ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಕೃಷಿ–ಮಾತು: ಲಾಭ ಪಡೆದ ಕೃಷಿಕ ಸುಭಾಷ ಮಂಡಲ್

ಬಡತನ ದೂರವಾಗಿಸಿದ ತೋಟಗಾರಿಕೆ ಬೆಳೆ; ಒಂದು ಎಕರೆ ಜಮೀನಿನಲ್ಲಿ ಲಕ್ಷಗಟ್ಟಲೇ ಲಾಭ

Published:
Updated:
Prajavani

ಸಿಂಧನೂರು: ಒಂದು ಎಕರೆ ಜಮೀನಿನಲ್ಲಿ ವಿವಿಧ ಬಗೆಯ ತೋಟಗಾರಿಕೆ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೇ ಲಾಭ ಪಡೆಯುವ ಮೂಲಕ ರೈತರೊಬ್ಬರು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಸಿಂಧನೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಆರ್.ಎಚ್.ಕ್ಯಾಂಪ್ ನಂ.4 ರಲ್ಲಿರುವ ರೈತ ಸುಭಾಷ ಮಂಡಲ್ ಕೇವಲ ಒಂದು ಎಕರೆ ಜಮೀನಿನಲ್ಲಿ ನವಿಲು ಕೋಸು, ಹೂಕೋಸು, ಗೆಡ್ಡೆ ಕೋಸು, ಬೆಂಡಿ, ಮೆಣಸಿನಕಾಯಿ ಮತ್ತಿತರ ತರಕಾರಿಗಳು ಮತ್ತು ರಾಜಿಗಿರಿ, ಪಾಲಕ್‍ನಂತಹ ಸೊಪ್ಪುಗಳನ್ನು ಬೆಳೆದಿದ್ದಾರೆ. ಅಲ್ಲದೆ ಕ್ಯಾಂಪಿನ ಪಕ್ಕದಲ್ಲಿ ಎಡದಂಡೆ ನಾಲೆಯ ವಿತರಣಾ ಕಾಲುವೆ ಹರಿಯುತ್ತಿದ್ದು, ಆ ಕಾಲುವೆಗೆ ಚಪ್ಪರ ಹಾಕಿ ದಂಡೆಯ ಮೇಲೆ ಸೋರೆಕಾಯಿ ಬೆಳೆದಿದ್ದಾರೆ. ಕಳೆದ 30 ವರ್ಷಗಳಿಂದ ಕೇವಲ ಒಂದು ಎಕರೆ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿರುವ ಸುಭಾಷ ಅವರು ಕ್ಯಾಂಪಿನಲ್ಲಿ ಇತರರಿಗಿಂತ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ.

ತನ್ನ ಜಮೀನಿನಲ್ಲಿ ಚಿಕ್ಕದೊಂದು ಕೆರೆ ಮಾಡಿಕೊಂಡಿರುವ ಅವರು ಮಳೆಗಾಲ ಮತ್ತು ಮುಖ್ಯಕಾಲುವೆಗೆ ನೀರು ಸ್ಥಗಿತಗೊಳಿಸುವ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಿಕೊಂಡು ಅದೇ ನೀರಿನಿಂದಲೇ ತರಕಾರಿ ಬೆಳೆಯುತ್ತಾರೆ. ಬಿರುಬಿಸಿನಲ್ಲಿಯೂ ಸುಭಾಷ ಅವರ ಜಮೀನು ಮಾತ್ರ ಸದಾ ಹಚ್ಚಹಸಿರಿನಿಂದ ಕಣ್ಣಿಗೆ ರಾಚುವಂತಿರುತ್ತದೆ. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಇವರಿಗೆ ಕೃಷಿ ಮೇಲೆ ಆಸಕ್ತಿ ಇರುವದನ್ನು ಗಮನಿಸಿ ತುಂತುರು ಹನಿ ನೀರಾವರಿ ಸೌಲಭ್ಯ, ಔಷಧಿ ಸಿಂಪಡಿಸುವ ಯಂತ್ರ, ಹ್ಯಾಂಡ್ ಟ್ರ್ಯಾಕ್ಟರ್‌ಗಳನ್ನು ನೀಡುವ ಮೂಲಕ ನೆರವು ನೀಡಿವೆ.

‘ಹೊಲದಲ್ಲಿ ಕೆರೆ ಮಾಡುವ ಪೂರ್ವದಲ್ಲಿ ಸರಿಯಾಗಿ ನೀರು ಬರುತ್ತಿರಲಿಲ್ಲ. ಒಂದು ಬೆಳೆಗೂ ನೀರಿನ ತಾಪತ್ರಯ ಇತ್ತು. ಹೀಗಾಗಿ ಹೊಲದಲ್ಲಿ ಬೆಳೆದ ಬೆಳೆಯಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಕೃಷಿ ಅಧಿಕಾರಿಯೊಬ್ಬರು ಕೆರೆ ಮಾಡಿಕೊಂಡರೆ ಕಡಿಮೆ ಜಮೀನಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದೆಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಕೆರೆ ತೋಡಿಸಿಕೊಂಡು ತೋಟಗಾರಿಕೆ ಬೆಳೆ ಬೆಳೆಯಲು ಆರಂಭಿಸಿದಾಗಿನಿಂದಲೂ ಹೊಟ್ಟೆ ತುಂಬ ಊಟ ಮಾಡುವಂತಾಗಿದೆ. ಕುಟುಂಬವೂ ನೆಮ್ಮದಿಯಿಂದ ಇದೆ’ಎನ್ನುತ್ತಾರೆ ರೈತ ಸುಭಾಷ.

’ಹಲವು ವರ್ಷಗಳಿಂದ ತೋಟಗಾರಿಕೆ ಬೆಳೆಯನ್ನು ಬೆಳೆದು ಪುರ್ನರ್ವಸತಿ ಕ್ಯಾಂಪ್ ಮತ್ತು ಸಿಂಧನೂರಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇನೆ. ಇದೇ ಬೆಳೆಯಿಂದ ಕುಟುಂಬವನ್ನು ಗೌರವದಿಂದ ಸಾಕಲು ಸಾಧ್ಯವಾಗಿದೆ. ಅಲ್ಲದೆ ಸೋರೆಕಾಯಿಗಳನ್ನು ಸಿಂಧನೂರಿನ ಹಂದಿ ಸಾಕಾಣಿಕೆದಾರರಿಗೆ ಸರಬರಾಜು ಮಾಡುತ್ತಿದ್ದು, ಉತ್ತಮ ದರ ಸಿಗುತ್ತದೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದರಕ್ಕಿಂತಲೂ ಹಂದಿ ಸಾಕಾಣಿಕೆದಾರರ ದರ ಅಧಿಕವಾಗಿರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ ಹಂದಿ ಸಾಕಾಣಿಕೆದಾರರಿಗೆ ಮಾತ್ರ ಸೋರೆಕಾಯಿ ಕೊಡುತ್ತೇನೆ’ ಎಂದರು.

ಕಾಲುವೆಯ ದಂಡೆ ಮೇಲೆ ಸೋರೆ ಬೀಜಗಳನ್ನು ಹಾಕಿದ್ದು, ಅತ್ಯಂತ ಸಮೃದ್ಧವಾಗಿ ಬಳ್ಳಿ ಬೆಳೆದಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಕಾಲುವೆಯ ಮೇಲೆ ಚಪ್ಪರ ಹಾಕಿ ಬಳ್ಳಿಯನ್ನು ಹಬ್ಬಿಸಲಾಗಿದೆ. ಅದರ ಕೆಳಭಾಗದಲ್ಲಿಯೇ ಸಾರ್ವಜನಿಕರು ಬಟ್ಟೆ ತೊಳೆಯುತ್ತಾರೆ. ಸ್ನಾನ ಮಾಡುತ್ತಾರೆ. ಬೇಸಿಗೆ ದಿವಸಗಳಲ್ಲಿ ಚಪ್ಪರದ ಕೆಳಗೆ ಕುಳಿತುಕೊಳ್ಳಲು ತುಂಬಾ ಆಸರೆಯಾಗಿದೆ ಎನ್ನುತ್ತಾರೆ ಕ್ಯಾಂಪಿನ ನಿವಾಸಿ ಜೋಸ್ನಾ. 

Post Comments (+)