ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯಕೀಯ ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರಿಮ್ಸ್‌ಗೆ ದುರ್ಗತಿ

ಬಾವಸಲಿ 
Published 8 ಜನವರಿ 2024, 6:20 IST
Last Updated 8 ಜನವರಿ 2024, 6:20 IST
ಅಕ್ಷರ ಗಾತ್ರ

ರಾಯಚೂರು: ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರೇ ರಾಯಚೂರು ಜಿಲ್ಲೆಯ ಉಸ್ತುವಾರಿಯಾಗಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇರದ ಕೊಳಕು ಹಾಗೂ ರಿಮ್ಸ್‌ ಆಸ್ಪತ್ರೆಯಲ್ಲಿ ಇದೆ. ಶರಣಪ್ರಕಾಶ ಅವರು ಜಿಲ್ಲೆಗೆ ಬರುವುದೇ ಅಪರೂಪ. ಹೀಗಾಗಿ ಜಟಿಲ ಸಮಸ್ಯೆಗಳೂ ಇಂದಿಗೂ ನಿವಾರಣೆಯಾಗಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ರಾಯಚೂರನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಆಸ್ಪತ್ರೆಗೆ ರೋಗಿಗಳು ಮೂಗು ಮುಚ್ಚಿಕೊಂಡು ಬರಬೇಕಾದ ಸ್ಥಿತಿ ಇದೆ. ಆವರಣದಲ್ಲೂ ಸ್ವಚ್ಛತೆ ಇಲ್ಲ. ಲಿಫ್ಟ್‌ ಹಾಗೂ ಗೋಡೆಗಳ ಮೇಲೆ ಕಿಡಿಗೇಡಿಗಳು ಗುಟಕಾ ತಿಂದು ಉಗುಳಿದ್ದಾರೆ. ಆಸ್ಪತ್ರೆಯಲ್ಲಿ ಸೆಕ್ಯುರಿಟಿಗಳ ಕೊರತೆ ಇದೆ. ಆಸ್ಪತ್ರೆಯ ಆಡಳಿತ ಬಿಗುವಿಲ್ಲದ ಕಾರಣ ಅವ್ಯವಸ್ಥೆ ತಾಂಡವವಾಡುತ್ತಿದೆ.

ಜಿಲ್ಲೆಯ ಜನರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ಇಲ್ಲಿನ ರಿಮ್ಸ್ ಆಸ್ಪತ್ರೆ ಅನೇಕ ಸಮಸ್ಯೆಗಳಿಂದ ನಲುಗುತ್ತಿದ್ದು ರೋಗಿಗಳು ಸೌಲಭ್ಯ ವಂಚಿತರಾಗಿದ್ದಾರೆ. ಹೆಚ್ಚುತ್ತಿರುವ ರೋಗಿಗಳ ಅನುಗುಣವಾಗಿ ಹೆಚ್ಚಿನ ಸೌಲಭ್ಯ ಕಲ್ಪಿಸಲು ರಿಮ್ಸ್ ಆಡಳಿತ ಮಂಡಳಿ ವಿಫಲವಾಗಿದೆ. ಲೋಪಗಳನ್ನು ಸರಿಪಡಿಸಿಕೊಂಡು ಸುಧಾರಣೆ ಮಾಡಿಕೊಳ್ಳುವಲ್ಲಿಯೂ ಎಡವುತ್ತಿದೆ.

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯದ ಆರೋಗ್ಯ ಸೇವೆಯ ಕೊರತೆಯನ್ನು ರಾಯಚೂರು ವೈದ್ಯಕೀಯ ವಿಜ್ಞಾನ (ರಿಮ್ಸ್‌) ಬೋಧಕ ಆಸ್ಪತ್ರೆಯೊಂದೇ ನಿಭಾಯಿಸುತ್ತ ಬಂದಿದೆ. ಆದರೆ, ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ರಿಮ್ಸ್ ಆಸ್ಪತ್ರೆಯ ಗಾಜುಗಳು ಹಲವೆಡೆ ಒಡೆದಿವೆ. ಗಿಡ ಬೆಳೆದರೂ ಸ್ವಚ್ಛಗೊಳಿಸುತ್ತಿಲ್ಲ. ಆಸ್ಪತ್ರೆಯ ಸುತ್ತಮುತ್ತ ಮಾಲಿನ್ಯ ಮನೆ ಮಾಡಿದೆ. ಹಂದಿ, ನಾಯಿಗಳು ಆಸ್ಪತ್ರೆ ಆವರಣದಲ್ಲೇ ಆಶ್ರಯ ಪಡೆದುಕೊಂಡಿವೆ.

ಗರ್ಭಿಣಿಯರಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ. ಸ್ಕ್ಯಾನಿಂಗ್  ಮಾಡಿಸಿಕೊಳ್ಳಲು ಟೋಕನ್ ಪಡೆದು 4 ದಿನದಿಂದ ಒಂದು ವಾರ ಕಾಯಬೇಕು. ರಕ್ತ ಪರೀಕ್ಷೆಗಾಗಿ ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಆಸ್ಪತ್ರೆಯ ನಾಲ್ಕು ದಿಕ್ಕುಗಳಲ್ಲಿ ತಲಾ ಎರಡರಂತೆ 8 ಲಿಫ್ಟ್ ಇದ್ದರೂ 3 ಅಥವಾ 4 ಮಾತ್ರ ಕಾರ್ಯನಿರ್ವಹಿಸುತ್ತವೆ. ಲಿಫ್ಟ್ ನಲ್ಲಿ ಗುಟ್ಕಾ ಉಗಿಯಲಾಗಿದ್ದು, ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ರೋಗಿಗಳಿಗೆ ಸಾಗಿಸಲು ಸ್ಟ್ರೆಚರ್‌, ವ್ಹೀಲ್‌ಚೇರ್‌ಗಳ ಕೊರತೆ ಇದೆ.


ಸಮಯ ಪಾಲನೆ ಮಾಡದ ವೈದ್ಯರು

ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಯಲ್ಲಿ ವೈದ್ಯರು ಬೆಳಿಗ್ಗೆ ಮಾತ್ರ ಕೆಲಸ ಮಾಡಿ ಮಧ್ಯಾಹ್ನ ಬಯೊಮೆಟ್ರಿಕ್ ಹಾಜರಿ ಹಾಕಿ ಕಣ್ಮರೆಯಾಗುತ್ತಾರೆ. ಬಹುತೇಕ ವೈದ್ಯರು ಖಾಸಗಿ ಕ್ಲಿನಿಕ್ ತೆರೆದಿದ್ದು ಹೆಚ್ಚಿನ ಸಮಯವನ್ನು ತಮ್ಮ ಕ್ಲಿನಿಕ್‌ನಲ್ಲಿಯೇ ಕಳೆಯುತ್ತಾರೆ. ಈ ಬಗ್ಗೆ ಅನೇಕ ಸಂಘ–ಸಂಸ್ಥೆಗಳು ದೂರು ನೀಡಿ ಆಸ್ಪತ್ರೆಯ ಆವರಣದ ಮುಂದೆ ಪ್ರತಿಭಟನೆ ಮಾಡಿದರೂ ಪರಿಸ್ಥಿತಿ ಬದಲಾಗಿಲ್ಲ.

2014ರಲ್ಲಿ ರಿಮ್ಸ್‌ ಆಸ್ಪತ್ರೆ ಆರಂಭವಾದ ವರ್ಷದಲ್ಲಿ ದಿನಕ್ಕೆ ಸರಾಸರಿ 700 ರೋಗಿಗಳು ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಿದ್ದರು. ಪ್ರಸ್ತುತ ನಿತ್ಯ 1,000 ರಿಂದ 1500ರವರೆಗೆ ಹೊರ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ.

ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯು 2018ರಿಂದ ಜಾರಿಗೆ ಬರುವಂತೆ 100 ರಿಂದ 150 ಕ್ಕೆ ಏರಿಕೆ ಮಾಡಿರುವುದರಿಂದ ಉಪನ್ಯಾಸ ಕೊಠಡಿ ಮತ್ತು ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ಅನಿವಾರ್ಯತೆ ಇದೆ.

ಸ್ತ್ರೀ ರೋಗ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಕಿವಿ, ಮೂಗು, ಗಂಟಲು ಚಿಕಿತ್ಸೆ ವಿಭಾಗ ಸೇರಿದಂತೆ ಆಸ್ಪತ್ರೆಯಲ್ಲಿ 11 ವಿಭಾಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಗಂಭೀರ ಕಾಯಿಲೆಯ ರೋಗಿಗಳನ್ನು ಸೂಪರ್‌ ಸ್ಪೆಷಾಲಿಟಿ ಸೌಲಭ್ಯವಿರುವ ಒಪೆಕ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ವೈದ್ಯಕೀಯ ಕಾಲೇಜಿಗಾಗಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಹಾಯಕ ‍ಪ್ರಾಧ್ಯಾಪಕರ ಹಾಗೂ ಸ್ಟಾಫ್ ನರ್ಸ್ ಹುದ್ದೆ ಇನ್ನಷ್ಟು ಭರ್ತಿ ಮಾಡಬೇಕಿದೆ.

ಆಸ್ಪತ್ರೆಯ ನೋಂದಣಿ ವಿಭಾಗದ ದಾಖಲೆಗಳ ಪ್ರಕಾರ, ಯಾದಗಿರಿ ಜಿಲ್ಲೆಯ ಕೆಲ ತಾಲ್ಲೂಕುಗಳ ಮಹಿಳೆಯರು ಸಹ ಹೆರಿಗೆ ಮಾಡಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಗಡಿ ಭಾಗದ ಗ್ರಾಮೀಣ ಜನರು ಕೂಡಾ ರಿಮ್ಸ್‌ ಆಸ್ಪತ್ರೆಯಲ್ಲಿ ಸೇವೆ ಪಡೆಯುತ್ತಾರೆ.

‘ಸರ್ಕಾರಿ ನಿಯಮಾನುಸಾರ ಯಾರಿಗೂ ವೈದ್ಯಕೀಯ ಸೇವೆ ನಿರಾಕರಿಸಲು ಆಗುವುದಿಲ್ಲ. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಲಭ್ಯವಿರುವ ಚಿಕಿತ್ಸೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಒಳರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ 520ರಷ್ಟಿದ್ದ ಆಸ್ಪತ್ರೆಯ ಹಾಸಿಗೆಗಳ ನ್ನು 640ಕ್ಕೆ ಹೊಂದಿಸಿ ಏರಿಕೆ ಮಾಡಲಾಗಿದೆ‘ ಎನ್ನುತ್ತಾರೆ ರಿಮ್ಸ್ ಡೀನ್ ಡಾ. ರಮೇಶ ಬಿ.

ಇಂದಿರಾ ಕ್ಯಾಂಟೀನ್ ತೆರೆಯಲು ಒತ್ತಾಯ

ರಾಯಚೂರು, ಯಾದಗಿರಿ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ರೋಗಿಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯ ಮುಂಭಾಗದಲ್ಲಿ ಎರಡು– ಮೂರು ಪಟ್ಟು ದರವಿದ್ದರೂ ಗುಣಮಟ್ಟದ ಊಟ ಸಿಗುತ್ತಿಲ್ಲ.

ಆಸ್ಪತ್ರೆಯಲ್ಲಿ ಕೇವಲ ರೋಗಿಗೆ ಊಟ ನೀಡಲಾಗುತ್ತದೆ ಆದರೆ ಗುಣಮಟ್ಟದ ಊಟ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವೆಚ್ಚ ಭರಿಸಲು ಆಗದೇ ರಿಮ್ಸ್ ಗೆ ಬರುತ್ತಾರೆ. ಆದರೆ ಇಲ್ಲಿ ರಕ್ತ ತಪಾಸಣೆ, ಎಕ್ಸ್ ರೇ, ಸ್ಕ್ಯಾನಿಂಗ್ ಗೆ ಹಣ ಪಾವತಿಸಬೇಕು. 

ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಅರ್ಧದಷ್ಟು ರಿಯಾಯತಿ ಇದೆ. ಹಳ್ಳಿಯ ಜನ ತರಾತುರಿಯಲ್ಲಿ ಬಂದಾಗ ತರುವುದಿಲ್ಲ. ಮೊಬೈಲ್‌ನಲ್ಲಿ ತೋರಿಸಿದರೆ ಪ್ರಿಂಟ್ ಬೇಕು ಅಂತಾರೆ. ರಿಮ್ಸ್‌ನಲ್ಲಿ ತುರ್ತು ಚಿಕಿತ್ಸಾ ಕೋಣೆಯ ಬಳಿ ಜೆರಾಕ್ಸ್ ಅಂಗಡಿ ಇದ್ದರೂ ಹೆಚ್ಚು ಹಣ ಕೇಳುತ್ತಾರೆ. ರೋಗಿಗಳಿಗೆ, ಜೊತೆಗೆ ಬಂದ ಕುಟುಂಬ ಸದಸ್ಯರಿಗೆ ಅನುಕೂಲವಾಗಲು ಇಂದಿರಾ ಕ್ಯಾಂಟೀನ್ ತೆರೆದು ಗುಣಮಟ್ಟದ ಆಹಾರ ನೀಡಬೇಕು ಹಾಗೂ ಆಸ್ಪತ್ರೆ ಆವರಣದ ಎರಡು ಕಡೆ ಜೆರಾಕ್ಸ್ ಅಂಗಡಿ ತೆರೆದು ಕಡಿಮೆ ದರದಲ್ಲಿ ದಾಖಲೆಗಳನ್ನು ಕಲಿಸುವ ವ್ಯವಸ್ಥೆ ಮಾಡಬೇಕು ಎಂದು ಎಲ್ ಬಿ.ಎಸ್ ನಗರದ ನಿವಾಸಿ ರಾಜಶೇಖರ, ಇಮಾಮ್ ಹುಸೇನ್ ಒತ್ತಾಯಿಸುತ್ತಾರೆ.

ರಿಮ್ಸ್ ಆಸ್ಪತ್ರೆಯ ಲಿಫ್ಟ್ ಗಳು ಕಟ್ಟುನಿಂತಿವೆ
ರಿಮ್ಸ್ ಆಸ್ಪತ್ರೆಯ ಲಿಫ್ಟ್ ಗಳು ಕಟ್ಟುನಿಂತಿವೆ
ಬಿಲ್ ಪಾವತಿಸಲು ಸರತಿ ಸಾಲಿನಲ್ಲಿ ನಿಂತಿರುವ ರೋಗಿಗಳ ಸಂಬಂಧಿಗಳು
ಬಿಲ್ ಪಾವತಿಸಲು ಸರತಿ ಸಾಲಿನಲ್ಲಿ ನಿಂತಿರುವ ರೋಗಿಗಳ ಸಂಬಂಧಿಗಳು
ರಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ ಕಸ ಎಸೆಯಲಾಗಿದೆ 
ರಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ ಕಸ ಎಸೆಯಲಾಗಿದೆ 
ರಿಮ್ಸ್ ಆಸ್ಪತ್ರೆಯ ಕಟ್ಟಡದ ಬಳಿ ನಿರ್ಮಿಸಿದ ‘ಬಿ‘ ಬ್ಲಾಕ್ ಕಟ್ಟಡ ಉದ್ಘಾಟನೆಯಾಗದೆ ಬಿಕೊ ಎನ್ನುತ್ತಿದೆ
ರಿಮ್ಸ್ ಆಸ್ಪತ್ರೆಯ ಕಟ್ಟಡದ ಬಳಿ ನಿರ್ಮಿಸಿದ ‘ಬಿ‘ ಬ್ಲಾಕ್ ಕಟ್ಟಡ ಉದ್ಘಾಟನೆಯಾಗದೆ ಬಿಕೊ ಎನ್ನುತ್ತಿದೆ

ಕ್ವಾರ್ಟರ್ಸ್ ಹಂಚಿಕೆ ಧರ್ಮಶಾಲಾ ಕಟ್ಟಡ ಸೇರಿದಂತೆ ಅನೇಕ ಹಿಂದಿನ ಅವಧಿಯಲ್ಲಿನ ಲೋಪಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುವೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ರೋಗಿಗಳಿಗೆ ಅವರ ಹಕ್ಕು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ- ಡಾ. ರಮೇಶ ಬಿ. ರಿಮ್ಸ್ ಡೀನ್

ರಿಮ್ಸ್ ಆಸ್ಪತ್ರೆಯಲ್ಲಿ 50 ಶೌಚಾಲಯವಿದೆ ಎಂಬ ಮಾಹಿತಿ ಇದೆ. ಆದರೆ ಯಾವ ಕಡೆ ನೋಡಿದರೂ ಶೌಚಾಲಯ ಸುಸ್ಥಿತಿಯಲ್ಲಿಲ್ಲ. ಅಂಗವಿಕಲರಿಗೆ ಆಸ್ಪತ್ರೆಯಲ್ಲಿ ಇಳಿಜಾರು ನಿರ್ಮಿಸಿಲ್ಲ. ಒಂದು ಕಬ್ಬಿಣದ ಪಾತ್‌ ನಿರ್ಮಿಸಿದರೂ ತುಕ್ಕು ಹಿಡಿದು ಹಾಳಾಗಿದೆ. ಅಂಗವಿಕಲರಿಗೆ ಪ್ರತ್ಯಕ ಶೌಚಾಲಯಗಳಿದ್ದರೂ ಬೀಗ ಹಾಕಲಾಗಿದೆ - ದೇವರಾಜ ನಾಯಕ ರಾಯಚೂರು ನಿವಾಸಿ

‘ಗುಣಮಟ್ಟ ಚಿಕಿತ್ಸೆಗೆ ಯತ್ನ’ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಕಟ್ಟಡ (ಬಿ ಬ್ಲಾಕ್) ನಿರ್ಮಿಸಲಾಗುತ್ತಿದೆ. ಅಂತಿಮ ಹಂತದಲ್ಲಿದ್ದು ಶೀಘ್ರವೇ ಉದ್ಘಾಟನೆ ಮಾಡಲಾಗುವುದು ಎಂದು ರಿಮ್ಸ್ ಡೀನ್ ಡಾ. ರಮೇಶ ಬಿ. ಮಾಹಿತಿ ನೀಡಿದರು. ‘ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯ ಒದಗಿಸಲು ಮುಂದಾಗಿದ್ದೇವೆ. ನಾನು ಅಧಿಕಾರ ವಹಿಸಿಕೊಂಡು 3 ವಾರವಾಗಿದ್ದು 6 ಬಾರಿ ವೈದ್ಯರ ಸಭೆ ನಡೆಸಿದ್ದೇನೆ. ರಿಮ್ಸ್ ವೈದ್ಯರು ಕರ್ತವ್ಯದ ಸಮಯದಲ್ಲಿ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಇರಬಾರದು ಎಂದು ತಾಕೀತು ಮಾಡಿದ್ದೇನೆ. ಪ್ರತಿ ದಿನ ಆಸ್ಪತ್ರೆಗೆ ರೌಂಡ್ಸ್ ಹಾಕಿ ವಸ್ತುಸ್ಥಿತಿ ಪರಿಶೀಲಿಸುತ್ತಿದ್ದೇನೆ. ಸ್ವಚ್ಚತೆ ನೈರ್ಮಲ್ಯದ ಜಾಗೃತಿ ಮೂಡಿಸುತ್ತಿದ್ದೇನೆ. ರಿಮ್ಸ್‌ನಲ್ಲಿ ಲಭ್ಯವಿರುವ ಚಿಕಿತ್ಸೆ ನೀಡದೇ ಬೇರೆ ಕಡೆ ರವಾನಿಸಬಾರದು ಎಂದು ವೈದ್ಯರಿಗೆ ಸೂಚನೆ ನೀಡಿದ್ದೇನೆ‘ ಎಂದು ಹೇಳಿದರು.

Cut-off box - ಹಾಳಾದ ಸೋಲಾರ್ ಕಂಬಗಳು ಬಿಸಿಲಿನ ಪ್ರಖರತೆ ಹೆಚ್ಚಿರುವ ಕಾರಣ ಆಸ್ಪತ್ರೆಯ ಆವರಣದಲ್ಲಿ ರಾಜ್ಯ ಸರ್ಕಾರ ಸೋಲಾರ್ ಪ್ಯಾನಲ್ ಅಳವಡಿಸಿದೆ. ರಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಜನರೇಟರ್ ಇಲ್ಲದ ಕಾರಣ ಕರೆಂಟ್ ಹೋದರೆ ಟಾರ್ಚ್ ಹಿಡಿದು ಕೂಡಬೇಕಿದೆ. ಅನೇಕ ಬಾರಿ ಪರೀಕ್ಷೆಯ ಸಮಯದಲ್ಲಿ ಟಾರ್ಚ್ ಹಿಡಿದುಕೊಂಡೇ ಅಭ್ಯಾಸ ಮಾಡಿದ್ದಾರೆ. ಬೇಸಿಗೆಯಲ್ಲಿ ಕೆಲವೊಮ್ಮೆ ಲೋಡ್ ಶೆಡ್ಡಿಂಗ್ ಇದ್ದಾಗ ಸಮಸ್ಯೆ ಹೇಳತೀರದು. ವಿದ್ಯಾರ್ಥಿಗಳಿಗೆ ನೀರಿನ ಸಂಗ್ರಹ ಮಾಡಲು ದೊಡ್ಡ ತೊಟ್ಟಿ ಟ್ಯಾಂಕ್ ಇಲ್ಲದ ಕಾರಣ ಕೆಲವೊಮ್ಮೆ ರಾತ್ರಿ ವೇಳೆ ವಿದ್ಯುತ್ ಕಡಿತವಾದರೆ ಬೆಳಿಗ್ಗೆ ಸ್ನಾನ ಮಾಡಲು ನೀರು ಸಿಗುವುದಿಲ್ಲ ಎನ್ನುತ್ತಾರೆ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು.  ವಸತಿ ನಿಲಯ ನಿರ್ವಹಣೆ ಸರ್ಕಾರದ ಜವಾಬ್ದಾರಿ. ಆದರೆ ಇಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಮಾಸಿಕ ₹ 2500 ಪಡೆಯಲಾಗುತ್ತಿದೆ. ಆದರೂ ಗುಣಮಟ್ಟದ ಆಹಾರ ಹಾಗೂ ಮೂಲಸೌಕರ್ಯ ನೀಡುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಆರೋಪ. ದೂರು ನೀಡಿದರೆ ತಮ್ಮ ವಿರುದ್ಧ ಶಿಸ್ತಕ್ರಮ ಜರುಗಿಸುತ್ತಾರೆ ಎನ್ನುವ ಭಯದಿಂದ ಯಾರೂ ಬಹಿರಂಗವಾಗಿ ಮಾತನಾಡಲ ಇಚ್ಚಿಸುವುದಿಲ್ಲ.

ಬಳಕೆಯಾಗದ ಧರ್ಮಶಾಲಾ ಕಟ್ಟಡ ಆಸ್ಪತ್ರೆಯ ಆವರಣದ ಮುಂದೆ ರೋಗಿಗಳ ಸಂಬಂಧಿಕರಿಗೆ ತಂಗಲು ಧರ್ಮಶಾಲಾ ಕಟ್ಟಡ ನಿರ್ಮಿಸಲಾಗಿದೆ. ಆದರೆ ಅದರಲ್ಲಿ ಔಷಧಿಗಳ ದಾಸ್ತಾನು ಇಡಲಾಗಿದೆ. ಆಸ್ಪತ್ರೆಯಲ್ಲಿ ದೊಡ್ಡ ದಾಸ್ತಾನು ಇದ್ದರೂ ಇಲ್ಲಿ ಇಟ್ಟಿದ್ದರಿಂದ ಧರ್ಮಶಾಲಾ ಸಾರ್ವಜನಿಕರ ಬಳಕೆಗೆ ದೊರೆಯುತ್ತಿಲ್ಲ. ರಿಮ್ಸ್‌ನಲ್ಲಿ ಇರುವ ಕ್ವಾಟರ್ಸ್ ವೈದ್ಯರಿಗೆ ಸ್ಟಾಫ್ ನರ್ಸ್‌ಗಳಿಗೆ  ಹೊರತುಪಡಿಸಿ ಹೊರ ಗುತ್ತಿಗೆ ಕಾರ್ಮಿಕರಿಗೆ ನೀಡುವುದು ನಿಯಮ ಬಾಹಿರ. ಆದರೆ ಕಾನೂನು ಉಲ್ಲಂಘನೆ ಮಾಡಿ ವೈದ್ಯರ ಚಾಲಕರಿಗೆ ಡಿ ಗ್ರುಪ್ ನೌಕರರಿಗೆ ಮನೆಗಳನ್ನು ನೀಡಲಾಗಿದೆ. ಹಿಂದಿನ ಮುಖ್ಯಸ್ಥ ಡಾ. ಬಸವರಾಜ ಪೀರಾಪುರು ಅವರು ನಿಯಮ ಉಲ್ಲಂಘಿಸಿದ್ದಾರೆ. ಅರ್ಹರಿಗೆ ಅನ್ಯಾಯ ಮಾಡಿದ್ದಾರೆ. ರಿಮ್ಸ್‌ನಲ್ಲಿ ಯಾವುದೇ ಹುದ್ದೆಗೆ ಸಿಬ್ಬಂದಿ ನೇಮಕ ಮಾಡಬೇಕಾದರೆ ಪ್ರಕಟಣೆ ನೀಡಿ ಅದಕ್ಕೆ ಅರ್ಹತಾ ಪರೀಕ್ಷೆ ನಡೆಸಿ ಸಂದರ್ಶನದ ಮೂಲಕ ಆಯ್ಕೆ ಮಾಡಬೇಕಿದೆ. ಆದರೆ ಸ್ಥಳೀಯ ಶಾಸಕರ ಮೌಖಿಕ ಆದೇಶದ ಮೇರೆಗೆ ಜವಾನ ಕಾರಕೂನ ಡೇಟಾ ಅಪರೇಟರ್ ಸೇರಿ ಅನೇಕ ಹುದ್ದೆಗಳಿಗೆ ಯಾವುದೇ ನೋಟಿಫಿಕೇಶನ್ ಕರೆಯದೇ ಕಾನೂನು ಬಾಹಿರವಾಗಿ ನೇಮಕ ಮಾಡಿದ್ದಾರೆ. ಅವರಿಗೆ ವೇತನ ಹೇಗೆ ಪಾವತಿಯಾಗುತ್ತಿದೆ ಎಂದು ಸ್ಪಷ್ಟಪಡಿಸಿಲ್ಲ ಇದರ ವಿರುದ್ಧ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮೆಹಬೂಬ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT