ಬುಧವಾರ, ಆಗಸ್ಟ್ 4, 2021
26 °C
ತುಂಗಭದ್ರಾ ಎಡದಂಡೆ ನಾಲೆ ಹಿತರಕ್ಷಣಾ ಸಮಿತಿ ಹೇಳಿಕೆ

ಅಕ್ರಮ ನೀರಾವರಿ ತಡೆಗೆ ಸೋಲಬಾರದು: ತುಂಗಭದ್ರಾ ಎಡದಂಡೆ ನಾಲೆ ಹಿತರಕ್ಷಣಾ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಅಕ್ರಮ ನೀರಾವರಿ ತಡೆಗಟ್ಟಲು ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು ಜಂಟಿಯಾಗಿ ಅಕ್ರಮ ತಡೆಗೆ ಈಗಾಗಲೇ ಮುಂದಾಗಿರುವುದು ಅಭಿನಂದನೀಯ. ಸರ್ಕಾರದ ಆದೇಶವು ಯಾವುದೇ ಕಾರಣಕ್ಕೂ ಸೋಲದಂತೆ ಇಬ್ಬರೂ ಕಾರ್ಯ ಪ್ರವೃತ್ತರಾಗಬೇಕು ಎಂದು ತುಂಗಭದ್ರಾ ಎಡದಂಡೆ ನಾಲೆ ಹಿತರಕ್ಷಣಾ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲುವೆ ಮೇಲ್ಭಾಗದಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿಯೇ ಅಧಿಕ ಪ್ರಮಾಣದ ಅಕ್ರಮ ನೀರಾವರಿ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಜಿಲ್ಲಾಧಿಕಾರಿ ಸುನೀಲಕುಮಾರ್‌ ಅವರ ಗಮನಕ್ಕೆ ಬಂದಿದೆ. ಸರ್ಕಾರದ ಆದೇಶವನ್ನು ಚಾಚುತಪ್ಪದೇ ಅನುಷ್ಠಾನ ತರುವ ಕೆಲಸವನ್ನು ಅವರು ಮಾಡುತ್ತಾರೆ ಎನ್ನುವ ಪೂರ್ಣವಿಶ್ವಾಸವಿದೆ ಎಂದರು.

ಜುಲೈನಲ್ಲಿ ನೀರು ಹರಿಸುವ ಪೂರ್ವದಲ್ಲಿಯೇ ಅಕ್ರಮ ನೀರಾವರಿ ಪಂಪ್‌ಸೆಟ್‌ಗಳನ್ನು ತೆಗೆದುಹಾಕುವಂತೆ ಅಲ್ಲಿನ ರೈತರಿಗೆ ಮೊದಲು ಎಚ್ಚರಿಕೆ ನೀಡಬೇಕು. ಒಂದು ವೇಳೆ, ಪಂಪ್‌ಸೆಟ್‌ ತೆಗೆದುಹಾಕದಿದ್ದರೆ ಕಾರ್ಯಾಚರಣೆ ಮೂಲಕ ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಕ್ರಮ ನೀರಾವರಿ ತಡೆಗಟ್ಟಬೇಕೆನ್ನುವ ಜಿಲ್ಲಾಧಿಕಾರಿಗಳ ಸಂಕಲ್ಪಕ್ಕೆ ಪೂರಕವಾಗಿ ಹೋರಾಟ ಸಮಿತಿಯಿಂದ ಜಾಗೃತ ದಳವೊಂದನ್ನು ರಚಿಸಲಾಗುತ್ತಿದೆ. ಅಕ್ರಮಗಳ ವಾಸ್ತವ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಈ ಸಮಿತಿ ಮಾಡುತ್ತದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಯಾವುದೇ ಹೋರಾಟಕ್ಕೆ ರಾಜಕೀಯ ಇಚ್ಛಾಶಕ್ತಿಯು ಕೂಡಿಕೊಂಡರೆ ಕಾರ್ಯಸಿದ್ಧಿ ಆಗೇ ಆಗುತ್ತದೆ ಎನ್ನುವುದಕ್ಕೆ ಇದು ಕೂಡಾ ಸಾಕ್ಷಿ. ಶಾಸಕ ರಾಜಾ ವೆಂಕಟಪ್ಪ ನಾಯಕ, ಸಂಸದ ರಾಜಾ ಅಮರೇಶ್ವರ ನಾಯಕ ಅವರು ಅಕ್ರಮ ನೀರಾವರಿ ತಡೆಗಟ್ಟಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ ಎಂದು ಹೇಳಿದರು.

ಅಕ್ರಮ ಪಂಪ್‌ಸೆಟ್‌ಗಳನ್ನು ತೆಗೆದುಹಾಕದಿದ್ದರೆ, ಜುಲೈನಲ್ಲಿ ನೀರು ಹರಿಸುವ ಅಣೆಕಟ್ಟು ಮುಂದೆಯೇ ಬೃಹತ್‌ ಪ್ರತಿಭಟನೆ ಆರಂಭಿಸಲಾಗುವುದು. ಅಗತ್ಯಬಿದ್ದರೆ ಜಾಗೃತ ದಳದಿಂದಲೇ ಅಕ್ರಮ ಪಂಪ್‌ಸೆಟ್‌ಗಳನ್ನು ತೆಗೆದುಹಾಕುವ ಕಾರ್ಯಾಚರಣೆಗೂ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

ಅಕ್ರಮ ಸ್ಥಗಿತವಾಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೆ ಅಕ್ರಮಗಳಿಗೆ ಕಡಿವಾಣ ಹಾಕುವುದು ದೊಡ್ಡ ವಿಷಯವಲ್ಲ. ಮುಖ್ಯಮಂತ್ರಿ ಆದೇಶ ಅನುಷ್ಠಾನ ಮಾಡುತ್ತಾರೆ ಎಂದು ಹೇಳಿದರು.

ರಾಯಚೂರು ವಾಣಿಜ್ಯೋದ್ಯಮಗಳ ಸಂಸ್ಥೆಯ ಅಧ್ಯಕ್ಷ ತ್ರಿವಿಕ್ರಮ ಜೋಶಿ, ರೈತ ಮುಖಂಡರಾದ ಹರವಿ ನಾಗನಗೌಡ, ಬೂದಯ್ಯಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು