ಚಂದ್ರಕಾಂತ ಮಸಾನಿ
ರಾಯಚೂರು: ಕರ್ನಾಟಕದ ಮಟ್ಟಿಗೆ ರಾಯಚೂರು ಜಿಲ್ಲೆ ಒಂದು ರೀತಿಯಲ್ಲಿ ಬಿಹಾರದಂತೆ ಇದೆ. ಇಲ್ಲಿ ಯಾವ ನಿಯಮಗಳು ಅಚ್ಚುಕಟ್ಟಾಗಿ ಪಾಲನೆಯಾಗುವುದಿಲ್ಲ. ಅಧಿಕಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಸರ್ಕಾರ ಎಂತಹ ಹುಲಿಯನ್ನು ಕಳಿಸಿದರೂ ಅದು ಜಿಲ್ಲೆಗೆ ಬಂದ ತಿಂಗಳಲ್ಲೇ ಇಲಿಯಾಗಿ ಬಿಡುತ್ತದೆ.
ಹೌದು ಇದಕ್ಕೆಲ್ಲ ಕಾರಣ ಆಡಳಿತದಲ್ಲಿ ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪ. ವ್ಯಾಪಾರಿಗಳ ಅಸಹಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವ ಜಿಲ್ಲೆ ಹಿಂದುಳಿಯುವಂತೆ ಮಾಡಿದೆ. ಜಿಲ್ಲೆಯಲ್ಲಿ ಸಂಚಾರ ನಿಯಮಗಳೂ ಪಾಲನೆಯಾಗುವುದಿಲ್ಲ. ಪಾದಚಾರಿಗಳ ಸುರಕ್ಷತೆಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಮನುಷ್ಯರ ಜೀವಕ್ಕೂ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ.
ರಸ್ತೆ ಸುರಕ್ಷತೆ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದಕ್ಕೆ ಸದಸ್ಯರಾಗಿರುತ್ತಾರೆ. ಕಾಟಾಚಾರಕ್ಕೆ ಒಂದು ಕೊಠಡಿಯಲ್ಲಿ 15, 20 ನಿಮಿಷಗಳಲ್ಲೇ ರಸ್ತೆ ಸುರಕ್ಷತೆ ಸಮಿತಿ ಸಭೆ ಮುಗಿಸಿ ಬಿಡುತ್ತಾರೆ. ಫುಟ್‌ಪಾತ್‌ಗಳು ಇದ್ದರೂ ಅವುಗಳು ಅತಿಕ್ರಮಣಕ್ಕೆ ಒಳಗಾಗಿ ಪಾದಚಾರಿಗಳು ಅಪಘಾತಕ್ಕೆ ಈಡಾಗುತ್ತಿರುವುದು ಸಾಮಾನ್ಯವಾಗಿದೆ.
ರಾಯಚೂರು ನಗರದಲ್ಲಿ ಬಹುತೇಕ ಎಲ್ಲ ಕಡೆ ಫುಟ್‌ಪಾತ್‌ಗಳು ಅತಿಕ್ರಮಣಕ್ಕೆ ಒಳಗಾಗಿವೆ. ಅಂಗಡಿಗಳ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಕೆಲ ಕಡೆ ಫುಟ್‌ಪಾತ್‌ಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಗಟಾರಗಳ ಮೇಲೆ ಫುಟ್‌ಪಾತ್ ನಿರ್ಮಿಸಲಾಗಿದೆ. ಕೆಲ ಗಟಾರಗಳ ಮೇಲೆ ಗುಂಡಿ ಮುಚ್ಚಿಲ್ಲ. ವಾಸ್ತವದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಜಿಲ್ಲಾಡಳಿತದ ನಿಯಂತ್ರಣದಲ್ಲಿ ಇಲ್ಲ.
ರೈಲು ನಿಲ್ದಾಣ ರಸ್ತೆಯಲ್ಲಿ ಈಚೆಗೆ ಕಾರೊಂದು ಮೂವರು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆಯಿತು. ವಿದ್ಯಾರ್ಥಿನಿಯರು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು. ಪಾದಚಾರಿ ರಸ್ತೆಗಳು ಅತಿಕ್ರಮಣಗೊಂಡ ಕಾರಣಕ್ಕೆ ವಿದ್ಯಾರ್ಥಿನಿಯರು ರಸ್ತೆ ಮೇಲೆ ನಡೆದುಕೊಂಡು ಹೊರಟಿದ್ದರು. ಇದೊಂದು ಸಣ್ಣ ಉದಾಹರಣೆ ಮಾತ್ರ.
ಜಿಲ್ಲಾಡಳಿತಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದಿದ್ದರೆ ಕನಿಷ್ಠ ಪಕ್ಷ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಅತಿಕ್ರಮಣ ತೆರವುಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಹಾಗೂ ಜಿಲ್ಲಾಡಳಿತದ ನಡುವಿನ ಸಮನ್ವಯ ಕೊರತೆಯಿಂದಾಗಿ ಸುಗಮ ಸಂಚಾರ ಕಷ್ಟವಾಗಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಾದ ಬಸವರಾಜ ಹಾಗೂ ಯಮನೇಶ ಹೇಳುತ್ತಾರೆ.
ಅತಿಕ್ರಮಿಸಿದರೂ ಕೇಳುವವರಿಲ್ಲ
ದೇವದುರ್ಗ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹೊಸ ಬಸ್ ನಿಲ್ದಾಣ, ಮುಖ್ಯ ರಸ್ತೆ ಹಾಗೂ ಎಚ್‌ಝೆಡ್‌ಪಿ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗಿನ ರಸ್ತೆ ಹಾಗೂ ಕೋರ್ಟ್ ಮುಂಭಾಗ, ಪುರಸಭೆ, ತೋಟಗಾರಿಕೆ, ಮಿನಿ ವಿಧಾನಸೌಧ, ಪಶು ಸಂಗೋಪನೆ ಇಲಾಖೆ, ಸಾರ್ವಜನಿಕ ಗ್ರಂಥಾಲಯದ ಮುಂಭಾಗದ ಫುಟ್‌ಪಾತ್ ಅತಿಕ್ರಮಣಕ್ಕೆ ಒಳಗಾಗಿದೆ.
ಡಬ್ಬಾ ಅಂಗಡಿಗಳವರು, ಸಣ್ಣಪುಟ್ಟ ವ್ಯಾಪಾರಿಗಳು, ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ಫುಟ್‌ಪಾತ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಪುರಸಭೆ ಮುಖ್ಯಾಧಿಕಾರಿ ಅವರು ಫುಟ್‌ಪಾತ್ ಮೇಲಿನ ಕೆಲವು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದರು. ಆದರೆ ಪೂರ್ಣ ಪ್ರಮಾಣದ ತೆರವು ಕಾರ್ಯಾಚರಣೆ ಪಟ್ಟಣದಲ್ಲಿ ಇದುವರೆಗೂ ನಡೆದಿಲ್ಲ.
ತೆರವಿಗೆ ನಿರ್ಲಕ್ಷ್ಯ
ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಿಂದ ಮಹರ್ಷಿ ವಾಲ್ಮೀಕಿ ವೃತ್ತದವರೆಗಿನ ಮುಖ್ಯ ರಸ್ತೆ ಹಾಗೂ ಬಸವ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗಿನ ರಸ್ತೆಯ ಎರಡು ಬದಿಯಲ್ಲಿನ ಫುಟ್‌ಪಾತ್ ಬಹುತೇಕ ಕಡೆ ಅತಿಕ್ರಮಣಗೊಂಡಿದೆ.
ಡಬ್ಬಾ ಅಂಗಡಿಗಳವರು, ಸಣ್ಣ ಪುಟ್ಟ ವ್ಯಾಪಾರಿಗಳು, ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ಫುಟ್‌ಪಾತ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಪೊಲೀಸರು ಬಸ್ ನಿಲ್ದಾಣದ ಹತ್ತಿರ ಫುಟ್‌ಪಾತ್ ಮೇಲಿನ ಕೆಲವು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದರು. ಆದರೆ ಪೂರ್ಣ ಪ್ರಮಾಣದ ತೆರವು ಕಾರ್ಯಾಚರಣೆ ಪಟ್ಟಣದಲ್ಲಿ ಇದುವರೆಗೂ ನಡೆದಿಲ್ಲ. ಫುಟ್‌ಪಾತ್ ಮುಂದೆ ದ್ವಿಚಕ್ರ ವಾಹನಗಳು ಹಾಗೂ ವಾಣಿಜ್ಯ ಸರಕು ಸಾಗಣೆಯ ಲಾರಿಗಳ ನಿಲುಗಡೆ ಮಾಡುವ ಕಾರಣ ಪಾದಚಾರಿಗಳು ರಸ್ತೆಯ ಮೇಲೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವು ಹಾಗೂ ರಸ್ತೆ ಬದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಾದಚಾರಿಗಳಿಗೆ ಮುಖ್ಯ ರಸ್ತೆಯೇ ಗತಿ
ಸಿರವಾರ: ಪಟ್ಟಣದ ಮುಖ್ಯರಸ್ತೆಯ ಎರಡು ಬದಿಯಲ್ಲಿ ಗುಣಮಟ್ಟದ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ ಫುಟ್‌ಪಾತ್ ರಸ್ತೆಬದಿ ವ್ಯಾಪಾರಸ್ಥರು ಅತಿಕ್ರಮಣ ಮಾಡಿಕೊಂಡಿದ್ದು, ಇದರಿಂದ ಪಾದಚಾರಿಗಳು ಮುಖ್ಯರಸ್ತೆ ಮೇಲೆ ತೆರಳುವುದು ಅನಿವಾರ್ಯವಾಗಿದೆ.
ಪಟ್ಟಣವು ಮುಖ್ಯರಸ್ತೆಗೆ ಹೊಂದಿಕೊಂಡಿದ್ದು, 3 ಕಿ.ಮೀ ಉದ್ದಕ್ಕೂ ಪಟ್ಟಣವಿದೆ. ಎರಡು ಬದಿಯಲ್ಲಿ ಫುಟ್‌ಪಾತ್ ನಿರ್ಮಿಸಲಾಗಿದ್ದು, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡರೆ, ಕೆಲವಡೆ ಫುಟ್‌ಪಾತ್ ಮಣ್ಣಿನಲ್ಲಿ ಮುಚ್ಚಿದೆ.
ಬಸ್ ನಿಲ್ದಾಣ ಸಮೀಪ ಇರುವ ಸರ್ಕಾರಿ ಶಾಲಾ ಕಾಲೇಜುಗಳಿಗೆ ತೆರಳಲು ಶಾಲೆ ಪ್ರಾರಂಭ ಮತ್ತು ಬಿಟ್ಟ ನಂತರ ಮನೆಗಳಿಗೆ ಮತ್ತು ಬಸ್ ನಿಲ್ದಾಣಕ್ಕೆ ತೆರಳಲು ನೂರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಸ್ಥಳೀಯ ಆಡಳಿತ ಫುಟ್‌ಪಾತ್ ಕರವಸೂಲಿ ಮಾಡಿಕೊಂಡು ಖಜಾನೆ ತುಂಬಿಸಿಕೊಂಡಿದ್ದು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿಕೊಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಗೆ ತಪ್ಪದ ಕಿರಿಕಿರಿ
ಮಸ್ಕಿ: ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ಈ ಹಿಂದೆ ನಿರ್ಮಿಸಿದ ಫುಟ್‌ಪಾತ್ ಮೇಲೆ ಡಬ್ಬಾ ಅಂಗಡಿಗಳು ಇಟ್ಟಿದ್ದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಟ್ಟಣದಲ್ಲಿ ಹೆದ್ದಾರಿ ಬದಿಯಲ್ಲಿ ಎರಡು ಕಿ.ಮೀವರೆಗೆ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ₹ 10 ಕೋಟಿ ವೆಚ್ಚದಲ್ಲಿ ರಸ್ತೆ ವಿಭಜಕ ಫುಟ್‌ಪಾತ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಲು ಮುಂದಾಗಿದೆ. ‘ಈಗಾಗಲೇ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದ್ದು ಶೀಘ್ರ ಕಾಮಗಾರಿ ಶುರುವಾಗಲಿದೆ. ಇದರಿಂದ ಪಟ್ಟಣದಲ್ಲಿ ಜನ ಸಂದಣಿ ಕಡಿಮೆಯಾಗಿ ಸಾರ್ವಜನಿಕರು ಮುಕ್ತವಾಗಿ ತಿರುಗಾಡಬಹುದಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಫುಟ್‌ಪಾತ್ ಮೇಲೆ ಅಂಗಡಿಗಳು ಇಡದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮಸ್ಕಿ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಹೇಳುತ್ತಾರೆ.
ನಾಗರಿಕರ ಪರದಾಟ
ಲಿಂಗಸುಗೂರು: ಪಟ್ಟಣದಲ್ಲಿ ರಾಯಚೂರು–ಬೆಳಗಾವಿ ಜೇವರ್ಗಿ–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪಾದಚಾರಿ ರಸ್ತೆ ಇದ್ದರೂ ವರ್ತಕರು ಅತಿಕ್ರಮಣ ಮಾಡಿದ್ದಾರೆ. ಪಾದಚಾರಿಗಳ ಸುಗಮ ಸಂಚಾರ ಸವಾಲಾಗಿ ಪರಿಣಮಿಸಿದೆ. ಬಸ್ ನಿಲ್ದಾಣ ವೃತ್ತದಿಂದ ಬೈಪಾಸ್ ಕಲಬುರಗಿ ಮುದಗಲ್ ಸಂಪರ್ಕಿಸುವ ಮುಖ್ಯ ರಸ್ತೆ ವಿಸ್ತರಣೆ ರಾಜಕೀಯ ಹಗ್ಗ ಜಗ್ಗಾಟದಿಂದ ನನೆಗುದಿಗೆ ಬಿದ್ದಿವೆ. ತಾಲ್ಲೂಕು ಕೇಂದ್ರಕ್ಕೆ ಕಚೇರಿ ವ್ಯಾಪಾರ ವಹಿವಾಟಿಗೆ ಬರುವವರು ಅನಿವಾರ್ಯವಾಗಿ ರಸ್ತೆ ಮೇಲೆಯೇ ನಡೆದುಕೊಂಡು ಹೋಗುತ್ತಿದ್ದಾರೆ. ಅತಿಕ್ರಮಣಕ್ಕೆ ಒಳಗಾದ ಚರಂಡಿ ಫುಟ್‌ಪಾತ್ ಮುಖ್ಯ ರಸ್ತೆ ಬದಿಯ ಅತಿಕ್ರಮಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.
ಪಾದಚಾರಿಗಳಿಗಿಲ್ಲ ದಾರಿ
ಜಾಲಹಳ್ಳಿ: ಪಟ್ಟಣದ ಮಧ್ಯೆದಲ್ಲಿಯೇ ಕಲ್ಮಲಾ-ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿ ಹಾದುಹೋಗಿದೆ. ರಸ್ತೆಯ ಎರಡು ಬದಿಯಲ್ಲಿ ವಿವಿಧ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟಿರುವ ಕಾರಣ ಪಾದಚಾರಿಗಳಿಗೆ ಸಂಚರಿಸಲು ರಸ್ತೆಯೇ ಇಲ್ಲವಾಗಿದೆ. ಕಳೆದ ನಾಲ್ಕೂ ವರ್ಷಗಳಿಂದ ಇಲ್ಲಿನ ಸಂಘಟನೆಯ ಮುಖಂಡರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡರೂ ಕೆಲಸ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕವಿತಾಳ ಪಟ್ಟಣದ ರಾಯಚೂರು–ಲಿಂಗಸುಗೂರು ರಾಜ್ಯ ಹೆದ್ದಾರಿ ವಿಸ್ತರಣೆಗಾಗಿ ಕಟ್ಟಡಗಳನ್ನು ತೆರವುಗೊಳಿಸಿ ದಶಕ ಕಳೆದರೂ ರಸ್ತೆ ವಿಸ್ತರಣೆ ಮಾಡಿಲ್ಲ. ಕಲ್ಮಠ ಬಜಾರ್ ರಸ್ತೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುವರೆಗೆ ಬಹುತೇಕ ಪಾದಚಾರಿ ರಸ್ತೆಯನ್ನು ಡಬ್ಬಾ ಅಂಗಡಿಗಳು ಅತಿಕ್ರಮಿಸಿಕೊಂಡಿವೆ. ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಬೇಕು. ಪಾದಚಾರಿಗಳ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಫುಟ್‌ಪಾತ್ ನಿರ್ಮಿಸಬೇಕು ಎಂದು ಸಂಘಟನೆ ಮುಖಂಡ ಅಲ್ಲಮಪ್ರಭು ಒತ್ತಾಯಿಸುತ್ತಾರೆ.
ಸಹಕಾರ: ಪ್ರಕಾಶ ಮಸ್ಕಿ, ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ, ಅಲಿಬಾಬಾ, ಪಿ.ಕೃಷ್ಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.