ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಹೈಟೆಕ್ ಪಶು ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ

₹2.50 ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ಕಟ್ಟಡ
Published 29 ಜೂನ್ 2024, 5:58 IST
Last Updated 29 ಜೂನ್ 2024, 5:58 IST
ಅಕ್ಷರ ಗಾತ್ರ

ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಕರ್ಯ ಹೊಂದಿದ ಸಿಂಧನೂರು ಪಶು ಆಸ್ಪತ್ರೆಗೆ ವೈದ್ಯರ ನೇಮಕವಾಗಿಲ್ಲ.

ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಪಶು ಸಂಗೋಪನಾ ಸಚಿವರಾಗಿದ್ದ ಅವಧಿಯಲ್ಲಿ  ನಗರದ ಸುಕಾಲಪೇಟೆ ರಸ್ತೆಯಲ್ಲಿ ಕೆಕೆಆರ್‌ಡಿಬಿ (ಮ್ಯಾಕ್ರೋ)ಯ ₹2.50 ಕೋಟಿಗೂ ಅಧಿಕ ಅನುದಾನದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ಜಾನುವಾರುಗಳ ಶಸ್ತ್ರ ಚಿಕಿತ್ಸೆ, ಹೊರ ರೋಗಿಗಳ ಕೋಣೆ, ಚಿಕಿತ್ಸಾ ಉಪಕರಣಗಳು, ಸುಸಜ್ಜಿತ ಸಭಾಂಗಣ, ರಕ್ತ ಪರೀಕ್ಷಾ ಕೇಂದ್ರ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ ಸೇರಿದಂತೆ ಮೂಲಸೌಕರ್ಯಗಳಿವೆ. ಆದರೆ ಒಬ್ಬರೂ ವೈದ್ಯರೇ ಇಲ್ಲದ್ದರಿಂದ ಶಸ್ತ್ರಚಿಕಿತ್ಸೆಯಂತಹ ಸೌಲಭ್ಯಗಳು ಸಮರ್ಪಕವಾಗಿ ದೊರೆಯದಾಗಿದೆ.

ಸಾಮಾನ್ಯವಾಗಿ ಯಾವುದೇ ಕಟ್ಟಡ ನಿರ್ಮಾಣಕ್ಕೂ ಮೊದಲು ಸಿಬ್ಬಂದಿ ಮಂಜೂರು ಮಾಡಲಾಗುತ್ತದೆ. ಆದರೆ ಪಶು ಆಸ್ಪತ್ರೆ ನಿರ್ಮಾಣದ ಬಳಿಕ 3 ಪಶು ವೈದ್ಯರು, ಆಡಳಿತ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ಸೇರಿ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು. ಆದರೆ ಈ ಹಿಂದಿನಿಂದಲೂ ಇರುವ ಇಲಾಖೆ ಸಹಾಯಕ ನಿರ್ದೇಶಕರು (ಆಡಳಿತ ಅಧಿಕಾರಿ) ಬಿಟ್ಟರೆ, ಮೂರು ವೈದ್ಯ ಹುದ್ದೆಗಳು ಖಾಲಿ ಇವೆ. 

ಗ್ರಾಮೀಣ ಭಾಗದಲ್ಲಿ ಇರುವ ಪಶು ಆಸ್ಪತ್ರೆಗಳಲ್ಲೂ ವೈದ್ಯರಿಲ್ಲ. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಇದ್ದಾರೆ. ಆದರೆ ಪಶು ಚಿಕಿತ್ಸಾ ಕೇಂದ್ರಗಳಾದ ಸಾಸಲಮರಿ, ತುರ್ವಿಹಾಳ, ರಾಗಲಪರ್ವಿ, ಅಲಬನೂರು, ಸಾಲಗುಂದಾ, ಸಿಂಧನೂರಿನಲ್ಲಿ ಎರಡು ಸೇರಿ ಒಟ್ಟು ಎಂಟು ಪಶು ವೈದ್ಯ ಹುದ್ದೆಗಳು ಖಾಲಿ ಇವೆ. ವೈದ್ಯರಿಲ್ಲದ ಹಳ್ಳಿಗಳಲ್ಲಿ ಜಾನುವಾರು ಅನಾರೋಗ್ಯಕ್ಕೆ ಈಡಾದರೆ ಚಿಕಿತ್ಸೆ ಕೊಡಿಸಲು ಹೆಣಗಾಡುವ ಸ್ಥಿತಿ ಇದೆ.

ಈ ಹಿಂದೆ ಪಶುಭಾಗ್ಯ ಯೋಜನೆಯಡಿ ಕುರಿ, ಆಕಳು, ಎಮ್ಮೆ ಖರೀದಿಗೆ ರೈತರಿಗೆ ಸಹಾಯಧನ ನೀಡಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾವುದೇ ಅನುದಾನವಿಲ್ಲದೆ ಯೋಜನೆಗಳು ಸ್ಥಗಿತಗೊಂಡಿವೆ. ಎಸ್‍ಇಪಿ, ಟಿಎಸ್‍ಪಿ ಯೋಜನೆಯಲ್ಲಿ 10 ಜನ ರೈತರಿಗೆ ಮಾತ್ರ ಜಾನುವಾರು ಖರೀದಿಗೆ ಸಹಾಯಧನ ನೀಡಲಾಗಿದೆ. ಉಳಿದಂತೆ ಪಶುಸಂಗೋಪನೆಗೆ ಪ್ರೋತ್ಸಾಹ ಕಡಿಮೆಯಾಗಿದೆ.

ಸಿಂಧನೂರಿನ ಪಶು ಆಸ್ಪತ್ರೆಯಲ್ಲಿರುವ ಗಣಕೀಕೃತ ಯಂತ್ರ ಮತ್ತಿತರ ಉಪಕರಣಗಳು
ಸಿಂಧನೂರಿನ ಪಶು ಆಸ್ಪತ್ರೆಯಲ್ಲಿರುವ ಗಣಕೀಕೃತ ಯಂತ್ರ ಮತ್ತಿತರ ಉಪಕರಣಗಳು

ತಾಲ್ಲೂಕಿನಲ್ಲಿ 66 ಸಾವಿರ ಆಕಳು, ಎಮ್ಮೆ, 1 ಲಕ್ಷಕ್ಕೂ ಅಧಿಕ ಕುರಿಗಳು ಇವೆ. ಬರಪೀಡಿತ ಪ್ರದೇಶವಾದ್ದರಿಂದ ಮೆಕ್ಕೆಜೋಳ, ಅಲಸಂದಿ, ಜೋಳದ ಬೀಜಗಳನ್ನು ಪಶು ಚಿಕಿತ್ಸಾ ಕೇಂದ್ರಗಳ ಮೂಲಕ ರೈತರಿಗೆ ಉಚಿತವಾಗಿ ವಿತರಿಸಲಾಗಿದೆ.

ಪಶು ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಮಷಿನ್
ಪಶು ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಮಷಿನ್
ಹೈಟೆಕ್ ಪಶು ಆಸ್ಪತ್ರೆಯಲ್ಲಿ ಮೂವರು ವೈದ್ಯರಿರಬೇಕು ಆದರೆ ಸದ್ಯ ಯಾರೂ ಇಲ್ಲ. ಅಗತ್ಯ ಸಿಬ್ಬಂದಿ ನೇಮಕವಾದರೆ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲೂ 8 ಕಡೆ ವೈದ್ಯರು ಇಲ್ಲ
ಡಾ.ಶರಣೇಗೌಡ ಮುಖ್ಯ ಪಶುವೈದ್ಯಾಧಿಕಾರಿ ಪಶು ಆಸ್ಪತ್ರೆ ಸಿಂಧನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT