ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಭತ್ತದ ನಿರ್ವಹಣೆ ವೆಚ್ಚ: ಕಬ್ಬಿನತ್ತ ರೈತರ ಒಲವು

ತಾಲ್ಲೂಕಿನ ಶೇ 80 ರಷ್ಟು ‍ಪ್ರದೇಶದಲ್ಲಿ ನೀರಾವರಿ: ಭೂಮಿ ಸವಳು–ಜವಳಾಗುವ ಆತಂಕ
Published 30 ಜುಲೈ 2023, 15:23 IST
Last Updated 30 ಜುಲೈ 2023, 15:23 IST
ಅಕ್ಷರ ಗಾತ್ರ

ದೇವದುರ್ಗ: ನೀರು ಕೊರತೆ, ದುಬಾರಿ ನಿರ್ವಹಣಾ ವೆಚ್ಚ, ಭೂಮಿ ಸವಳು–ಜವಳಾಗುವ ಆತಂಕ, ಕಡಿಮೆ ದರ ಹಾಗೂ ಇತರ ಕಾರಣಗಳಿಗಾಗಿ ತಾಲ್ಲೂಕಿನ ರೈತರು ಈಗ ಭತ್ತದ ಬದಲಿಗೆ ಕಬ್ಬಿನತ್ತ ಚಿತ್ತ ಹರಿಸಿದ್ದಾರೆ.

ಸಂಪೂರ್ಣ ನೀರಾವರಿಗೆ ಒಳಪಟ್ಟಿರುವ ತಾಲ್ಲೂಕಿನ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಕಳೆದ ಮೂರು ದಶಕಗಳಿಂದ ಭತ್ತ ಬೆಳೆಯಲಾಗುತ್ತಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಕೆಲ ರೈತರು ಕಬ್ಬು ನಾಟಿ ಮಾಡುತ್ತಿದ್ದಾರೆ.

ತಾಲ್ಲೂಕಿನ ಶೇ 80 ರಷ್ಟು ಭೂಮಿ ನೀರಾವರಿ ಸೌಲಭ್ಯ ಹೊಂದಿದೆ. ರೈತರು 30 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದ ಗ್ರಾಮಗಳಾದ ಜಾಲಹಳ್ಳಿ, ಲಿಂಗದಳ್ಳಿ, ಬುಂಕಲದೊಡ್ಡಿ, ಮಸರಕಲ್, ಕೊಪ್ಪರ, ಕುರ್ಕಿಹಳ್ಳಿ, ಯಾಟಗಲ್, ಸುಂಕೇಶ್ವರಹಾಳ, ಬೂದಿನಾಳ, ಜಿನ್ನಾಪುರ ಮತ್ತು ಹಂಚಿನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಕಬ್ಬು ಬೆಳೆಯಲು ಮುಂದಾಗಿದ್ದಾರೆ.

ಭತ್ತದ ಕೃಷಿಗೆ ಬಳಸುವ ನೀರಿನಲ್ಲಿ ಕಬ್ಬಿಗೆ ಅರ್ಧದಷ್ಟು ಪ್ರಮಾಣ ಬಳಸಿದರೆ ಸಾಕು. ಭೂಮಿ ಸವಳಾಗುವ ಆತಂಕ ಇಲ್ಲ. ಸದ್ಯ ಟನ್‌ಗೆ ₹2,500 ಬೆಲೆ ಇದೆ. ಒಂದು ಎಕರೆಗೆ ₹1 ಲಕ್ಷ ಮೌಲ್ಯದ ಬೆಳೆ ಬರುತ್ತದೆ. ಮೂರು ವರ್ಷಗಳ ನಂತರ ಹೊಸದಾಗಿ ನಾಟಿ ಮಾಡಬೇಕು. ಮೊದಲ ವರ್ಷ ಎಕರೆಗೆ ₹35 ಸಾವಿರ, ನಂತರದ ವರ್ಷಗಳಲ್ಲಿ ₹10 ಸಾವಿರ ನಿರ್ವಹಣಾ ವೆಚ್ಚ ತಗಲುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಎಣ್ಣೆ, ಬೀಜ ಹಾಗೂ ಗೊಬ್ಬರವನ್ನು ಕಾರ್ಖಾನೆ ಒದಗಿಸುತ್ತದೆ. ಕಟಾವು ಮತ್ತು ಸಾಗಣೆ ಜವಾಬ್ದಾರಿಯೂ ನಮ್ಮದೇ ಎನ್ನುತ್ತಾರೆ ಕಾರ್ಖಾನೆ ಮೇಲ್ವಿಚಾರಕ.

ಭತ್ತಕ್ಕೆ ಭೂಮಿ ಹದ ಮಾಡುವುದರಿಂದ ಹಿಡಿದು ನಾಟಿ, ಗೊಬ್ಬರ, ಕೀಟನಾಶಕ ಸಿಂಪಡಣೆ, ಕಟಾವು ಮಾಡುವುದರಲ್ಲಿ ರೈತನಿಗೆ ಸಾಕಾಗುತ್ತದೆ. ಎಲ್ಲ ದರಗಳು ದುಬಾರಿಯಾಗಿವೆ. ಪ್ರತಿವರ್ಷ ನೀರಿನ ಕೊರತೆ ಕಾಡುತ್ತದೆ. ಎರಡನೇ ಬೆಳೆಗೆ ನೀರಿಗಾಗಿ ಕಾದಾಟವೇ ನಡೆಯುತ್ತದೆ. ಒಂದು ಎಕರೆಗೆ 35 ರಿಂದ 40 ಚೀಲ ಇಳುವರಿ ಬಂದರೆ ಹೆಚ್ಚು. ಒಂದು ವರ್ಷ ದರ ಸಿಕ್ಕರೆ ಮತ್ತೆರಡು ವರ್ಷ ಕಡಿಮೆ ದರ ಇರುತ್ತದೆ. ನಷ್ಟ ಅನುಭವಿಸುವುದೇ ಹೆಚ್ಚು ಎಂದು ಹೇಳುತ್ತಾರೆ ಜಾಲಹಳ್ಳಿಯ ರೈತ ವಿರೂಪಾಕ್ಷಪ್ಪ. 

ನೆರೆಯ ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಕೋ–ಗ್ರೀನ್‌ ಸಕ್ಕರೆ ಕಾರ್ಖಾನೆ ಇದೆ. ಅಲ್ಲಿನ ಅಭಿವೃದ್ಧಿ ಅಧಿಕಾ ರಿ ಸೂಗನಗೌಡ ಪಾಟೀಲ ದೇವದುರ್ಗದವರು. ಕಾರ್ಖಾನೆ 45 ಕಿ.ಮೀ ವ್ಯಾಪ್ತಿ ಹೊಂದಿದೆ. ಸೂಗನಗೌಡ ಅವರು ರೈತರಿಗೆ ಕೊಬ್ಬು ಬೆಳೆಯ ಕುರಿತು ಮಾಹಿತಿ ನೀಡಿದ ಕಾರಣ ಈಗ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ.

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ರೈತ ವಿರೂಪಾಕ್ಷಪ್ಪ ಅವರು ಕಬ್ಬು ಬೆಳೆದಿರುವುದು
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ರೈತ ವಿರೂಪಾಕ್ಷಪ್ಪ ಅವರು ಕಬ್ಬು ಬೆಳೆದಿರುವುದು

- ‘ಮೊದಲ ವರ್ಷ ಎಕರೆಗೆ ₹80 ಸಾವಿರ ಲಾಭ’

ರೈತರು ಸಿ.ಒ 86032 ತಳಿಯ ಕಬ್ಬು ಬೆಳೆಯುತ್ತಿದ್ದಾರೆ. ವಾಣಿಜ್ಯ ಬೆಳೆಗಳಲ್ಲಿ ಅತಿವೃಷ್ಟಿ–ಅನಾವೃಷ್ಟಿಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವ ಕಬ್ಬು ರೈತರಿಗೆ ಆರ್ಥಿಕವಾಗಿ ಲಾಭ ಉಂಟು ಮಾಡಲಿದೆ. ವಾರ್ಷಿಕ 1 ಎಕರೆ ಕಬ್ಬಿಗೆ ಪ್ರಥಮ ವರ್ಷ ₹80 ಸಾವಿರ ನಿವ್ವಳ ಲಾಭ ಬಂದರೆ ಎರಡು ಮತ್ತು ಮೂರನೇ ವರ್ಷ ₹1.5 ಲಕ್ಷದಿಂದ 2 ಲಕ್ಷದವರೆಗೆ ರೈತರಿಗೆ ಲಾಭ ಸಿಗುತ್ತದೆ ಎಂದು ಹೇಳುತ್ತಾರೆ ಕಾರ್ಖಾನೆ ಸೂಪರ್‌ವೈಸರ್ ಶಿವರಾಜ ಕೊಪ್ಪರ. ಕಬ್ಬು ಬೆಳೆಯುವ ರೈತರಿಗೆ ವೈಜ್ಞಾನಿಕ ಪದ್ಧತಿಯ ಮಾಹಿತಿ ಜತೆಗೆ ಕಬ್ಬು ನಾಟಿ ಮಾಡಿದ ರೈತರಿಗೆ ಕಟಾವು ಕಾರ್ಮಿಕರ ಕೂಲಿ ಕಬ್ಬು ಸಾಗಾಟ ವಾಹನಗಳ ವೆಚ್ಚಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT