ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಗ್ರಾಮೀಣ ಭಾರತ್ ಬಂದ್‌ಗೆ ಬೆಂಬಲ- ಜಿ.ಅಮರೇಶ

Published 12 ಫೆಬ್ರುವರಿ 2024, 13:37 IST
Last Updated 12 ಫೆಬ್ರುವರಿ 2024, 13:37 IST
ಅಕ್ಷರ ಗಾತ್ರ

ರಾಯಚೂರು: ‘ಎನ್‌ಡಿಎ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಫೆಬ್ರುವರಿ 16ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕೈಗಾರಿಕಾ ಮುಷ್ಕರ ಮತ್ತು ಗ್ರಾಮೀಣ ಭಾರತ ಬಂದ್ ಹೋರಾಟಕ್ಕೆ ಬೆಂಬಲಿಸಿ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(ಟಿಯುಸಿಐ) ಜಿಲ್ಲಾ ಘಟಕದ ಅಧ್ಯಕ್ಷ ಜಿ.ಅಮರೇಶ ತಿಳಿಸಿದರು.

‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಬಡವರ ಬ್ಯಾಂಕ್ ಖಾತೆಗಳಿಗೆ ₹15 ಲಕ್ಷ ಜಮಾ ಮಾಡುವುದಾಗಿ ಘೋಷಣೆ ಮಾಡಿದ್ದ ಬಿಜೆಪಿ ನೇತೃತ್ವದ ಸರ್ಕಾರ ದಶಕದ ಆಡಳಿತದಲ್ಲಿ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಲ್ಲ. 50 ವರ್ಷಗಳ ಹಿಂದೆ ಇದ್ದ ನಿರುದ್ಯೋಗ ಪ್ರಮಾಣ ಇಂದು ಅತ್ಯಧಿಕವಾಗಿದೆ. ‘ಅಚ್ಚೇ ದಿನ್’, ‘ಹೊಳೆಯುತ್ತಿರುವ ಭಾರತ’ ಎಂಬ ಬಿಜೆಪಿ ಘೋಷಣೆ ವಾಸ್ತವದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ’ ಎಂದು ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.

‘ಕಾರ್ಮಿಕರನ್ನು ಸ್ವಯಂಪ್ರೇರಿತ, ಸ್ಕೀಮ್, ಗಿಗ್ ಎಂದು ಕರೆಯುವ ಮೂಲಕ ಸ್ಥಾನಮಾನ ಮತ್ತು ವೇತನವನ್ನು ನಿರಾಕರಿಸಲಾಗುತ್ತಿದೆ. ಸಾರ್ವಜನಿಕ ವಲಯದ ಉದ್ಯಮಗಳಿಗೆ ನೀಡಿ ಖಾಸಗೀಕರಣಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ರೈತರ ಆದಾಯ ದ್ವಿಗುಣಗೊಳಿಸುವುದು. ಬೆಳೆಗಳಿಗೆ ಕನಿಷ್ಠ ದರ (ಎಂಎಸ್‌ಪಿ) ನಿಗದಿ ಮಾಡಬೇಕು. ಬೀಜದ ಮೇಲಿನ ಸಬ್ಸಿಡಿ ಶೇ 50ರಷ್ಟು ಹೆಚ್ಚಳ ಮಾಡಬೇಕು. 4 ಕಾರ್ಮಿಕ ಸಂಹಿತೆ ವಾಪಸ್ ಪಡೆಯಬೇಕು. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ₹500 ಕೂಲಿ ನಿಗದಿ ಮಾಡಿ ವರ್ಷಪೂರ್ತಿ ಕೆಲಸ ನೀಡಬೇಕು ಹಾಗೂ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮೀಣ ಭಾರತ್ ಬಂದ್ ಹೋರಾಟಕ್ಕೆ ಜಿಲ್ಲೆಯ ತುಂಗಭದ್ರಾ ಕಾರ್ಮಿಕ ಸಂಘ, ಉದ್ಯೋಗ ಖಾತ್ರಿ ಕಾರ್ಮಿಕ ಸಂಘ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘ ಹಾಗೂ ರೈತಪರ, ಪ್ರಗತಿಪರ ಸಂಘಟನೆಗಳು ಹಾಗೂ ಅಸಂಘಟಿತ ಕಾರ್ಮಿಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಕೈಗಾರಿಕಾ ವಲಯದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಟಿಯುಸಿಐ ಮುಖಂಡರಾದ ಅಜೀಜ್ ಜಾಗೀರದಾರ, ಜಿ.ಅಡವಿರಾವ್, ನಿರಂಜನ, ಲಕ್ಷ್ಮಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT