ಲಿಂಗಸುಗೂರು: ತಾಲ್ಲೂಕಿನ ದೇವರಭೂಪುರದ ಜಮೀನೊಂದಕ್ಕೆ ಬುಧವಾರ ಏಕಾಏಕಿ ಅರಣ್ಯಾಧಿಕಾರಿಗಳು ಯಂತ್ರಗಳ ಸಮೇತ ಅಕ್ರಮ ಪ್ರವೇಶ ಮಾಡಿ ಪಪ್ಪಾಯಿ, ದಾಳಿಂಬೆ ಬೆಳೆ ಹಾಗೂ ಕೃಷಿ ಪರಿಕರ ನಾಶ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ) ಕಾರ್ಯಕರ್ತರು ಖಂಡಿಸಿದ್ದಾರೆ.
ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್ ಅವರಿಗೆ ಗುರುವಾರ ದೂರು ಸಲ್ಲಿಸಿದ ಪದಾಧಿಕಾರಿಗಳು,‘ಅಂಬಮ್ಮ ಶಿವಪ್ಪ ನಾಯಕ ಅವರಿಗೆ ಸೇರಿದ ಸರ್ವೆ ನಂಬರ್ 31/1 ಕ್ಷೇತ್ರ 10.04 ಗುಂಟೆ ಜಮೀನಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡುವುದರ ಜೊತೆಗೆ ಮಾಲೀಕರ ಮಗನಿಗೆ ನಿಂದನೆ ಮಾಡಿದ್ದಾರೆ. ಅಂದಾಜು ₹40 ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಆರೋಪಿಸಿದರು.
ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಸಾಮಾಜಿಕ ನ್ಯಾಯ ಕೊಡಿಸದೆ ಹೋದಲ್ಲಿ ಮಾಲೀಕ ಮತ್ತು ಕುಟುಂಬಸ್ಥರ ಸಮೇತ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಮೀನು ಮಾಲಿಕರಾದ ಅಂಬಮ್ಮ ಶಿವಪ್ಪ ನಾಯಕ, ಸಂಘಟನೆಯ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್, ತಾಲ್ಲೂಕು ಸಂಚಾಲಕ ರಮೇಶ ಗೋಸ್ಲೆ, ಮುಖಂಡರಾದ ಮಹಾದೇವಪ್ಪ ಪರಾಂಪುರ, ಹೈದರ್ ಅಲಿ, ಭೀಮಣ್ಣ ವೀರಾಪುರ, ಅನಿಲಕುಮಾರ್, ಅಮರೇಶ ಯಲಗಟ್ಟಾ, ಶಿವಣ್ಣ ಹೊಸೂರು ಹಾಗೂ ಸಿದ್ದು ಮೇದಿನಾಪುರ ಹಾಜರಿದ್ದರು.