ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ, ಮೆಣಸಿನಕಾಯಿಗೆ ಬೆಂಬಲ ಬೆಲೆ ನೀಡಲು ಒತ್ತಾಯ

ಜಿಲ್ಲಾ ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ
Last Updated 2 ಜನವರಿ 2023, 13:48 IST
ಅಕ್ಷರ ಗಾತ್ರ

ರಾಯಚೂರು: ರೈತರು ಬೆಳೆದ ಹತ್ತಿ ಮತ್ತು ಮೆಣಸಿಕಾಯಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯಿಸಿ ಜೆಡಿಎಸ್ ಪಕ್ಷದ ಜಿಲ್ಲಾ ಹಾಗೂ ಗ್ರಾಮಾಂತರ ಘಟಕ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ರೈತರು ಹತ್ತಿ ಮತ್ತು ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಕಳೆದ ವರ್ಷ ಹತ್ತಿ ಬೆಳೆಗೆ ಉತ್ತಮ ಬೆಲೆ ದೊರಕಿತ್ತು. ಕಳೆದ ಆರು ತಿಂಗಳ ಹಿಂದೆ ಹತ್ತಿಯ ಬೆಲೆಯು ಪ್ರತಿ ಕ್ವಿಂಟಲ್‍ಗೆ ₹12ಸಾವಿರ ಬೆಲೆ ಇದ್ದು, ಈಗ ದಿಡೀರನೆ ₹6 ಸಾವಿರಕ್ಕೆ ಕುಸಿತವಾಗಿದ್ದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೂರಿದರು.

ಬೇರೆ ಜಿಲ್ಲೆಗಳಲ್ಲಿ ಹಾಗೂ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ₹10ರಿಂದ ₹12ಸಾವಿರ ಪ್ರತಿ ಕ್ವಿಂಟಲ್ ಹತ್ತಿಗೆ ಬೆಲೆ ಇದೆ. ರಾಯಚೂರು ಜಿಲ್ಲೆಯಲ್ಲಿ ಅನೇಕ ರೈತರು ಹತ್ತಿ ಬೆಳೆಯನ್ನು ಮತ್ತು ಮೆಣಸಿನಕಾಯಿ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ. ಈಗ ದಿಡೀರ್ ದರ ಇಳಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಯಾವುದೇ ರೀತಿಯಲ್ಲಿ ಚಿಂತನೆ ನಡೆಸುತ್ತಿಲ್ಲ. ಬದಲಾಗಿ ಮುಂದಿನ ಚುನಾವಣೆಗಾಗಿ ಯಾತ್ರೆಗಳನ್ನು ಮಾಡುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಹತ್ತಿ ಮಾರಾಟಗಾರರು ಉದ್ದೇಶಪೂರ್ವಕವಾಗಿ ಹತ್ತಿ ದರವನ್ನು ಕುಸಿಯಲು ಕೃತಕ ಮಾರುಕಟ್ಟೆ ಸೃಷ್ಠಿಸಿದ್ದಾರೆ. ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯಾಪಾರ ಶುಲ್ಕವನ್ನು ಶೇ 11ರಷ್ಟು ಇಳಿಸಿದ ಕಾರಣ ಆಸ್ಟ್ರೇಲಿಯಾ ಮತ್ತು ಇನ್ನಿತರ ದೇಶಗಳಿಂದ ಹತ್ತಿಯು ಆಮದಾಗುತ್ತಿದ್ದು, ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಮತ್ತು ಹತ್ತಿ ಗಿರಣಿ ಮಾಲೀಕರು ಬೇರೆ ದೇಶದಿಂದ ಹತ್ತಿಯನ್ನು ಆಮದು ಮಾಡಿಕೊಂಡಿರುವುದರಿಂದ ಹತ್ತಿಯ ಬೆಲೆ ಸಂಪೂರ್ಣವಾಗಿ ಇಳಿಕೆ ಕಾಣುತ್ತಿದೆ. ಇದರಿಂದ ದೇಶದ ರೈತರಿಗೆ ಸಂಪೂರ್ಣ ತೊಂದರೆಯಾಗುತ್ತಿದೆ. ದರವು ಕಡಿಮೆಯಾಗುತ್ತಿದೆ ಎಂದು ದೂರಿದರು.

ಹತ್ತಿ ಬೆಳೆಯು ಬೇಡಿಕೆ ಕಡಿಮೆಯಾಗಿ ಹತ್ತಿ ದರವನ್ನು ಕುಸಿಯುತ್ತಿದೆ. ತಕ್ಷಣವೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಹತ್ತಿಯನ್ನು ಆಮದು ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಹಾಗೂ ರಾಷ್ಟ್ರೀಯ ಹತ್ತಿ ಬೆಳೆಗಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಗ್ರಾಮೀಣ ಕ್ಷೇತ್ರ ಆಕಾಂಕ್ಷಿ ನರಸಿಂಹ ನಾಯಕ, ಮುಖಂಡರಾದ ನಿಜಾಮುದ್ದೀನ್, ಯೂಸೂಫ್ ಖಾನ್, ಎನ್.ಶಿವಶಂಕರವಕೀಲ, ಗಾಣಧಾಳ ಲಕ್ಷ್ಮೀಪತಿ, ವಿಶ್ವನಾಥಪಟ್ಟಿ, ತಿಮ್ಮಾರೆಡ್ಡಿ, ರಾಮಕೃಷ್ಣ, ಅಮರೇಶ ಆಶಾಪುರ, ವಿಶ್ವನಾಥ ಪಾಟೀಲ್. ಅಕ್ಬರ ನಾಗುಂಡಿ, ಸರ್ಜಾಪುರ ಭೀಮರೆಡ್ಡಿ, ಶಂಕರಪ್ಪ ಪೂರತಿಪ್ಲಿ, ಶರಣಪ್ಪ ಮರ್ಚೆಡ್, ತಿಮ್ಮಪ್ಪ, ಸುಧಾಕರರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT