು.

ದೇಶದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದ್ದು, 2030ರ ಹೊತ್ತಿಗೆ 1.4 ಶತಕೋಟಿಗೆ ತಲುಪಲಿದೆ. ಸದ್ಯ ದೇಶದಲ್ಲಿ 287 ದಶಲಕ್ಷ ಟನ್‌ ಆಹಾರ ಉತ್ಪಾದಿಸಲಾಗುತ್ತಿದ್ದು, ಇದು ಸದ್ಯದ ಜನಸಂಖ್ಯೆಗೆ ಸಾಕಾಗುತ್ತಿದೆ. ಕಳೆದ 70 ವರ್ಷಗಳಿಂದ ಆಹಾರದ ಸಮಸ್ಯೆಯಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 36 ಕೋಟಿ ಜನಸಂಖ್ಯೆ ಹಾಗೂ 50 ದಶಲಕ್ಷ ಟನ್‌ ಆಹಾರ ಉತ್ಪಾದನೆ ಆಗುತ್ತಿತ್ತು. ಆಹಾರಧಾನ್ಯ ಪಡೆಯಲು ಅಮೆರಿಕ ಸೇರಿದಂತೆ ವಿದೇಶಗಳಿಂದ ಹಡಗು ಬರುವುದಕ್ಕಾಗಿ ಕಾಯಬೇಕಾಗಿತ್ತು. ಸದ್ಯ ಆಹಾರ ಸಂಗ್ರಹಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಭಾರತೀಯ ಉಗ್ರಾಣ ಸಂಸ್ಥೆಯು ಹೊಸದಾಗಿ ಉಗ್ರಾಣಗಳನ್ನು ನಿರ್ಮಿಸಲು ಯೋಜಿಸುತ್ತಿದೆ. ಆಹಾರ ಉತ್ಪಾದನೆ ಹೆಚ್ಚಳದಲ್ಲಿ ವಿಜ್ಞಾನಗಳ ಶ್ರಮ ಪ್ರಮುಖವಾಗಿದೆ ಎಂದು ತಿಳಿಸಿದರು.

ರಾಜಕೀಯ ನೇತಾರರು ಕೂಡಾ ಆಹಾರ ಉತ್ಪಾದನೆಗೆ ಪೂರಕವಾಗಿ ಕಾಯ್ದೆಗಳನ್ನು ಮಾಡುತ್ತಾ ಬಂದಿರುವುದು ಗಮನಾರ್ಹ. ಇದರಿಂದ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದಲ್ಲದೆ, ರಫ್ತು ಮಾಡುವ ಸಾಮರ್ಥ್ಯ ಬಂದಿದೆ. ಹಣ್ಣು ಹಾಗೂ ತರಕಾರಿಗಳ ಉತ್ಪಾದನೆಯು 300 ದಶಲಕ್ಷ ಮೆಟ್ರಿಕ್‌ ಟನ್‌ಗೆ ತಲುಪಿದೆ. ಪೌಷ್ಟಿಕಾಂಶವನ್ನು ಸಂರಕ್ಷಿಸಿಕೊಳ್ಳುವುದು ಈಗ ಮುಖ್ಯವಾಗಿದೆ ಎಂದು ಹೇಳಿದರು.

ಭಾರತೀಯ ಕೀಟಶಾಸ್ತ್ರಜ್ಞರ ಸೊಸೈಟಿ (ಎಂಟೊಮೊಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ)ಯಲ್ಲಿ ಒಂದು ಸಾವಿರ ವಿಜ್ಞಾನಿಗಳು ನೋಂದಣಿ ಮಾಡಿಕೊಂಡಿದ್ದು, ನಿಯಮಿತವಾಗಿ ನಿಯತಕಾಲಿಕೆ ಮುದ್ರಿಸುತ್ತಿದೆ. ಕೀಟಶಾಸ್ತ್ರಜ್ಞರನ್ನು ಒಂದೆಡೆ ಸೇರಿಸಿ ಪೌಷ್ಟಿಕ ಆಹಾರ ಉಳಿಸಿಕೊಳ್ಳಲು ಕೀಟನಾಶಕ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಸಮ್ಮೇಳನದ ಸಂಘಟಕ ಡಾ.ಎ.ಜಿ.ಶ್ರೀನಿವಾಸ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ’ಈ ಭಾಗದ ರೈತರಿಗೆ ಈ ಕಾರ್ಯಾಗಾರವು ವರದಾನ ಆಗುತ್ತದೆ. ವಿಜ್ಞಾನಿಗಳಿಗೆ ಒಂದು ಮಾರ್ಗದರ್ಶನವಾಗಲಿದೆ’ ಎಂದರು.

ಭುವನೇಶ್ವರ ಆಜ್ರಾ ಅಧ್ಯಕ್ಷ ಡಾ.ಬಿ.ವಿ.ಡೇವಿಡ್‌, ಇಂಫಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರೇಮಜಿತ್‌ಸಿಂಗ್‌, ಎಂಟೊಮೊಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಉಪಾಧ್ಯಕ್ಷ ಡಾ.ಎನ್‌.ಕೆ.ಕೃಷ್ಣಕುಮಾರ್‌, ಆಜ್ರಾ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ.ಆನಂದ ಪ್ರಕಾಶ್‌, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ ಮಾತನಾಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ, ತ್ರಿವಿಕ್ರಮ ಜೋಷಿ, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ. ದೇಸಾಯಿ, ಶಿಕ್ಷಣ ನಿರ್ದೇಶಕ ಡಾ.ಎಸ್‌.ಕೆ.ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT