ಬುಧವಾರ, ಜುಲೈ 6, 2022
22 °C
ಮಾದಿಗರ ಚೈತನ್ಯ ರಥಯಾತ್ರೆಯ ಮಹಾಸಂಚಾಲಕ ಹೆಣ್ಣೂರು ಲಕ್ಷ್ಮೀನಾರಾಯಣ ಹೇಳಿಕೆ

ರಾಜಕೀಯ ಪಕ್ಷಗಳಿಂದ ಮಾದಿಗರಿಗೆ ಮೋಸ: ಹೆಣ್ಣೂರು ಲಕ್ಷ್ಮೀನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಾ ಬಂದಿರುವ ರಾಜಕೀಯ ಪಕ್ಷಗಳು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುತ್ತೇನೆ ಎಂದು ಆಶ್ವಾಸನೆ ನೀಡುತ್ತಾ ಬಂದರೂ, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಮಾದಿಗರಿಗೆ ಮೋಸ ಮಾಡಿವೆ ಎಂದು ಮಾದಿಗರ ಚೈತನ್ಯ ರಥಯಾತ್ರೆಯ ಮಹಾಸಂಚಾಲಕ ಹೆಣ್ಣೂರು ಲಕ್ಷ್ಮೀನಾರಾಯಣ ಆಕ್ರೋಶ ಹೊರಹಾಕಿದರು.‌

ನ್ಯಾ. ಸದಾಶಿವ ಆಯೋಗದ ವರದಿ ಜಾರಿಗಾಗಿ ಮತ್ತು ಮಾದಿಗ ವಿರಾಟ್‌ ಶಕ್ತಿಪ್ರದರ್ಶನಕ್ಕಾಗಿ ಆರಂಭವಾಗಿರುವ ‘ಮಾದಿಗರ ಚೈತನ್ಯ ರಥಯಾತ್ರೆ’ಯು ರಾಯಚೂರಿಗೆ ಆಗಮಿಸಿದ ನಿಮಿತ್ತ ಶುಕ್ರವಾರ ನೃಪತುಂಗ ಹೋಟೆಲ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

ದಶಕಗಳಿಂದ ಮಾದಿಗರು ಒಳಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟದ ತೀವ್ರತೆಯನ್ನು ಗಮನಿಸಿ 2004 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರು ನ್ಯಾ.ಸದಾಶಿವ ಆಯೋಗವನ್ನು ನೇಮಿಸಿದ್ದರು. 2012 ರಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮತ್ತೆ ನಿರಂತರ ಹೋರಾಟ ನಡೆಸಿದರೂ ಸ್ಪಂದನೆ ಸಿಗುತ್ತಿಲ್ಲ. ವರದಿ ಜಾರಿಯಾಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಮಾದಿಗರನ್ನು ನಿರ್ಲಕ್ಷಿಸುವ ಯಾವುದೇ ಸರ್ಕಾರ ಪರಿತಪಿಸುವ ಪರಿಸ್ಥಿತಿ ಬರುತ್ತದೆ. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಮಾತಿಗೆ ತಪ್ಪಿದ್ದರಿಂದಲೇ ಅತಂತ್ರ ಸ್ಥಿತಿಗೆ ಸಿಲುಕಿದರು. ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಈ ಆದೇಶ ಅನುಸರಿಸಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾಗಿದೆ ಎಂದು ಹೇಳಿದರು.

ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಅಂಬಣ್ಣ ಆರೋಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ, ಮುಖಂಡರಾದ ಕೆ.ಪಿ.ಅನಿಲಕುಮಾರ್‌, ಮಧುಚಕ್ರವರ್ತಿ, ಬಾಲಸ್ವಾಮಿ ಕೊಡ್ಲಿ, ರಾಮಣ್ಣ, ಕೆ.ನಾಗರಾಜ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು