ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result | ಮಸ್ಕಿ: ವಿಶೇಷ ತರಗತಿಗಳೇ ಫಲಿತಾಂಶದ ಶಕ್ತಿ

Published 16 ಮೇ 2024, 6:11 IST
Last Updated 16 ಮೇ 2024, 6:11 IST
ಅಕ್ಷರ ಗಾತ್ರ

ಮಸ್ಕಿ: ಬಡ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗಾಗಿಯೇ ಸರ್ಕಾರ ತೆರೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಪ್ರಾಚಾರ್ಯರು ತಮ್ಮ ಕರ್ತವ್ಯ ಅರಿತು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂಬುದಕ್ಕೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಸ್‌.ಸಿ) ಉತ್ತಮ ಉದಾಹರಣೆ.

8 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ ನಾಲ್ಕು ವರ್ಷಗಳಿಂದ ಸತತವಾಗಿ ಶೇ 100 ರಷ್ಟು ಫಲಿತಾಂಶ ಪಡೆದು ಗಮನ ಸೆಳೆಯುತ್ತಿದೆ. ವಿದ್ಯಾರ್ಥಿಗಳ ಫಲಿತಾಂಶ ಶೇ 85-95ರ ಒಳಗೆ ಬರುತ್ತಿದೆ. 250 ವಿದ್ಯಾರ್ಥಿಗಳು ಈ ವಸತಿ ಶಾಲೆಯಲ್ಲಿದ್ದು, 125 ಬಾಲಕರು ಹಾಗೂ 125 ಬಾಲಕಿಯರು ಓದುತ್ತಿದ್ದಾರೆ. 6 ರಿಂದ 10ನೇ ತರಗತಿವರೆಗೆ ಇರುವ ಶಾಲೆಯ ಪ್ರತಿ ತರಗತಿಯಲ್ಲಿ 50 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.

ಪಠ್ಯಕ್ಕೆ ಒತ್ತು: ಎಸ್ಎಸ್ಎಲ್‌ಸಿ ಸೇರಿ ಶಾಲೆಯ ಆಯಾ ತರಗತಿಗಳ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಿಸಲು ಬೆಳಿಗ್ಗೆ 8 ರಿಂದ 9 ರವರೆಗೆ ಗಣಿತ ಮತ್ತು ವಿಜ್ಞಾನ ವಿಷಯದ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಸಂಜೆ 6 ರಿಂದ 7.30 ರವರೆಗೆ ಎಂಒಡಿಯಿಂದ ಪ್ರತಿದಿನ ವಿಶೇಷ ತರಗತಿ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಲಾಗುತ್ತದೆ.

ವರ್ಷದಲ್ಲಿ ಮೂರು ಬಾರಿ ಪಾಲಕರ ಸಭೆ ಕರೆದು ಮಕ್ಕಳ ಹಾಗೂ ಶಿಕ್ಷಕರ ಸಮಕ್ಷಮದಲ್ಲಿ ಕೈಗೊಂಡ ಪಠ್ಯ ಹಾಗೂ ಪಠ್ಯೇತರ ಚುಟುವಟಿಗಳ ಕುರಿತು ಮಾಹಿತಿ ನೀಡುವ ಜೊತೆಗೆ ಸಲಹೆ ಪಡೆಯುತ್ತಿರುವುದು ವಿಶೇಷ. ಶಾಲೆಯ ಗುಣಮಟ್ಟ ನೋಡಿ ಜಿಲ್ಲೆ ಅಷ್ಟೇ ಅಲ್ಲಾ ನೆರೆಯ ಜಿಲ್ಲೆಯ ಪಾಲಕರೂ ತಮ್ಮ ತಮ್ಮ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಪೈಪೋಟಿ ನಡೆಸುತ್ತಿರುವುದು ಸಹ ಈ ಶಾಲೆಯ ಹಿರಿಮೆಯನ್ನು ಹೆಚ್ಚಿಸಿದೆ. ಪಠ್ಯದ ಜೊತೆಗೆ ಪಠ್ಯೇತರ ಚುಟುವಟಿಕೆಗಳಾದ ಕ್ರೀಡೆ, ಪ್ರತಿಭಾ ಕಾರಂಜಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿಯೂ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿರುವುದು ಸಹ ಪ್ರಶಂಸೆಗೆ ಪಾತ್ರವಾಗಿದೆ.

ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳಿಗೆ 100 ಮಂಚಗಳಿದ್ದು, ಇನ್ನೂ 150 ಮಂಚಗಳ ಕೊರತೆ ಇದೆ. ಕನ್ನಡ ಮತ್ತು ಇಂಗ್ಲಿಷ್‌ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಗೀತ ಹಾಗೂ ಚಿತ್ರಕಲಾ ಶಿಕ್ಷಕರ ಕೊರತೆ ಇದೆ ಎನ್ನುತ್ತಾರೆ ಶಾಲೆಯ ಪ್ರಾಚಾರ್ಯ ಚನ್ನಬಸ್ಸಪ್ಪ ಹಿರೇಗೌಡ್ರು.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 95.36 ರಷ್ಟು ಅಂಕ ಪಡೆದ ಸುದೀಪ್ ಜಾಧವ ಬಡ ಕೂಲಿ ಕಾರ್ಮಿಕರ ಮಗ. ಇವರ ತಂದೆ ತಾವರೆಪ್ಪ ಲಿಂಗಸುಗೂರು ತಾಲ್ಲೂಕಿನ ಪರಪುರ ತಾಂಡಾದ ನಿವಾಸಿ. ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗನ ಫಲಿತಾಂಶ ಕೇಳಿ ಹೆಮ್ಮೆ ಪಟ್ಟಿದ್ದಾರೆ.

Quote - ಶಾಲೆಯಲ್ಲಿನ ಶಿಕ್ಷಕರು ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಟ್ಟದಿಂದ ಪರೀಕ್ಷೆಯಲ್ಲಿ ಶಾಲೆ ಶೇ 100ರಷ್ಟು ಫಲಿತಾಂಶ ಬರಲು ಕಾರಣವಾಯಿತು. ಪಾಲಕರ ಸಲಹೆ ಸೂಚನೆ ನೆರವಾಗಿತ್ತು ಚನ್ನಬಸ್ಸಪ್ಪ ಹಿರೇಗೌಡ್ರು ಪ್ರಾಚಾರ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT