ಬುಧವಾರ, ಜನವರಿ 22, 2020
16 °C
ರಾಯಚೂರು ನಗರಸಭೆಯ ಎಲ್ಲ ವಿಭಾಗಗಳಲ್ಲೂ ಹುದ್ದೆಗಳು ಖಾಲಿ

ರಾಯಚೂರು: ಅಧಿಕಾರಿ ಇಲ್ಲ, ಸದಸ್ಯರಿಗೆ ಅಧಿಕಾರವೂ ಇಲ್ಲ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ನಗರಸಭೆಗೆ ಮಂಜೂರಿಯಾದ ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾಲಿ ಉಳಿದಿದ್ದು, ಪ್ರತಿಯೊಂದು ವಿಭಾಗದಲ್ಲಿ ಒತ್ತಡದಲ್ಲಿ ಮುಳುಗಿದ ಸಿಬ್ಬಂದಿಯ ಮನವೊಲಿಸಿ ಕೆಲಸ ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿದೆ.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ), ನೈರ್ಮಲ್ಯ ನಿರೀಕ್ಷಕರು (ಎಸ್‌ಐ), ಬಿಲ್‌ ಕಲೆಕ್ಟರ್ಸ್‌, ವಾಹನ ಚಾಲಕರು, ಪ್ಲಂಬರ್‌, ವಾಟರ್‌ಮನ್‌, ಕಂಪ್ಯೂಟರ್‌ ಆಪರೇಟರ್ಸ್‌, ಎಸ್‌ಡಿಎ ಹಾಗೂ ಎಫ್‌ಡಿಎ ಹುದ್ದೆಗಳು ಸೇರಿದಂತೆ ಒಟ್ಟು 50 ಕ್ಕೂ ಹೆಚ್ಚು ಪ್ರಮುಖ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಉಳಿದಿವೆ.

ಏಳು ಮಂದಿ ಬಿಲ್‌ ಕಲೆಕ್ಟರ್ಸ್‌, ಏಳು ಮಂದಿ ಅಟೆಂಡರ್ಸ್‌, ಏಳು ಜನ ಎಸ್‌ಡಿಎ, ಒಬ್ಬರು ಹಿರಿಯ ನೈರ್ಮಲ್ಯ ನಿರೀಕ್ಷಕರು, ಮೂವರು ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಇಬ್ಬರು ಜುನಿಯರ್‌ ಎಂಜಿನಿಯರ್‌ ಮೂಲಕ ನಗರಸಭೆ ಆಡಳಿತವನ್ನು ಪೌರಾಯುಕ್ತರು ನಿಭಾಯಿಸುತ್ತಿದ್ದಾರೆ. ಕೆಲವು ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಕೆಲಸಗಾರರಿದ್ದಾರೆ. ಒಬ್ಬರಿಗೆ ಮೂರಕ್ಕಿಂತ ಹೆಚ್ಚು ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದರಿಂದ ಯಾವ ಕೆಲಸಗಳು ಪರಿಪೂರ್ಣವಾಗಿ ನೆರವೇರುತ್ತಿಲ್ಲ.

‘ಮೇಲಿಂದ ಮೇಲೆ ಪೌರಾಯುಕ್ತರು ಬದಲಾಗುತ್ತಿದ್ದಾರೆ. ದಕ್ಷ ಪೌರಾಯುಕ್ತರಿದ್ದರೆ ಖಾಲಿ ಹುದ್ದೆಗಳಿಗೆ ಸಿಬ್ಬಂದಿಯನ್ನು ಕರೆಸಿಕೊಂಡು ಆಡಳಿತ ನಡೆಸುತ್ತಾರೆ. ನಗರಸಭೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿ, ಅಧಿಕಾರಿಗಳು ಒತ್ತಡದಲ್ಲಿರುವುದು ಕಾಣುತ್ತದೆ. ವಾರ್ಡ್‌ ಸದಸ್ಯರಿಗೂ ಅಧಿಕಾರ ಇಲ್ಲದೆ ಸಮಸ್ಯೆ ಆಗಿದೆ. ಸದಸ್ಯರು ಇನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ವಾರ್ಡ್‌ ಸಮಸ್ಯೆ ಪೌರಾಯುಕ್ತರ ಗಮನಕ್ಕೆ ತಂದರೂ ಈಡೇರುಸುತ್ತಿಲ್ಲ’ ಎಂದು ನಗರಸಭೆ ಬರುವ ಸಾರ್ವಜನಿಕರು ಆರೋ‍ಪಿಸುತ್ತಿದ್ದಾರೆ.

‘ನಿಯಮಾನುಸಾರ ನಗರಸಭೆಯಲ್ಲಿ ಏನೂ ನಡೆಯುವುದಿಲ್ಲ. ಎಲ್ಲವೂ ಹೊಂದಾಣಿಕೆ ಮೇಲೆಯೆ ನಡೆಯುತ್ತಿದೆ. ಜನರು ತೆರಿಗೆ ಕಟ್ಟಿದರೆ ಕೆಲಸಗಳಾಗುತ್ತವೆ ಎಂದು ಹೇಳುತ್ತಾರೆ. ಆದರೆ, ಕೆಲಸ ಮಾಡಿಸಲು ನಗರಸಭೆ ಸದಸ್ಯರೂ ಇಲ್ಲ. ಹುದ್ದೆಗಳಲ್ಲಿ ಅಧಿಕಾರಿಗಳು ಇಲ್ಲ. ಒಂದೊಂದು ವಿಭಾಗದಲ್ಲಿ ಒಬ್ಬರೇ ಕಾರ್ಯ ಮಾಡಬೇಕಿದೆ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ನಗರಸಭೆ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.

ನಗರಸಭೆಗೆ ಸಂಬಂಧಿಸಿದ ಅಂತರ್ಜಾಲ ತಾಣದಲ್ಲಿ ಎಲ್ಲ ಹುದ್ದೆಗಳ ಮಾಹಿತಿ ಅಳವಡಿಸಲಾಗಿದೆ. ಖಾಲಿ ಹುದ್ದೆಗಳು ರಾರಾಜಿಸುತ್ತಿವೆ. ನಗರದ ನೈರ್ಮಲ್ಯವನ್ನು ಗಮನಿಸಿ ಕ್ರಮ ಕೈಗೊಳ್ಳುವುದಕ್ಕೆ ಸ್ಥಳೀಯ ಸಂಸ್ಥೆಯಲ್ಲಿ ಪ್ರಮುಖವಾಗಿ ಇರಬೇಕಾಗಿದ್ದ ನೈರ್ಮಲ್ಯ ನಿರೀಕ್ಷರ ಎಂಟು ಹುದ್ದೆಗಳು ಖಾಲಿ ಉಳಿದಿವೆ. ಅರ್ಜಿ ಸ್ವೀಕಾರ ಮತ್ತು ವಿಲೇವಾರಿಯನ್ನು ಆನ್‌ಲೈನ್‌ ಮಾಡಲಾಗಿದೆ. ಆದರೆ, ನಾಲ್ಕು ಕಂಪ್ಯೂಟರ್‌ ಆಪರೇಟರ್ಸ್‌ ಹುದ್ದೆಗಳು ಖಾಲಿ ಇವೆ.

ಪ್ರಭಾರ ಪೌರಾಯುಕ್ತ
ನಗರಸಭೆಗೆ ದಕ್ಷ ಪೌರಾಯುಕ್ತರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಸದ್ಯಕ್ಕೆ ಪ್ರಭಾರ ವಹಿಸಿಕೊಂಡ ಪೌರಾಯುಕ್ತರಿದ್ದಾರೆ. ಹುದ್ದೆಗಳಲ್ಲಿ ಅಧಿಕಾರಿಗಳಿಲ್ಲದೆ ನಗರದ ರಸ್ತೆ ಕಾಮಗಾರಿಗಳು, ತ್ಯಾಜ್ಯ ವಿಲೇವಾರಿ ಯೋಜನೆ ಸೇರಿದಂತೆ ಅನೇಕ ಕಾರ್ಯಗಳು ನನೆಗುದಿಗೆ ಬಿದ್ದಿವೆ.

*
ನಗರಸಭೆಗೆ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ಇಲ್ಲ ಎಂದು ಹೇಳುತ್ತಿದ್ದಾರೆ. ಕನಿಷ್ಠ ಅಧಿಕಾರಿಗಳಾದರೂ ವಾರ್ಡ್‌ ಸಮಸ್ಯೆಗಳನ್ನು ನೋಡುವುದಕ್ಕೆ ಬರುತ್ತಿಲ್ಲ. ಸ್ಥಳೀಯ ಶಾಸಕರಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
–ವಿರೂಪಾಕ್ಷಿ, ಆಫೀಸರ್ಸ್‌ ಕಾಲೋನಿ ನಿವಾಸಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು