ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೂರಾಗದ ಸರ್ಕಾರಿ ಕಚೇರಿಗಳು; ತಪ್ಪದ ಗೋಳು

ಸಿರವಾರ, ಮಸ್ಕಿ ತಾಲ್ಲೂಕುಗಳ ಜನರ ನಿತ್ಯ ಅಲೆದಾಟ
Last Updated 11 ಆಗಸ್ಟ್ 2021, 11:55 IST
ಅಕ್ಷರ ಗಾತ್ರ

ಮಾನ್ವಿ: ಮಾನ್ವಿ ತಾಲ್ಲೂಕಿನಿಂದ ಬೇರ್ಪಡಿಸಿ ನೂತನವಾಗಿ ಸಿರವಾರ ಹಾಗೂ ಮಸ್ಕಿ ತಾಲ್ಲೂಕುಗಳನ್ನು ರಚಿಸಿ ಮೂರುವರೆ ವರ್ಷಗಳು ಗತಿಸಿವೆ. ಆದರೆ, ನೂತನ ತಾಲ್ಲೂಕುಗಳಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಮಂಜೂರಾಗದಿರುವ ಕಾರಣ ಸರ್ಕಾರಿ ಕೆಲಸಗಳಿಗಾಗಿ ನೌಕರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಆಹಾರ ಮತ್ತು ನಾಗರಿಕ ಸರಬರಾಜು, ತೋಟಗಾರಿಕೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಸೇರಿದಂತೆ ಜನರಿಗೆ ತೀರಾ ಅಗತ್ಯವಿರುವ ಇಲಾಖೆಗಳ ಕಚೇರಿಗಳು ಹಾಗೂ ಪ್ರಮುಖ ಹುದ್ದೆಗಳು ಇನ್ನೂ ಮಂಜೂರಾಗಿಲ್ಲ. ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಆಡಳಿತಾತ್ಮಕವಾಗಿ ಯೋಜನೆಗಳ ಜಾರಿಗೆ ತೊಂದರೆ ಅನುಭವಿಸುತ್ತಿದ್ದಾರೆ.

ಇಲಾಖಾವಾರು ಅನುದಾನ ಹಂಚಿಕೆ, ಫಲಾನುಭವಿಗಳ ಆಯ್ಕೆ ವಿಚಾರದಲ್ಲಿಯೂ ಅಧಿಕಾರಿಗಳು ಅನೇಕ ಬಾರಿ ಗೊಂದಲಕ್ಕೀಡಾಗಿದ್ದಾರೆ. ಸಿರವಾರ ಹಾಗೂ ಮಸ್ಕಿ ತಾಲ್ಲೂಕುಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರು ಕಚೇರಿ ಕೆಲಸಗಳಿಗಾಗಿ ಮಾನ್ವಿ ತಾಲ್ಲೂಕು ಕೇಂದ್ರಕ್ಕೆ ಅಲೆಯುತ್ತಿರುವುದು ಸಾಮಾನ್ಯವಾಗಿದೆ.

ಸರ್ಕಾರಿ ನೌಕರರು, ರೈತರು ವಿವಿಧ ಯೋಜನೆಗಳ ಲಾಭ ಹಾಗೂ ಬ್ಯಾಂಕ್ ಸಾಲ ಸೌಲಭ್ಯಗಳಿಗಾಗಿ ಇನ್ನೂ ಕೂಡ ಮಾನ್ವಿ ತಾಲ್ಲೂಕು ಕೇಂದ್ರದಲ್ಲಿರುವ ಕಚೇರಿಗಳನ್ನು ಅವಲಂಬಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಮೂರು ವಲಯಗಳು (ಕ್ಲಸ್ಟರ್‍ಗಳು) ಮಸ್ಕಿ ತಾಲ್ಲೂಕು ಹಾಗೂ 11 ವಲಯಗಳು ಸಿರವಾರ ತಾಲ್ಲೂಕಿಗೆ ಒಳಪಟ್ಟಿವೆ. ‌

ನೂತನ ಎರಡು ತಾಲ್ಲೂಕುಗಳ 200ಕ್ಕೂ ಅಧಿಕ ಶಾಲೆಗಳ ಶಿಕ್ಷಕರು ಕಚೇರಿ ಕೆಲಸ, ವೇತನ, ತರಬೇತಿ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿಗೆ ಬರಬೇಕಿದೆ. ಪಾಲಕರು ತಮ್ಮ ಮಕ್ಕಳ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಶಿಕ್ಷಣ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲಾತಿಗಳ ದೃಢೀಕರಣಕ್ಕೆ ಮಾನ್ವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬರಬೇಕಾದ ಅನಿವಾರ್ಯತೆ ಇದೆ.

ಮಸ್ಕಿ ತಾಲ್ಲೂಕು ವ್ಯಾಪ್ತಿಯ ಪಾಮನಕಲ್ಲೂರು ವಲಯದ ಶಾಲೆಗಳ ಶಿಕ್ಷಕರು, ಪಾಲಕರು ಸುಮಾರು ಮಾನ್ವಿ ಪಟ್ಟಣಕ್ಕೆ ಬರಲು 60-70ಕಿಮೀ ದೂರದ ದಾರಿ ಕ್ರಮಿಸಬೇಕಿದೆ. ಆರೋಗ್ಯ ಇಲಾಖೆಯಲ್ಲಿ ತೋರಣದಿನ್ನಿ ಹಾಗೂ ಪಾಮನಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು, 9 ಉಪ ಕೇಂದ್ರಗಳು ಮಸ್ಕಿ ತಾಲ್ಲೂಕಿಗೆ ಒಳಪಟ್ಟಿವೆ.

ಕವಿತಾಳ ಸಮುದಾಯ ಆರೋಗ್ಯ ಕೇಂದ್ರ, ಸಿರವಾರದ ಸಮುದಾಯ ಆರೋಗ್ಯ ಕೇಂದ್ರ, ಕಲ್ಲೂರು ಹಾಗೂ ಬಲ್ಲಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಲವು ಉಪಕೇಂದ್ರಗಳು ಸಿರವಾರ ತಾಲ್ಲೂಕಿಗೆ ಒಳಪಟ್ಟಿವೆ.

ಆದರೆ ನೂತನ ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳು ಮಂಜೂರಾಗಿಲ್ಲ. ಕಾರಣ ಸ್ಥಳೀಯ ಶಾಸಕರು, ಇತರ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ನೂತನ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‍ವಿಭಾಗ ಸೇರಿದಂತೆ ಪ್ರಮುಖ ಇಲಾಖೆಗಳ ಕಚೇರಿಗಳ ಆರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಹೇಳಿಕೆಗಳು...

ನೂತನ ತಾಲ್ಲೂಕುಗಳಲ್ಲಿ ಎಲ್ಲಾ ಇಲಾಖೆಗಳ ಹುದ್ದೆಗಳನ್ನು ಮಂಜೂರು ಮಾಡಿ ಕಚೇರಿಗಳ ಕಾರ್ಯಾರಂಭಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
–ಜೆ.ದೇವರಾಜಗೌಡ, ಅಧ್ಯಕ್ಷ, ಸಿರವಾರ ತಾಲ್ಲೂಕು ಹೋರಾಟ ಸಮಿತಿ

ಆರೋಗ್ಯ ಇಲಾಖೆಯ ವಿಂಗಡಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮೂರು ತಾಲ್ಲೂಕುಗಳ ಆರೋಗ್ಯ ಕೇಂದ್ರಗಳ ನಿರ್ವಹಣೆಗೆ ಹೆಚ್ಚು ಕಾರ್ಯಭಾರ ಇದೆ.
–ಡಾ.ಚಂದ್ರಶೇಖರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ, ಮಾನ್ವಿ

ಹೊಸ ತಾಲ್ಲೂಕುಗಳ ವ್ಯಾಪ್ತಿಯ ಶಾಲೆಗಳು, ಹುದ್ದೆಗಳ ವಿವರ ಮತ್ತಿತರ ಮಾಹಿತಿಗಳನ್ನು ಕಳೆದ ವರ್ಷ ಸಲ್ಲಿಸಲಾಗಿದೆ.
–ವೆಂಕಟೇಶ ಗುಡಾಳ, ಕ್ಷೇತ್ರ ಶಿಕ್ಷಣಾಧಿಕಾರಿ, ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT