ಶುಕ್ರವಾರ, ಮೇ 27, 2022
24 °C
ಕಡದರಗಡ್ಡಿ, ವಂಕಮ್ಮನಗಡ್ಡಿ, ಮ್ಯಾದರಗಡ್ಡಿ, ಕರಕಲಗಡ್ಡಿ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ

ಲಿಂಗಸುಗೂರು: ಕುಡಿವ ನೀರಿಗೆ ನಿತ್ಯ ಪರದಾಟ

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ತಾಲ್ಲೂಕಿನ ಗಡಿಭಾಗದ ಕೃಷ್ಣಾ ನದಿಯ ನಡುಗಡ್ಡೆ ಗ್ರಾಮಗಳಲ್ಲಿ ವಿದ್ಯುತ್‍ ಸಮಸ್ಯೆಯಿಂದಾಗಿ ಒಂದು ವಾರದಿಂದ ಕುಡಿವ ನೀರು ಸೇರಿದಂತೆ ಮೊಬೈಲ್‍ ಚಾರ್ಜಿಂಗ್‍, ಹಿಟ್ಟು ಬೀಸುವುದು ಸೇರಿದಂತೆ ಇತರೆ ಸೌಲಭ್ಯಗಳಿಗೆ ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ನಡುಗಡ್ಡೆ ಗ್ರಾಮಸ್ಥರು ದೂರಿದ್ದಾರೆ.

ಜೆಸ್ಕಾಂ ಹಟ್ಟಿ ಚಿನ್ನದ ಗಣಿ ಶಾಖೆಗೆ ಒಳಪಡುವ ಕಡದರಗಡ್ಡಿ ಗ್ರಾಮ ಗುಂತಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ನೂರಕ್ಕೂ ಹೆಚ್ಚು ಮನೆಗಳಿರುವ ಗ್ರಾಮಕ್ಕೆ ಇಂದಿಗೂ ಸಮರ್ಪಕ ವಿದ್ಯುತ್‍ ಕಲ್ಪಿಸುವಲ್ಲಿ ಜೆಸ್ಕಾಂ ನಿರ್ಲಕ್ಷ್ಯ ವಹಿಸುತ್ತ ಬಂದಿದೆ. ದಿನದಲ್ಲಿ ಒಂದೆರಡು ತಾಸು ವಿದ್ಯುತ್‍ ಸಂಪರ್ಕ ನೀಡುತ್ತಿಲ್ಲ ಎಂಬುದು ಸ್ಥಳೀಯರು ಸಾಮೂಹಿಕ ಆರೋಪ.

ಕಡದರಗಡ್ಡಿ ಸೇರಿದಂತೆ ನಡುಗಡ್ಡೆ ಪ್ರದೇಶಗಳಾದ ವಂಕಮ್ಮನಗಡ್ಡಿ, ಮ್ಯಾದರಗಡ್ಡಿ, ಕರಕಲಗಡ್ಡಿ ಜನತೆ ನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು ಸಮಸ್ಯೆ ಪರಿಸುವಲ್ಲಿ ಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬರುತ್ತದೆ. ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟೆ ನಿರ್ಮಿಸಿ ಏಳು ವರ್ಷಗಳಾದರೂ ಹನಿ ನೀರು ಪೂರೈಸದೇ ಹೋಗಿದ್ದರಿಂದ ಕೈಪಂಪ್‍ ಬಳಕೆ ಅನಿವಾರ್ಯವಾಗಿದೆ.

ನದಿ ದಂಡೆಯ ಕೊಳವೆಬಾವಿಯಿಂದ ನಿತ್ಯ ಗುಮ್ಮಿಗಳಿಗೆ ನೀರು ಪೂರೈಸಲಾಗುತ್ತಿದೆ. ನೀರು ಸಂಗ್ರಹಣಾ ತೊಟ್ಟೆಯಿಂದ ಮನೆ ಮನೆಗೆ ನೀರು ಪೂರೈಸುವ ಕನಸು ಭಗ್ನವಾಗಿದೆ. ವಿದ್ಯುತ್‍ ಕಣ್ಣುಮುಚ್ಚಾಲೆಯಿಂದ ಬಹುತೇಕ ಜನತೆ ನದಿಯಲ್ಲಿನ ಕೊಳಕು ನೀರು ಅಥವಾ ತಿಪ್ಪೆಗುಂಡಿ ಮಧ್ಯದಲ್ಲಿರುವ ಕೈಪಂಪ್‍ ನೀರು ಬಳಕೆ ಅನಿವಾರ್ಯವಾಗಿದೆ’ ಎಂದು ಸ್ಥಳೀಯರಾದ  ವೀರೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

*

ಕಡದರಗಡ್ಡಿ ಗ್ರಾಮಕ್ಕೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ. ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟೆ ಬಳಕೆ ಮಾಡುತ್ತಿಲ್ಲ. ಈಚೆಗೆ ಅಧಿಕಾರ ಸ್ವೀಕರಿಸಿದ್ದು ನಡುಗಡ್ಡೆಯ ಕಡದರಗಡ್ಡಿ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸುವೆ
ಪ್ರವೀಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

*

ನಡುಗಡ್ಡೆ ಪ್ರದೇಶಗಳಲ್ಲಿ ವಿದ್ಯುತ್‍ ಸಂಪರ್ಕ ಕಡಿತದ ಯಾವುದೇ ದೂರುಗಳು ಬಂದಿಲ್ಲ. ಕಡದರಗಡ್ಡಿ ಗ್ರಾಮದಲ್ಲಿ ವಾರದಿಂದ ವಿದ್ಯುತ್‍ ಸಂಪರ್ಕ ಕಡಿತಗೊಂಡ ಬಗ್ಗೆ ಕೂಡಲೆ ಸಂಬಂಧಿಸಿದ ಸಿಬ್ಬಂದಿ ಕಳುಹಿಸಿ ವಿದ್ಯುತ್‍ ಸಂಪರ್ಕ ಸರಿಪಡಿಸಲಾಗುವುದು
ವೆಂಕಟೇಶ, ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು