ರಾಯಚೂರು: ಭಾರಿ ವಾಹನ ಸಂಚಾರದಿಂದ ಹೆಚ್ಚಿದ ಸಂಕಷ್ಟ

ರಾಯಚೂರು: ನಗರದ ಮಧ್ಯೆಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನಗಳಿಂದಾಗಿ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಜಿಲ್ಲಾಡಳಿತವು ಪರಿಹಾರ ಕ್ರಮವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದ್ದು, ಅಂಕೆಯಿಲ್ಲದೆ ಸಂಚರಿಸುವ ಟಿಪ್ಪರ್‌ಗೆ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಇದೇ ವೃತ್ತದ ಬಳಿ ಕಳೆದ ಮಾರ್ಚ್‌ನಲ್ಲಿ ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಮೇಲೆ ಸಂಚರಿಸುತ್ತಿದ್ದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಐಡಿಎಸ್‌ಎಂಟಿ ಬಡಾವಣೆ ಪಕ್ಕದಲ್ಲಿ ಕಳೆದ ಏಪ್ರಿಲ್‌ನಲ್ಲಿ ಕ್ರೂಸರ್ ಡಿಕ್ಕಿಯಿಂದ ಸ್ಕೂಟಿಯಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟರು.
ಆಕಾಶವಾಣಿ ಕೇಂದ್ರದ ಎದುರು ಹಾಗೂ ಯರಮರಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ಘಟನೆಗಳು ನಡೆಯುತ್ತಲೇ ಇವೆ. ಜನರು ಪ್ರಾಣ ಕಳೆದುಕೊಳ್ಳುವುದು ಮುಂದುವರಿದಿದೆ. ಆದರೆ ಶಾಶ್ವತ ಪರಿಹಾರ ರೂಪಿಸಿ ಜನರ ಪ್ರಾಣ ಸಂರಕ್ಷಿಸುವ ಕೆಲಸವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಗರದ ಮಧ್ಯೆಭಾಗ ಸಂಚರಿಸುವ ಭಾರಿ ವಾಹನಗಳ ಸಮಸ್ಯೆ ತಪ್ಪಿಸುವುದಕ್ಕಾಗಿ ವರ್ತುಲ ರಸ್ತೆ ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
ರಾಜ್ಯ ಸರ್ಕಾರವು ಕಳೆದ ಬಜೆಟ್‌ನಲ್ಲಿ ವರ್ತುಲ ರಸ್ತೆ ನಿರ್ಮಾಣವನ್ನು ಘೋಷಿಸಿದೆ. ಆದರೆ, ರಸ್ತೆ ಮಂಜೂರಿ ಹಾಗೂ ಅನುದಾನ ಕ್ರೋಢೀಕರಣದ ಬಗ್ಗೆ ಸ್ಪಷ್ಟತೆ ಇಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ರಸ್ತೆ ನಿರ್ಮಾಣ ಆರಂಭಿಸುವುದಕ್ಕೆ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಭೆಯಲ್ಲಿ ಈಚೆಗೆ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಯೋಜನೆ ಜಾರಿಗೆ ವೇಗ ಸಿಗದೆ ಮತ್ತೆ ಕಡತದಲ್ಲೇ ಉಳಿದುಕೊಳ್ಳುತ್ತಿದೆ.
ಸಂಚಾರ ದಟ್ಟಣೆ: ರಾಯಚೂರು ನಗರದಲ್ಲಿ ಈಚೆಗೆ ಎಲ್ಲಿ ನೋಡಿದರೂ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಚಂದ್ರಮೌಳೇಶ್ವರ ವೃತ್ತ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಂತಹ ಪ್ರಮುಖ ಮಾರ್ಗಗಳಲ್ಲೇ ಸಂಚಾರವು ಸಂಕಷ್ಟಮಯವಾಗುತ್ತಿದೆ.
ಟಿಪ್ಪರ್ ಆತಂಕ: ಜಿಲ್ಲೆಯಾದ್ಯಂತ ಜನವಸತಿ ಪ್ರದೇಶಗಳಲ್ಲಿ ಕೂಡಾ ಟಿಪ್ಪರ್‌ಗಳ ಓಡಾಟ ಮಿತಿಮೀರಿದೆ. ಇದರಿಂದ ಸಿಸಿ ರಸ್ತೆಗಳು ಮತ್ತು ಟಾರ್ ರಸ್ತೆಗಳು ಟಿಪ್ಪರ್‌ಗಳ ಭಾರದಿಂದ ಹಾಳಾಗುತ್ತಿವೆ. ವೇಗದ ಮಿತಿಯಿಲ್ಲದೆ ಸಂಚರಿಸುವ ಟಿಪ್ಪರ್‌ಗಳನ್ನು ಕಂಡು ಜನರು ಭೀತಿಗೆ ಒಳಗಾಗುತ್ತಿದ್ದಾರೆ. ಟಿಪ್ಪರ್ ಎತ್ತರದ ವಾಹನ ಆಗಿರುವುದರಿಂದ ಚಾಲಕನಿಗೆ ಬೈಕ್‌ನಂತಹ ಸಣ್ಣ ಗಾತ್ರದ ವಾಹನಗಳು ಕಾಣಿಸುವುದೇ ಇಲ್ಲ. ಮನದಂಬಂತೆ ಸಂಚರಿಸುವ ಟಿಪ್ಪರ್‌ಗಳಿಗೆ ಅಂಕೆಹಾಕುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.