ರಾಯಚೂರು: ಗಡಿನಾಡಿನಲ್ಲಿ ಕನ್ನಡ ಅಭಿವೃದ್ಧಿಗೆ ಶ್ರಮಿಸುವ ಶಾಲೆಗಳು

ರಾಯಚೂರು: ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ಅಂತರದ ತೆಲಂಗಾಣ ರಾಜ್ಯದ ಗಡಿಭಾಗದ ಗ್ರಾಮಗಳಲ್ಲಿ 10 ಕನ್ನಡ ಮಾಧ್ಯಮ ಶಾಲೆಗಳಿದ್ದು, ಕನ್ನಡ ಭಾಷಾ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ಗದ್ವಾಲ್, ಮಹೆಬೂಬ್ ನಗರ ಹಾಗೂ ನಾರಾಯಣಪೇಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷ್ಣಾ ಸೇರಿದಂತೆ ಸುತ್ತಮುತ್ತಲೂ 13 ಗ್ರಾಮಗಳಲ್ಲಿ ಲಕ್ಷಾಂತರ ಕನ್ನಡ ಭಾಷಿಕರಿದ್ದಾರೆ. ತೆಲುಗು ಭಾಷೆ ಗೊತ್ತಿದ್ದರೂ ಕನ್ನಡದಲ್ಲೇ ವ್ಯವಹರಿಸಿ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸುವ ಉತ್ಸಾಹವನ್ನು ಪಾಲಕರು ಹೊಂದಿದ್ದಾರೆ. ಸ್ವಾತಂತ್ರ್ಯಪೂರ್ವದಿಂದಲೂ ಆ ಗ್ರಾಮಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳು ಸ್ಥಾಪನೆಯಾಗಿವೆ.
ಕೃಷ್ಣಾ, ಇಂದುಪುರ, ಗುರ್ಜಾಲ, ತಂಗಡಗಿ, ಕುಸಮೂರ್ತಿ, ಸುಕುರ ಲಿಂಗಪಲ್ಲಿ, ಚೆಗುಂಟಿ, ಐನಾಪುರ, ಗುಡೆಬಲ್ಲೂರ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿದ್ದು, ಕೃಷ್ಣಾದಲ್ಲಿ ಏಕೈಕ ಪ್ರೌಢಶಾಲೆ ಇದೆ. ಸದ್ಯ 1,350 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 40ಕ್ಕೂ ಹೆಚ್ಚು ಕನ್ನಡ ಶಾಲೆಗಳ ಶಿಕ್ಷಕರಿಗೆ ತೆಲಂಗಾಣ ಸರ್ಕಾರ ವೇತನ ನೀಡುತ್ತಿದೆ.
ಸದ್ಯಕ್ಕೆ ಪ್ರೌಢಶಾಲೆ ಹಂತ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕಾಲೇಜು ಸೇರಿಕೊಳ್ಳುವುದಕ್ಕೆ ಪರದಾಡುವ ಸ್ಥಿತಿ ಇದೆ. ತೆಲಂಗಾಣದಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕೋ ಅಥವಾ ಕರ್ನಾಟಕದಲ್ಲಿ ಓದಬೇಕೋ ಎಂಬ ಗೊಂದಲ ಶುರುವಾಗಿದೆ. ಇದೇ ಕಾರಣ ಕುಮಸಗಿ, ಆಲಂಪಲ್ಲಿ ಸೇರಿ ನಾಲ್ಕು ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಮುಚ್ಚಿವೆ.
ಗಡಿಯಾಚೆಗೆ ಕನ್ನಡವನ್ನು ಬೆಳೆಸುತ್ತಿರುವ ಶಾಲೆಗಳನ್ನು ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಆದರೆ, ಗಡಿನಾಡಿನ ಶಾಲಾ ಶಿಕ್ಷಕರು ಮಾತ್ರ ಕನ್ನಡ ಮಾಧ್ಯಮ ಉಳಿಸಿ, ಬೆಳೆಸುವುದಕ್ಕೆ ಹರಸಾಹಸ ಅನುಭವಿಸಿಕೊಂಡು ಬರುತ್ತಿದ್ದಾರೆ. ಗಡಿನಾಡು ಕನ್ನಡಿಗರಿಗೆ ಕರ್ನಾಟಕದಲ್ಲಿ ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ಸಿಗಲಿಲ್ಲ.
ಇದರಿಂದ ಬೇಸತ್ತು ಕನ್ನಡದ ಕೆಲ ಕುಟುಂಬಗಳು ಸರ್ಕಾರದ ಸ್ಪಂದನೆಗೆ ಕಾಯುವುದು ವ್ಯರ್ಥವೆಂದು ತೆಲುಗು ಇಲ್ಲವೇ ಇಂಗ್ಲಿಷ್ ಮಾಧ್ಯಮದ ಮೊರೆ ಹೋಗಲಾರಂಭಿಸಿದ್ದಾರೆ. ಇದರ ಪರಿಣಾಮ ಕನ್ನಡ ಮಾಧ್ಯಮ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯ ಕಡಿ ಕುಸಿದಿದೆ. ಆದರೆ, ಶಾಲಾ ಶಿಕ್ಷಕರು ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಕೈಬಿಟ್ಟಿಲ್ಲ.
ಕಷ್ಣಾದಲ್ಲಿರುವ ಶಾಲೆಯು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿದ್ದು, 1968 ರಲ್ಲಿ ಪ್ರೌಢಶಾಲೆಗೆ ಉನ್ನತೀಕರಣ ಮಾಡಲಾಗಿದೆ. ಕನ್ನಡ ಮಾಧ್ಯಮದಲ್ಲೇ ಮಕ್ಕಳು ಓದುವುದಕ್ಕೆ ಶಿಕ್ಷಕರು ಮನವರಿಕೆ ಮಾಡಿಕೊಟ್ಟು ಭಾಷೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಗಮನಾರ್ಹ. ಆದರೆ, ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸಿ ಎನ್ನುವುದು ಬರೀ ಘೋಷಣೆಗೆ ಸೀಮಿತವಾಗಿದೆ ಎಂಬುದು ಸ್ಥಳೀಯರ ಅನಿಸಿಕೆ.
ಹೊರ ರಾಜ್ಯದ ಕನ್ನಡಿಗರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ, ಆಯಾ ರಾಜ್ಯ ಸರ್ಕಾರಗಳು ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆಧಾರದ ಮೇಲೆ ಪ್ರವೇಶಾವಕಾಶ ಕಲ್ಪಿಸಬೇಕು. ಶಕ್ತಿನಗರ ಮತ್ತು ರಾಯಚೂರು ತೆರಳಲು, ತೆಲಂಗಾಣದ ಕೃಷ್ಣಾ ಗ್ರಾಮದಿಂದ ಸಾರಿಗೆ ಸೌಕರ್ಯ ಜೊತೆಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸಬೇಕು’ ಎನ್ನುವ ಬೇಡಿಕೆ ಅಲ್ಲಿನ ವಿದ್ಯಾರ್ಥಿಗಳದ್ದು. ಆದರೆ, ಕರ್ನಾಟಕ ಸರ್ಕಾರವು ಇದುವರೆಗೂ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ.
‘ತೆಲಂಗಾಣ ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವುದಕ್ಕೆ ಅವಕಾಶ ಮಾಡಿದೆ. ಸುಮಾರು 40 ಶಿಕ್ಷಕರಿಗೆ ಅಲ್ಲಿನ ಸರ್ಕಾರ ವೇತನ ನೀಡುತ್ತಿದೆ. ಆದರೆ, ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ರಾಯಚೂರಿನಲ್ಲಿ ಪಿಯುಸಿ ಕಾಲೇಜುಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದರಿಂದ ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎನ್ನುತ್ತಾರೆ ಕೃಷ್ಣಾ ಪ್ರೌಢಶಾಲೆ ಮುಖ್ಯಗುರು ನಿಜಾಮುದ್ದೀನ್.
‘ಮಕ್ಕಳ ಬುದ್ಧಿವಿಕಾಸಕ್ಕೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು. ಅದನ್ನು ತೆಲಂಗಾಣ ಸರ್ಕಾರ ಮಾಡುತ್ತಿದೆ. ಆದರೆ, ಕನ್ನಡ ಉಳಿಸಿ, ಬೆಳೆಸಿ ಎಂದು ಕೋಟ್ಯಂತರ ಹಣ ವ್ಯಯಿಸುತ್ತಿರುವ ಕರ್ನಾಟಕದಲ್ಲಿ ಮಾತ್ರ ಹೊರನಾಡಿನ ಕನ್ನಡಿಗರನ್ನು ಎರಡನೇ ದರ್ಜೆ ಕನ್ನಡಿಗರೆಂದು ಪರಿಗಣಿಸಲಾಗುತ್ತಿದೆ' ಎಂದು ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್ ಅವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.