ಮಂಗಳವಾರ, ನವೆಂಬರ್ 24, 2020
20 °C
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ವಿವರಣೆ

ತುಂಗಭದ್ರಾ ಪುಷ್ಕರ: ಮಂತ್ರಾಲಯದಲ್ಲಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಬಾಯಾರಿಕೆ ತಣಿಸಿ ದೇಹಕ್ಕೆ ಸಿಹಿ ಉಣಬಡಿಸುವ ಗುಣ ಹೊಂದಿರುವ ತುಂಗಭದ್ರಾ ನದಿ ಪುಷ್ಕರಸ್ನಾನ ನವೆಂಬರ್‌ 20 ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ವಿಶೇಷ ಪೂರ್ವತಯಾರಿ ಮಾಡಲಾಗುತ್ತಿದೆ’ ಎಂದು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವಾಗಲೂ ಪುಣ್ಯಪ್ರದ ಕಾಲ ಪುಷ್ಕರ ಕಾಲ. ಪರಮಪವಿತ್ರ ಕಾಲವಿದು, ನದಿಯಲ್ಲಿ ಸ್ನಾನಮಾಡಿ ತರ್ಪಣ ಬಿಡುವುದು, ಪಿಂಡಪ್ರಧಾನ, ಅನ್ನದಾನ ಸೇರಿದಂತೆ ವಿವಿಧ ಪೂಜೆ, ಪುನಸ್ಕಾರಗಳು ಜರುಗುತ್ತವೆ. ಇದಕ್ಕಾಗಿ ದೇಶದ ವಿವಿಧೆಡೆಯಿಂದ ಭಕ್ತರು ಮಂತ್ರಾಲಯಕ್ಕೆ ಬರುತ್ತಾರೆ’ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆ ಕೂಡಲಿ ಬಳಿ ಒಂದಾಗುವ ತುಂಗಭದ್ರಾ ನದಿಗಳು ಬಳ್ಳಾರಿ ಜಿಲ್ಲೆಯ ಮೂಲಕ ರಾಯಚೂರಿಗೆ ಹರಿದುಬಂದು, ಆಂಧಪ್ರದೇಶದ ಕರ್ನೂಲ್‌ ಜಿಲ್ಲೆಯ ಮೂಲಕ ತೆಲಂಗಾಣ ರಾಜ್ಯದ ಜೋಗುಳಾಂಬಾ ಗದ್ವಾಲ್‌ ಜಿಲ್ಲೆಯ ಮೂಲಕ ಮತ್ತೆ ಕರ್ನೂಲ್‌ ಜಿಲ್ಲೆಯ ಸಂಗಮೇಶ್ವರದಲ್ಲಿ ಕೃಷ್ಣಾನದಿಯಲ್ಲಿ ಸಂಗಮವಾಗುತ್ತದೆ. ತುಂಗಭದ್ರಾ ನದಿಯ ಉತ್ಪತ್ತಿ, ವಿಸ್ತಾರದ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ವಿವರಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಕೊರೊನಾ ಮಹಾಮಾರಿ ಇರುವುದರಿಂದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಭಕ್ತರೆಲ್ಲರೂ ಪಾಲ್ಗೊಳ್ಳುತ್ತಾರೆ. ಮಠದಿಂದ ಸ್ನಾನಘಟ್ಟದ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ತಯಾರಿ ನಡೆದಿದೆ. ಆಂಧ್ರಪ್ರದೇಶದ ಸರ್ಕಾರ ಕೂಡಾ ಮಂತ್ರಾಲಯದಲ್ಲಿ ಮೂರು ಕಡೆಗಳಲ್ಲಿ ಸ್ನಾನ ಘಟ್ಟದ ವ್ಯವಸ್ಥೆ ಮಾಡುತ್ತಿದೆ. ಅಲ್ಲಿಯೂ ಕೂಡಾ ಸ್ನಾನಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದರು.

ಇದಲ್ಲದೆ ರಾಂಪೂರ್‌, ಮೇಲಿಗನೂರು, ನಾಗರದಿನ್ನಿ, ಗುರ್ಜಾಲ್‌ ಸೇರಿದಂತೆ ಕೆಲವು ಕಡೆಗಳಲ್ಲಿ ಪುಷ್ಕರಸ್ನಾನದ ವ್ಯವಸ್ಥೆಯನ್ನು ಆಂಧ್ರಪ್ರದೇಶ ಸರ್ಕಾರ ಮಾಡುತ್ತಿದೆ. ಭಕ್ತರು ಪವಿತ್ರ ಧಾರ್ಮಿಕ ಕಾರ್ಯ ನೆರವೇರಿಸಲು ಅನುವು ಮಾಡುತ್ತಿದೆ. ಸ್ನಾನಕ್ಕೆ ಬರುವ ಭಕ್ತರು ರಾಯರ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ವಿಶೇಷ ಪೂಜೆ: ಪುಷ್ಕರ ಆರಂಭವಾಗುವ ದಿನದಂದು ಬೆಳಿಗ್ಗೆ 6.30 ರಿಂದ 7.30 ರೊಳಗಾಗಿ ಉತ್ಸವದ ಮೂಲಕ ಸುವರ್ಣ ಹಾಗೂ ರಜತ ಕಳಸಗಳನ್ನು ರಾಯರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಲಾಗುವುದು. ಆನಂತರ ಉತ್ಸವ ರಾಯರೊಂದಿಗೆ ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ನದಿತೀರಕ್ಕೆ ಹೋಗಿ, ಕಳಸಗಳನ್ನಿಟ್ಟು ಪೂಜಿಸಲಾಗುವುದು. ಪುಷ್ಪಾರ್ಚನೆ, ದಾನಗಳನ್ನು ನೆರವೇರಿಸಿ, ಕಳಸೋದಕವನ್ನು ನದಿಗೆ ಸೇರಿಸಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು