ಗುರುವಾರ , ಮಾರ್ಚ್ 4, 2021
20 °C
ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ಪ್ರಗತಿಪರ ರೈತ ಮಲ್ಲಣ್ಣ ನಾಗರಾಳ ಹೇಳಿಕೆ

ಮಣ್ಣಿನ ಪೌಷ್ಟಿಕತೆಗೆ ಗಮನ ಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ಕೃಷಿಯಿಂದ ಜಗತ್ತಿಗೆ ಅನ್ನ ಹಾಕುವ ಮೂಲಕ ಧನ್ಯ ಜೀವನ ಸಾಗಿಸುತ್ತಿರುವ ರೈತರು ಮಣ್ಣಿನ ಪೌಷ್ಟಿಕತೆ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಹುನಗುಂದದ ಪ್ರಗತಿಪರ ರೈತ ಮಲ್ಲಣ್ಣ ನಾಗರಾಳ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ, ಸುಜಲಾ - III ಜಲಾನಯನ ಯೋಜನೆ ಹಾಗೂ ಕೃಷಿ ಇಲಾಖೆಯಿಂದ ಮಹತ್ವಾಕಾಂಕ್ಷಿ ಜಿಲ್ಲೆಯ ಕೃಷಿ ಕಲ್ಯಾಣ ಅಭಿಯಾನ ಯೋಜನೆಯಡಿ ಬುಧವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು.

ಬಂಗಾರದಂತಹ ಕೃಷಿ ಭೂಮಿಯಲ್ಲಿ ರಾಸಾಯಿನಿಕವನ್ನು ಅತಿಯಾಗಿ ಬಳಸುವ ಮೂಲಕ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಅದು ಎಷ್ಟೊಂದು ಪ್ರಮಾಣದಲ್ಲಿ ಎಂದರೆ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಬೆಳೆ ಬರಬೇಕಾದರೆ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ವಿಜ್ಞಾನಿಗಳು ಮಾಡುವ ಶಿಫಾರಸಿನಂತೆ ಗೊಬ್ಬರ ಬಳಸಬೇಕಾದ ವಿಷಮ ಸ್ಥಿತಿಗೆ ತಲುಪಿದ್ದೇವೆ ಎಂದರು.

ಹಿಂದೆ ಸಾವಯವ ಕೃಷಿಯಿಂದ ಸಮೃದ್ಧ ಬೆಳೆ ಬೆಳೆದು ಆರೋಗ್ಯವಂತ ಜೀವನ ನಡೆಸಲಾಗುತ್ತಿತ್ತು. ಮಣ್ಣಿನ ಫಲವತ್ತೆತೆಯೂ ರಕ್ಷಣೆ ಮಾಡಲಾಗುತ್ತಿತ್ತು. ಲಾಭದ ಬೆನ್ನುಹತ್ತಿದ ರೈತರು ಇಂದು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ತಿಳಿಸಿದರು.

ಯುವಕರ ನಡೆ ಕೃಷಿಯ ಕಡೆಗೆ ಎನ್ನುವಂತೆ ಯುವ ಸಮುದಾಯ ಕೃಷಿಯಲ್ಲಿ ತೊಡಸಿಕೊಂಡು ಜಗತ್ತಿಗೆ ಅನ್ನ ಕೊಡುವ ಧನ್ಯದ ಜೀವನ ನಡೆಸದೇ ನೌಕರಿಯ ಹಿಂದೆ ಬಿದ್ದಿದೆ. ರೈತರು ಕೂಡ ದುಡಿಯುವ ಪ್ರವೃತ್ತಿ ಕಡಿಮೆ ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ಲಕ್ಷಕ್ಕಿಂತ ಅಧಿಕ ಸಣ್ಣ ರೈತರಿದ್ದು, ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಮಾಡಿಸಿಕೊಂಡು ಸಮಗ್ರ ಕೃಷಿಗೆ ಒತ್ತು ನೀಡಿ ಆದಾಯ ದ್ವಿಗುಣಗೊಳಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಗುರಿ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ನರೇಗಾ ಯೋಜನೆಯಡಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಣ ನಿರ್ದೇಶಕ ಸಿ.ವಿ.ಪಾಟೀಲ ಮಾತನಾಡಿ, ನಿಸರ್ಗದ ಪಂಚಭೂತಗಳ ಕ್ರಿಯೆಯಿಂದ ಕಲ್ಲು– ಶಿಲೆಗಳು ಕರಗಿ ಮೊರಂ ಆಗಲಿದೆ. ಈ ಕ್ರಿಯೆ ಮುಂದುವರೆದು ಮಣ್ಣು ಆಗಲಿದೆ. ಈ ಮಣ್ಣು ಸೃಷ್ಟಿ ಮಾಡಲು ನಿಸರ್ಗಕ್ಕೆ ಲಕ್ಷ ವರ್ಷಗಳು ಬೇಕಾಗಲಿದ್ದು, ಮಣ್ಣಿನ ಪ್ರಾಮುಖ್ಯತೆ ಅರಿತುಕೊಂಡು ಫಲವತ್ತತೆ ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಮಾನವ ಜೀವನ ಮಾಡಲು ಮಣ್ಣು ಮತ್ತು ನೀರು ಅತೀ ಅಗತ್ಯವಾಗಿದ್ದು, ಮಣ್ಣು, ನೀರು ಹಾಗೂ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕಾರ್ಯವಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಕೆ.ಎನ್.ಕಟ್ಟಿಮನಿ ಮಾತನಾಡಿ, ರೈತರು ಕೃಷಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿಜ್ಞಾನಗಳ ನೆರವು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೃಷಿ ಇಲಾಖೆಯ ಚೇತನಾ ಪಾಟೀಲ, ಮಣ್ಣು ವಿಭಾಗದ ಮುಖ್ಯಸ್ಥ ನಾರಾಯಣರಾವ್, ನಿರ್ದೇಶಕರಾದ ಬಿ.ಎಂ.ಚಿತ್ತಾಪುರ, ಬಿ.ಕೆ.ದೇಸಾಯಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು