ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಚಿನ್ನದತ್ತ ರಾಮಕುಮಾರ್‌–ಸಾಕೇತ್‌

Published 28 ಸೆಪ್ಟೆಂಬರ್ 2023, 23:20 IST
Last Updated 28 ಸೆಪ್ಟೆಂಬರ್ 2023, 23:20 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ರಾಮಕುಮಾರ್ ರಾಮನಾಥನ್ ಮತ್ತು ಸಾಕೇತ್‌ ಮೈನೇನಿ ಅವರು ದಕ್ಷಿಣ ಕೊರಿಯಾದ ಜೋಡಿಯ ಪ್ರಬಲ ಹೋರಾಟವನ್ನು ಬದಿಗೊತ್ತಿ ಏಷ್ಯನ್ ಗೇಮ್ಸ್‌ ಟೆನಿಸ್‌ ಪುರುಷರ ಡಬಲ್ಸ್‌ನಲ್ಲಿ ಗುರುವಾರ ಫೈನಲ್ ತಲುಪಿದರು. ಚಿನ್ನಕ್ಕೆ ಈಗ ಒಂದೇ ಹೆಜ್ಜೆ ಬಾಕಿಯಿದೆ.

ಸೆಮಿಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ಸೋತ ನಂತರ ಪುಟಿದೆದ್ದ ಕೊರಿಯಾ ಹೋರಾಟ ತೋರಿದರೂ, ಭಾರತೀಯ ಜೋಡಿ ಅಂತಿಮವಾಗಿ ಮೇಲುಗೈ ಸಾಧಿಸಿ 6–1, 6–7 (8), 10–0 ಯಿಂದ ಗೆಲುವಿನ ನಗೆ ಬೀರಿತು. ಪಂದ್ಯ 96 ನಿಮಿಷಗಳವರೆಗೆ ನಡೆಯಿತು.

ಭಾರತದ ಜೋಡಿ ಚಿನ್ನದ ಪದಕಕ್ಕೆ ನಡೆಯುವ ಹೋರಾಟದಲ್ಲಿ ಚೀನಾ ತೈಪೆಯ ಸಿಯಾವು ಸು ಯು –ಜೇಸನ್ ಜಂಗ್ ಜೋಡಿಯನ್ನು ಎದುರಿಸಲಿದೆ. ಇವರಿಬ್ಬರು ಇನ್ನೊಂದು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಪ್ರಚ್ಯ ಇಸಾರೊ– ಮ್ಯಾಕ್ಸಿಮಸ್ ಪಾರಾಪೋಲ್ ಜೋನ್ಸ್‌ ಜೋಡಿಯನ್ನು 4–6, 7–6 (5), 10–2 ರಿಂದ ಸೋಲಿಸಿದರು.

ಭಾರತ 2018ರ ಜಕಾರ್ತಾ ಕ್ರೀಡೆಗಳಲ್ಲಿ ಟೆನಿಸ್‌ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು. ಆಗ ರೋಹನ್ ಬೋಪಣ್ಣ ಮತ್ತು ದಿವಿಜ್‌ ಶರಣ್ ಆ ತಂಡದಲ್ಲಿದ್ದರು. ಈ ಬಾರಿ ಬೋಪಣ್ಣ– ಯುಕಿ ಭಾಂಬ್ರಿ ಅವರು ಬೇಗನೇ ನಿರ್ಗಮಿಸಿದ್ದಾರೆ.

ಆದರೆ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಬೋಪಣ್ಣ ಅವರು ರುತುಜಾ ಭೋಸ್ಲೆ ಜೊತೆ ಆಡುತ್ತಿದ್ದು ಪದಕದ ಸಾಧ್ಯತೆ ಜೀವಂತಾಗಿಟ್ಟಿದ್ದಾರೆ. ಈ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಸ್ತಾನದ ಜಿಬೆಕ್ ಕುಲಂಬೆಯೇವಾ– ಗ್ರಿಗರಿ ಲೊಮಾಕಿನ್ ಜೋಡಿಯನ್ನು 1 ಗಂಟೆ 24 ನಿಮಿಷಗಳ ಹೋರಾಟದ ನಂತರ 7–5, 6–3 ರಿಂದ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT