ಮಾನ್ವಿ (ರಾಯಚೂರು): ತಾಲ್ಲೂಕಿನ ಕಪಗಲ್ ಗ್ರಾಮದ ಸಮೀಪ ಗುರುವಾರ ಶಾಲಾ ವಾಹನ ಹಾಗೂ ಸಾರಿಗೆ ಸಂಸ್ಥೆಯ ಬಸ್ ಮುಖಾಮುಖಿ ಡಿಕ್ಕಿಯಾಗಿ ಶಾಲಾ ವಾಹನದಲ್ಲಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದು, 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲೊಯಲ್ ಶಾಲೆಯ ವಿದ್ಯಾರ್ಥಿಗಳಾದ ಸಮರ್ಥ ಅಮರೇಶ (7) ಹಾಗೂ ಶ್ರೀಕಾಂತ ಮಾರೇಶ (12) ಮೃತಪಟ್ಟಿದ್ದಾರೆ. ಒಬ್ಬ ಬಾಲಕ ಹಾಗೂ ಚಾಲನಕನ ಸ್ಥಿತಿ ಗಂಭೀರವಾಗಿದೆ. ಭೀಕರ ಅಪಘಾತದಲ್ಲಿ ಮೂರು ಮಕ್ಕಳ ಕಾಲುಗಳು ತುಂಡಾಗಿವೆ.
ಶಾಲಾ ಮಕ್ಕಳನ್ನು ಕರೆದುಕೊಂಡು ಮಾನ್ವಿಯ ಲೊಯೋಲ್ ಶಾಲೆಗೆ ತೆರಳುತ್ತಿದ್ದ ವಾಹನಕ್ಕೆ ಮಾನ್ವಿ ಪಟ್ಟಣದಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಮೂವರು ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ನಿತಿಶ್ ಕೆ ಆಸ್ಪತ್ರೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮೃತ ಮಕ್ಕಳ ಪಾಲಕರಿಗೆ ಸಾಂತ್ವನ ಹೇಳಿದರು. ‘ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಕ್ಕಳ ಪಾಲಕರಿಗೆ ತಲಾ ₹ 5 ಲಕ್ಷ ಪರಿಹಾರ ಹಾಗೂ ರಸ್ತೆ ಸಾರಿಗೆ ಸಂಸ್ಥೆಯಿಂದಲೂ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ನಿತಿಶ್ ತಿಳಿಸಿದರು.