ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರಿಗೆ ಸಿಎಂ, ಡಿಸಿಎಂ, ಸಚಿವರ ದಂಡು

ಎಲ್ಲೆಡೆ ಕನ್ನಡ ಬಾವುಟ, ವಿದ್ಯುತ್ ದೀಪಾಲಂಕಾರ
Published 29 ಡಿಸೆಂಬರ್ 2023, 15:55 IST
Last Updated 29 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ಸಿಂಧನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ಸಚಿವರು ಡಿ.30 ರಂದು ಸಿಂಧನೂರಿಗೆ ಆಗಮಿಸಲಿದೆ


ಸಿಂಗಾರಗೊಂಡ ಸಿಂಧನೂರು: ನಾಯಕರು ಪ್ರಥಮ ಬಾರಿಗೆ ರಾಯಚೂರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಂಧನೂರು ನಗರ ವಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇಲ್ಲಿನ ರಾಯಚೂರು ರಸ್ತೆ, ಕುಷ್ಟಗಿ ರಸ್ತೆ ಹಾಗೂ ಗಂಗಾವತಿ ರಸ್ತೆ ಮಾರ್ಗದಲ್ಲಿರುವ ವಿದ್ಯುತ್ ದೀಪಗಳ ಕಂಬಗಳಿಗೆ ಹಳದಿ, ಕೆಂಪು ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿದೆ. ಸರ್ಕಾರಿ ಮಹಾವಿದ್ಯಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿ ಸುಂದರಗೊಳಿಸಲಾಗಿದೆ. ವಿವಿಧ ವೃತ್ತಗಳಲ್ಲಿ ಕಮಾನ್‍ಗಳನ್ನು ಕಟ್ಟಿ ಸ್ವಾಗತ ಕೋರಲಾಗಿದೆ.

ಭವ್ಯ ವೇದಿಕೆ: ನಗರದ ಸರ್ಕಾರಿ ಮಹಾವಿದ್ಯಾಲಯದ ಮೈದಾನದಲ್ಲಿ 60/30 ಚದರ ಅಡಿಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು, 45 ಕುರ್ಚಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದೆ 140/400 ಚದರ ಅಡಿಯಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, 20 ಸಾವಿರ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ.
ಭದ್ರತೆ: ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಎಎಸ್‍ಪಿ 2, ಡಿಎಸ್‍ಪಿ 11, ಪಿಐ, ಸಿಪಿಐ 30, ಪಿಎಸ್‍ಐ 58, ಎಎಸ್‍ಐ 86, ಹೆಚ್‍ಸಿ, ಪಿಸಿ 578, ಮ.ಹೆಚ್.ಸಿ, ಮ.ಪಿ.ಸಿ 65, ಸಶಸ್ತ್ರ ಮೀಸಲು ಪಡೆ 3 ತುಕಡಿ, ಕೆಎಸ್‍ಆರ್‍ಪಿ 3 ತುಕಡಿ, ಎಎಸ್‍ಸಿ 4 ತುಕಡಿ ತಂಡಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ತಿಳಿಸಿದ್ದಾರೆ.

ಸಾರಿಗೆ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆ: ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುವುದರಿಂದ ಸಾರ್ವಜನಿಕರ ಹಾಗೂ ಗಣ್ಯ ವ್ಯಕ್ತಿಗಳ ಸುಗಮ ಸಂಚಾರದ ಸಲುವಾಗಿ ಗಂಗಾವತಿಯಿಂದ ಬರುವ ಭಾರಿ ವಾಹನಗಳನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗೊರೇಬಾಳ ಕ್ಯಾಂಪ್ ಮಾರ್ಗವಾಗಿ ಗಾಂಧಿನಗರ, ಗುಂಜಳ್ಳಿ ಮಾರ್ಗದ ಕಡೆಗೆ ಹಾಗೂ ಮಾನ್ವಿಯಿಂದ ಬರುವ ಬಾರಿ ವಾಹನಗಳು ಜವಳಗೇರಾ ಕ್ರಾಸ್‍ನಿಂದ ದಢೇಸುಗೂರು ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.

ನಗರದಲ್ಲಿ ಕಾರ್ಯಕ್ರಮದ ದಿನದಂದು ಜನದಟ್ಟಣೆ ಹೆಚ್ಚಿರುವುದರಿಂದ ದ್ವಿಚಕ್ರ, ಲಘು ವಾಹನಗಳನ್ನು ನಗರದ ಅಂಬೇಡ್ಕರ್ ವೃತ್ತದಿಂದ ಎಂ.ಜಿ ವೃತ್ತದವರೆಗೆ, ಎಂ.ಜಿ ವೃತ್ತದಿಂದ ಕುಷ್ಟಗಿ ಮಾರ್ಗದ ಎಪಿಎಂಸಿ ವೃತ್ತದವರೆಗೆ ಯಾವುದೇ ವಾಹನಗಳನ್ನು ರಸ್ತೆಯ ಮೇಲೆ ನಿಲುಗಡೆ ಮಾಡಲು ಅವಕಾಶವಿರುವುದಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವಂತಹ ಸಾರ್ವಜನಿಕರು, ಕಾಲೇಜು ಯುವಕ, ಯುವತಿಯರು ಬೆಂಕಿ ಪಟ್ಟಣ, ಲೈಟರ್, ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಹಾಗೂ ಇತರೆ ಯಾವುದೇ ನಿಷೇಧಿತ ವಸ್ತುಗಳನ್ನು ತರಬಾರದು ಎಂದು ಸೂಚನೆ ನೀಡಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್.ಬೋಸರಾಜು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್‍ಸಿಂಗ್ ಬರಲಿದ್ದಾರೆ. ತಿಮ್ಮಾಪೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ, ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ, ಸರ್ಕಾರಿ ಪದವಿ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಹಾಗೂ ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ಕನ್ನಡ ರಥ ಮೆರವಣಿಗೆಗೆ ಚಾಲನೆ, ಸಿಂಧನೂರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ.

ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಹಾಕಿರುವ ವೇದಿಕೆ ಹಾಗೂ ಬೃಹತ್ ಪೆಂಡಾಲ್‍ನ್ನು ಶಾಸಕ ಹಂಪನಗೌಡ ಬಾದರ್ಲಿ ವೀಕ್ಷಿಸಿದರು
ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಹಾಕಿರುವ ವೇದಿಕೆ ಹಾಗೂ ಬೃಹತ್ ಪೆಂಡಾಲ್‍ನ್ನು ಶಾಸಕ ಹಂಪನಗೌಡ ಬಾದರ್ಲಿ ವೀಕ್ಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT