ಶನಿವಾರ, ಅಕ್ಟೋಬರ್ 24, 2020
18 °C
ಜನಾಂದೋಲನ ಮಹಾ ಮೈತ್ರಿಯಿಂದ ಆಯೋಜಿಸಿದ್ದ ಕಾರ್ಯಾಗಾರ

‘ಅಸಂಘಟಿತ ಕಾರ್ಮಿಕರಿಗೆ ಅನ್ಯಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶದ ಸಂಪತ್ತನ್ನು ಸೃಷ್ಟಿ ಮಾಡುವ ಅಸಂಘಟಿತ ಕಾರ್ಮಿಕರನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಸಾಮಾಜಿಕ, ಉದ್ಯೋಗ ಭದ್ರತೆಯಿಲ್ಲದೇ ಹಲವಾರು ಸಂಕಷ್ಟಕ್ಕೆ ಸಿಲುಕಿದರೂ ಕೂಡ ಸರ್ಕಾರ ಅವರ ಬವಣೆ ಕೇಳುತ್ತಿಲ್ಲ. ಸರ್ಕಾರದ ನೀತಿಯನ್ನು ಒಗ್ಗಟ್ಟಿನಿಂದ ಪ್ರಶ್ನಿಸಿ ನ್ಯಾಯ ಒದಗಿಸಬೇಕಿದೆ ಎಂದು ಅಖಿಲ ಭಾರತ ಸಂಯುಕ್ತ ಕಾರ್ಮಿಕ ಸಂಘಟನೆ (ಎಐಯುಟಿಯುಸಿ) ಜಿಲ್ಲಾ ಅಧ್ಯಕ್ಷ ವೀರೇಶ ಎನ್.ಎಸ್ ತಿಳಿಸಿದರು.

ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ ನಾರಾಯಣ ಅವರ ಸ್ಮರಣಾರ್ಥ ಜನಾಂದೋಲನ ಮಹಾಮೈತ್ರಿ ಹಾಗೂ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ನಗರದ ಶಮಿಮ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ  ಕಾರ್ಯಾಗಾರದಲ್ಲಿ ‘ವಲಸೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರ ಬದುಕು-ಬವಣೆ’ ವಿಷಯದ ಕುರಿತು ಮಾತನಾಡಿದರು.

ಸಂಘಟಿತ ವಲಯದ ಕಾರ್ಮಿಕರಿಗೆ ಆರೋಗ್ಯ, ಸಾಮಾಜಿಕ ಹಾಗೂ ಉದ್ಯೋಗ ಭದ್ರತೆ ಸೇರಿದಂತೆ ಅನೇಕ ಸೌಲಭ್ಯ ಸರ್ಕಾರ ಒದಗಿಸಿದೆ. ಅಸಂಘಟಿತ ಕಾರ್ಮಿಕರು ದೇಶದ ಒಟ್ಟಾರೆ ಆಂತರಿಕ ಉತ್ಪನ್ನ
(ಜಿಡಿಪಿ) ಶೇ 50 ರಷ್ಟು ಸೃಷ್ಟಿ ಮಾಡುವವರು. ಅಸಂಘಟಿತ ವಲಯದಲ್ಲಿ 46 ಕೋಟಿ ಜನರು ದುಡಿಯುತ್ತಿದ್ದು ಶೇ  65 ಗ್ರಾಮೀಣ ಕೃಷಿ ಕಾರ್ಮಿಕರು, 5 ಕೋಟಿ ಕಟ್ಟಡ ಕಾರ್ಮಿಕರು ಸೇರಿದಂತೆ ಅನೇಕ ಕಾರ್ಮಿಕರು ಇದ್ದು ಇವರಿಗೆ ಸರ್ಕಾರದ ಸಮರ್ಪಕ ಸೌಲಭ್ಯವಿಲ್ಲದೇ ಅಮಾನವೀಯವಾಗಿ ಬದುಕುತ್ತಿದ್ದಾರೆ ಎಂದು ದೂರಿದರು.

ವಲಸೆ ಹಾಗೂ ಅಸಂಘಟಿತ ಕಾರ್ಮಿಕರನ್ನು ಕೋವಿಡ್ ಹೆಸರಿನಲ್ಲಿ ಅವರನ್ನು ಮತ್ತಷ್ಟು ಶೋಷಣೆ ಮಾಡಲಾಗಿದೆ. ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗಳಿಗೆ ಸೇರಲು ವ್ಯವಸ್ಥೆ ಮಾಡದೇ ಅನೇಕರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರ ಅತ್ಯಂತ ಅಮಾನವೀಯವಾಗಿ ಪರಿಗಣಿಸಿದೆ. ಈ ದೇಶದ ಸಂಪತ್ತು ಕೆಲವೇ ಜನರ ಕೈಯಲ್ಲಿದ್ದು ಬಹುಸಂಖ್ಯಾತ ವರ್ಗ ನಿರಂತರ ಶೋಷಣೆಗೆ ಒಳಗಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಬಸವರಾಜ ಗಾರಲದಿನ್ನಿ ಮಾತನಾಡಿದರು.

 ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸೂಗೂರಯ್ಯ ಆರ್. ಎಸ್.ಮಠ ಅಧ್ಯಕ್ಷತೆ ವಹಿಸಿದ್ದರು.

ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

  ಮುಖಂಡ ಎಂ.ಆರ್ ಭೇರಿ ಅವರು, ‘ದಲಿತರು ಆದಿವಾಸಿಗಳು ಮಹಿಳೆಯರು ತಲ್ಲಣಗಳು’ ವಿಷಯದ ಕುರಿತು ಮಾತನಾಡಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಡಾ.ಶಾರದಾ ಪಿ ಹುಲಿ ನಾಯಕ, ಗ್ರಾಮೀಣ ಕೂಲಿಕಾರರ ಸಂಘದ ಮುಖಂಡ ಗುರುರಾಜ, ಖಾಜಾ ಅಸ್ಲಂ ಅಹ್ಮದ್, ವೀರಣ್ಣ ಭಂಡಾರಿ, ಅಶ್ರಫ್ ಹುಸೇನ್, ಮಲ್ಲನಗೌಡ, ಈರಮ್ಮ, ಅಬ್ರಾರ್ ಹುಸೇನ್, ಆಂಜನೇಯ ಕುರುಬದೊಡ್ಡಿ ಮತ್ತಿತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.