ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಆಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ ಹಾಗೂ ಬೀಜ ಘಟಕದ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದ ಬುಧವಾರ ಆಯೋಜಿಸಿದ್ದ ಹಿಂಗಾರು ಬೀಜ ದಿನೋತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತರು ಅಗತ್ಯ ಮಾಹಿತಿ ಪಡೆದರು.
ಪ್ರದರ್ಶನ ಮಳಿಗೆಗಳಲ್ಲಿ ವಿವಿಧ ಬೆಳೆಗಳ ಬೀಜ ಹಾಗೂ ಇತರೆ ಸುಧಾರಿತ ಕ್ರಮಗಳು, ಜೈವಿಕ ಪೀಡೆ ನಾಶಕಗಳ ಕುರಿತು ತಜ್ಞರಿಂದ ರೈತರು ಮಾಹಿತಿ ಪಡೆದುಕೊಂಡರು.
ರೋಗಗಳು ಮತ್ತು ಕೀಟಗಳನ್ನು ತಡೆಯಲು ರಾಸಾಯನಿಕಗಳ ಬಳಕೆ ದುಬಾರಿ ಅಷ್ಟೇ ಅಲ್ಲ: ಅಪಾಯಕಾರಿಯೂ ಹೌದು. ಜೈವಿಕವಾಗಿಯೇ ಅವುಗಳನ್ನು ಹೇಗೆ ನಿಯಂತ್ರಿಸಬೇಕು ಎನ್ನುವ ಕುರಿತು ವಿಶ್ವವಿದ್ಯಾಲಯದ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತಿಳಿವಳಿಕೆ ನೀಡಿದರು.
ಫೆರೋಮೋನ್ ಬಲೆಗಳು: ವಿರುದ್ಧ ಲಿಂಗದ ಕೀಟಗಳಿಂದ ಹೊರಹೊಮ್ಮುವ ಪರಿಮಳದಂತಹ ವಸ್ತುವನ್ನು ಬಳಸಿಕೊಂಡು ಗಂಡು ಪತಂಗಗಳನ್ನು ಆಕರ್ಷಿಸಿ ಕೊಲ್ಲುತ್ತವೆ. ಹೆಣ್ಣು ಕೀಟವೆಂದು ಭಾವಿಸುವ ಗಂಡು ಕೀಟಗಳು ವಾಸನೆಗೆ ಆಕರ್ಷಿತವಾಗಿ ಅಲ್ಲಿರುವ ಸಾವಯವ ಕೀಟನಾಶಕ ಅಥವಾ ಮೇಣದಂತಹ ವಸ್ತುವಿಗೆ ಸಿಲುಕಿ ಸಾಯುತ್ತವೆ. ಫೆರೋಮೋನ್ ಬಲೆ ಉಪಯೋಗಿಸಿ ಹಾರುವ ಹುಳುಗಳನ್ನು ನಿಯಂತ್ರಿಸಬಹುದು ಎಂದು ರೈತರಿಗೆ ಮನವರಿಕೆ ಮಾಡಿದರು.
ಮಾತ್ರೆ ಮಾದರಿಯ ವಸ್ತು ಹಾಗೂ ಹಾಗೂ ಟೂತ್‌ಪೇಸ್ಟ್ ನಂತಹ ದ್ರವ್ಯ ಬಳಿಸಿ ಕೀಟಗಳನ್ನು ನಿಯಂತ್ರಿಸುವ ಬಗೆ ಕುರಿತು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ ರೈತರಿಂದ ಆಸಕ್ತಿಯಿಂದ ಮಾಹಿತಿ ಪಡೆದರು. ಕೆಲವರು ಸ್ಥಳದಲ್ಲೇ ಮೋಹಕ ಬಲೆಗಳ ಖರೀದಿ ಮಾಡಿದರು.
ಎರೆಹುಳದ ಗೊಬ್ಬರ ಕುರಿತು ಸಹ ಸ್ನಾತಕೋತ್ತರ ವಿದ್ಯಾರ್ಥಿನಿಯರು ರೈತರಿಗೆ ಅಚ್ಚುಕಟ್ಟಾದ ಮಾಹಿತಿ ಒದಗಿಸಿದರು. ರೈತರು ಸಹ ಅಷ್ಟೇ ಆಸಕ್ತಿಯಿಂದ ಮಾಹಿತಿ ಆಲಿಸಿದರು. ಹೆಚ್ಚಿನ ಕೃಷಿ ಜಮೀನು ಹೊಂದಿರುವ ರೈತರು ಡ್ರೋನ್ ಸಹಾಯದಿಂದ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವ ಮಾಹಿತಿ ಪಡೆದರು.
ಜಿಲ್ಲೆಯ ರೈತರಿಗೆ ಊಟದ ವ್ಯವಸ್ಥೆ ಬಣ್ಣದ ಧ್ವಜ ನೆಟ್ಟು ರೈತರಿಗೆ ಸ್ವಾಗತ ರೈತರಿಗೆ ಮಾಹಿತಿ ಪುಸ್ತಿಕೆ ಪೂರೈಕೆ
ಜೋಳದ ಬಿಸ್ಕತ್ತು ಜೋಳ ಆಧಾರಿತ ಬಿಸ್ಕತ್ತು ಬೆಳ್ಳುಳ್ಳಿ ಪೌಷ್ಟೀಕರಿಸಿದ ಸಿರಿಧಾನ್ಯ ಆಧಾರಿತ ಬ್ರೆಡ್ ಕುರಿತು ಸಹ ರೈತರಿಗೆ ಮಾಹಿತಿ ಒದಗಿಸಲಾಯಿತು. ಹಿಂಗಾರು ಕಡಲೆ ತಳಿಗಳು ಸಿರಿಧಾನ್ಯ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು ಶಾಲಾ ಪೂರ್ವ ಮಕ್ಕಳಿಗೆ ಆರೋಗ್ಯ ವರ್ಧನೆಗೆ ಆಹಾರದ ಅವಶ್ಯಕತೆ ಮತ್ತು ದಿನಚರಿ ಮಾಹಿತಿ ಹಂಚಿಕೊಳ್ಳಲಾಯಿತು. ವಿಶ್ವವಿದ್ಯಾಲಯ ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಜೈವಿಕ ನಿಯಂತ್ರಣ ವಿಭಾಗದ ವತಿಯಿಂದ ಕಬ್ಬಿನ ಗೊಣ್ಣೆ ಹುಳುವಿನ ಜೈವಿಕ ನಿಯಂತ್ರಣ ಕುರಿತು ಅಗತ್ಯ ಮಾಹಿತಿ ಒದಗಿಸಲಾಯಿತು. ‘ರೈತರಿಗೆ ಗುಣಮಟ್ಟದ ಬೀಜ ಒದಗಿಸುವ ಉದ್ದೇಶದಿಂದ ವಿವಿಧ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನಗಳ ಕೇಂದ್ರಗಳಲ್ಲಿಇ 11 ಸುಸಜ್ಜಿತ ಬೀಜ ಸಂಸ್ಕರಣಾ ಘಟಕ ಹಾಗೂ ಬೀಜ ಉಗ್ರಾಣಗಳನ್ನು ಸ್ಥಾಪಿಸಲಾಗಿದೆ’ ಎಂದು ವಿಶೇಷ ಅಧಿಕಾರಿ ಅರುಣಕುಮಾರ ಹೊಸಮನಿ ಮಾಹಿತಿ ಹಂಚಿಕೊಂಡರು. ವಿಶ್ವವಿದ್ಯಾಲಯದ ಬೀಜ ಘಟಕ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ 570 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ. ಕಡಲೆ (ಬಿಜಿ–11 ಬಿಜಿಡಿ111–1 ಬಿಜಿಡಿ–103) ಸೂರ್ಯಕಾಂತಿ (ಆರ್‌ಎಸ್‌ಎಫ್‌ಎಚ್–700 ಊದಲು (ಎಚ್‌ಬಿ–1) ಬರಗು (ಎಚ್‌ಬಿ–1) ಹಾಗೂ ಕುಸುಬೆ (ಐಎಸ್‌ಎಫ್–764) ಬೀಜಗಳು ಮಾರಾಟಕ್ಕೆ ಲಭ್ಯ ಇವೆ. ಕೃಷಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ತಮ್ಮ ಭೂಮಿಗೆ ಸೂಕ್ತವಾದ ಬೀಳ ತಳಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.